ಕರ್ನಾಟಕ

ಬಿಜೆಪಿ ಕಾರ್ಯಕರ್ತ ರಾಜು ಕೊಲೆ ಪ್ರಕರಣ: ಹಂತಕರ ಸುಳಿವು ನೀಡಿದವರಿಗೆ ಬಹುಮಾನ

Pinterest LinkedIn Tumblr

KRAJUU

ಮೈಸೂರು: ಸಾಕಷ್ಟು ಗಲಭೆ ಹಾಗೂ ಸುದ್ದಿಗೆ ಗ್ರಾಸವಾಗಿದ್ದ ಬಿಜೆಪಿ ಕಾರ್ಯಕರ್ತ ರಾಜು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಷ್ಟೇ ತನಿಖೆ ನಡೆಸಿದರೂ ಈವರೆಗೂ ಯಾವುದೇ ಸುಳಿವು ದೊರಕದ ಹಿನ್ನೆಲೆಯಲ್ಲಿ ಇದೀಗ ಹಂತಕರ ಸುಳಿವು ನೀಡಿದವರಿಗೆ ಸೂಕ್ತ ಬಹುಮಾನ ನೀಡುವುದಾಗಿ ಪೊಲೀಸ್ ಇಲಾಖೆ ಶುಕ್ರವಾರ ಘೋಷಣೆ ಮಾಡಿದೆ.

ರಾಜು ಹತ್ಯೆ ನಡೆದ 6 ದಿನಗಳು ಕಳೆದರೂ ಈ ವರೆಗೂ ಯಾವುದೇ ಸುಳಿವುಗಳು ಪತ್ತೆಯಾಗಿಲ್ಲ. ಶಂಕಿತ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದರು ಸಹಿತ ಹತ್ಯೆಯ ರಹಸ್ಯ ಭೇದಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಹಂತಕರ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ ಎಂದು ತಿಳಿದುಬಂದಿದೆ.

ರಾಜು ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಈಗಾಗಲೇ ಮಾ.22 ರಂದು ಪ್ರಕರಣಕ್ಕೆ ಸಂಬಂಧಿಸಿ ವಿಧಾನಸೌಧವನ್ನು ಮುತ್ತಿಗೆ ಹಾಕಲು ನಿರ್ಧಾರ ಕೈಗೊಂಡಿದೆ. ಹೀಗಾಗಿ ಪ್ರಕರಣವೀಗ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಹಂತಕರನ್ನು ಹಿಡಿಯಲು ಇಲಾಖೆ ಸಾಕಷ್ಟು ಹರಸಾಹಸ ಪಡುತ್ತಿದೆ ಎನ್ನಲಾಗಿದೆ.

ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಸಾರ್ವಜನಿಕರು ಆರೋಪಿಗಳ ಕುರಿತಂತೆ ಅಥವಾ ಅವರು ಬಳಸಿದೆ ವಾಹನಗಳ ಬಗ್ಗೆ ಮಾಹಿತಿ ನೀಡಬಹುದಾಗಿದೆ. ಸಾರ್ವಜನಿಕರು ನೀಡಿದ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಹೇಳಿರುವ ಪೊಲೀಸರು, ಮಾಹಿತಿ ನೀಡಿದ ವ್ಯಕ್ತಿಯ ಸುಳಿವನ್ನು ಎಲ್ಲಿಯೂ ಬಿಟ್ಟುಕೊಡುವುದಿಲ್ಲ ಎಂದು ತಿಳಿಸಿದೆ.

ಮಾಹಿತಿ ನೀಡುವವರು ಪೊಲೀಸ್ ಅಧಿಕಾರಿಯನ್ನು ಖುದ್ದಾಗಿ ಭೇಟಿಯಾಗಿ ಅಥವಾ 948080 2201 ಮೊಬೈಲ್ ಸಂಖ್ಯೆ ಮೂಲಕ ಸಂಪರ್ಕಿಸಬಹುದು ಅಲ್ಲದೆ, 9481100100 ಸಂಖ್ಯೆಗೆ ಎಸ್ಎಂಎಸ್ ಅಥವಾ ವಾಟ್ಸ್ ಅಪ್ ಮೂಲಕ ಸಂದೇಶ ಕಳುಹಿಸಬಹುದಾಗಿದೆ. ಮಾಹಿತಿ ನೀಡಿದವರಿಗೆ ಇಲಾಖೆಯ ವತಿಯಿಂದ ಸೂಕ್ತ ರೀತಿಯ ಬಹುಮಾನವನ್ನು ನೀಡಲಾಗುತ್ತದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Write A Comment