ಬೆಂಗಳೂರು, ಮಾ. ೧೯: ಬೆಳ್ಳಂಬೆಳಿಗ್ಗೆ ಬೆಂಗಳೂರಿನ ಕತ್ರಿಗುಪ್ಪೆ ಬಳಿ ವಿವೇಕಾನಂದನಗರದ ಕೆಇಬಿ ಬಡಾವಣೆಯಲ್ಲಿ ಸಿಲಿಂಡರ್ ಫಿಲ್ಲಿಂಗ್ ಮಾಡುತ್ತಿದ್ದ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಂಗಡಿ ಸಮೀಪ ನಿಲ್ಲಸಿದ್ದ ಬೈಕ್, ಕಾರುಗಳು ಸುಟ್ಟು ಕರಕಲಾಗಿ, ಅಪಾರ ನಷ್ಟು ಉಂಟಾಗಿದೆ.
ಕಳೆದೆರಡು ತಿಂಗಳಿಂದ ವಿವೇಕಾನಂದನಗರದ ಮಹಾಲಕ್ಷ್ಮಿ ಗ್ಯಾಸ್ ಏಜೆನ್ಸಿ ಎಂಬ ಹೆಸರಿನಲ್ಲಿ ಗ್ಯಾಸ್ ಫಿಲ್ಲಿಂಗ್ ಮಾಡಲಾಗುತ್ತಿದ್ದು, ೧೪ ಸಿಲಿಂಡರ್’ಗಳು ಒಂದಾದ ಮೇಲೊಂದು ಸ್ಫೋಟಗೊಂಡಿವೆ. ಬೆಳಗ್ಗಿನ ಜಾವ ಕೇಳಿಬಂದ ಭಾರಿ ಸ್ಫೋಟದ ಶಬ್ಬಕ್ಕೆ ಎಚ್ಚೆತ್ತ ಸ್ಥಳೀಯರು ಗಾಬರಿಗೊಂಡಿದ್ದು, ತಕ್ಷಣ ಅಗ್ನಿಶಾಮಕದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಅಂಗಡಿ ಸಮೀಪದ ಒಂದೆರಡು ಮನೆಗಳ ಗಾಜುಗಳು ಪುಡಿಪುಡಿಯಾಗಿವೆ. ಕೆಲವು ಮನೆಗಳಿಗೂ ಹಾನಿಯಾಗಿವೆ.
ಸ್ಥಳಕ್ಕೆ ಬಂದ ೩ ಅಗ್ನಿಶಾಮಕ ದಳ ಸಿಬ್ಬದಿ ಉರಿಯುತ್ತಿದ್ದ ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅದರೆ ಸಿಲಿಂಡರ್ ಸ್ಫೋಟದ ತೀವ್ರತೆಗೆ ಅಂಗಡಿ ಮುಂದೆ ನಿಲ್ಲಿಸಿದ್ದ ಒಂದು ಬೈಕ್, ಎರಡು ಕಾರು ಸುಟ್ಟು ಕರಕಲಾಗಿವೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.