ಕೆ.ಆರ್. ಪುರಂ, ಮಾ. ೧೯- ಕಲುಷಿತ ನೀರಿನಿಂದ ಆಮ್ಲಜನಕದ ಕೊರತೆಯಾಗಿ ಹಲಸೂರು ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನ ಮಹದೇವಪುರ ಕ್ಷೇತ್ರದ ದೇವರ ಬಿಸನಹಳ್ಳಿ ಕೆರೆಯಲ್ಲಿ ನೂರಾರು ಮೀನುಗಳು ಸಾವನ್ನಪ್ಪಿವೆ.
ಕಳೆದ ಕೆಲದಿನಗಳಿಂದ ದೇವರ ಬಿಸನಹಳ್ಳಿ ಕೆರೆಯಲ್ಲಿ ಸುತ್ತಮುತ್ತಲ ಕಾರ್ಖಾನೆಗಳು, ಅಪಾರ್ಟ್‌ಮೆಂಟ್ ತ್ಯಾಜ್ಯ ಸೇರಿದಂತೆ, ಕಲುಷಿತ ನೀರಿನಿಂದ ದೇವರ ಬಿಸನಹಳ್ಳಿ ಕೆರೆ ಸಂಪೂರ್ಣವಾಗಿ ಮಲಿನಗೊಂಡಿತ್ತು. ಈ ಮಲಿನಗೊಂಡ ನೀರಿನಲ್ಲಿ ಆಮ್ಲಜನಕದ ಕೊರತೆಯಿಂದ ನಿನ್ನೆ ರಾತ್ರಿಯಿಂದ ನೂರಾರು ಮೀನುಗಳು ಸಾಯುತ್ತಿದ್ದು, ದೇವರ ಬಿಸನಹಳ್ಳಿ ಕೆರೆ ಸಹ ವರ್ತೂರು, ಬೆಳ್ಳಂದೂರು ಕೆರೆಯಂತೆ ವಿಷಯುಕ್ತವಾಗಿ ಮಾರ್ಪಾಟಾಗುತ್ತಿದೆ.
ಇಲ್ಲಿನ ಸ್ಥಳೀಯ ಕಾರ್ಖಾನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳಿಂದ ಹೊರಬರುವ ತ್ಯಾಜ್ಯ ನೇರವಾಗಿ ಕೆರೆ ಸೇರುತ್ತಿರುವುದರಿಂದ ಕೆರೆಯ ನೀರು ಸಂಪೂರ್ಣವಾಗಿ ಕಲುಷಿತವಾಗಿದೆ. ಈ ಕಲುಷಿತ ನೀರಿನಿಂದ ಮೀನುಗಳು ಸಾವನ್ನಪ್ಪಿರುವುದನ್ನು ಕಂಡ ಕಾರ್ಖಾನೆಯ ಸಿಬ್ಬಂದಿಗಳು ಹಾಗೂ ಕೆಲ ಅಪಾರ್ಟ್‌ಮೆಂಟ್‌ನ ಕೆಲವರು ಸಾವನ್ನಪ್ಪಿರುವ ಮೀನುಗಳನ್ನು ಮಾಧ್ಯಮದವರ ಕಣ್ಣಿಗೆ ಬೀಳಬಾರದೆಂದು ವಿಲೇವಾರಿ ಮಾಡುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಮೀನುಗಳು ಸಾವನ್ನಪ್ಪುತ್ತಿರುವ ವಿಷಯ ತಿಳಿದ ಕಾರ್ಖಾನೆ ಸಿಬ್ಬಂದಿ ಸತ್ತಿರುವ ಮೀನುಗಳನ್ನು ಮುಂಜಾನೆಯೇ ತೆರವುಗೊಳಿಸುತ್ತಿದ್ದಾರೆ. ಇದರಿಂದ ಮೀನುಗಳು ಸಾಯುತ್ತಿರುವ ಘಟನೆ ಬೆಳಕಿಗೆ ಬಂದಿರಲಿಲ್ಲ. ಸ್ಥಳೀಯ ನಿವಾಸಿಗಳು ಇದನ್ನು ಗಮನಿಸಿ ಮಾಹಿತಿ ನೀಡಿದಾಗ ಈ ಮೀನುಗಳ ಸಾವಿನ ಸುದ್ದಿ ಹೊರಬಿದ್ದಿದೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ವರ್ತೂರು ಮತ್ತು ಬೆಳ್ಳಂದೂರು ಕೆರೆಯಂತಾಗುವ ದೇವರ ಬಿಸನಹಳ್ಳಿ ಕೆರೆಯನ್ನು ಉಳಿಸಿ ಅಭಿವೃದ್ಧಿಪಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕರ್ನಾಟಕ