ಬೆಂಗಳೂರು, ಮಾ. ೧೫- ಸಂಸದ ಹಾಗೂ ಎಇಎಂಎಂ ಪಾರ್ಟಿಯ ಅಧ್ಯಕ್ಷ ಅಸಾದುದ್ದೀನ್ ಓವೈಸಿ `ಭಾರತ್ ಮಾತಾಕಿ ಜೈ’ ಎಂಬ ಘೋಷಣೆ ಕೂಗುವುದಿಲ್ಲ ಎಂದು ಹೇಳಿರುವುದನ್ನು ರಾಜ್ಯದ ವಾರ್ತಾ, ಮೂಲಭೂತ ಸೌಕರ್ಯ ಹಾಗೂ ಹಜ್ ರಾಜ್ಯ ಸಚಿವ ರೋಷನ್ ಬೇಗ್ ಖಂಡಿಸಿದ್ದಾರೆ.
ಪ್ರದೇಶ ಕಾಂಗ್ರೆಸ್ ಕಚೇರಿಗಿಂದು ಭೇಟಿ ನೀಡಿ ಕಾರ್ಯಕರ್ತರ ಅಹವಾಲುಗಳನ್ನು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮುಸಲ್ಮಾನರು, ಈ ದೇಶದ ವಾಸಿಗಳು. ದೇಶ ಮೊದಲು. ಹಾಗಾಗಿ ಓವೈಸಿ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.
ಭಾರತೀಯರು ಯಾರೇ ಇರಲಿ ಭಾರತ್ ಮಾತಾಕಿ ಜೈ ಎನ್ನುವುದು ತಪ್ಪೇನಿಲ್ಲ. ಓವೈಸಿ ಹೇಳಿಕೆ ಸರಿಯಲ್ಲ ಎಂದರು.
ಮೈಸೂರಿನಲ್ಲಿ ಹಿಂದು ಸಂಘಟನೆ ಕಾರ್ಯಕರ್ತ ರಾಜು ಹತ್ಯೆ ಖಂಡನೀಯ. ಈ ಬಗ್ಗೆ ಗೃಹ ಸಚಿವರ ಜೊತೆ ಮಾತನಾಡಿದ್ದೇನೆ. ತಪ್ಪಿತಸ್ಥರು ಯಾರೇ ಇರಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಾಣ ಎಲ್ಲರದೂ ಒಂದೇ. ಯಾರ ಜೀವ ಹೋಗಬಾರದು. ಈ ಕೊಲೆ ಪ್ರಕರಣದಲ್ಲಿ ಯಾವುದೇ ಸಂಘಟನೆ ಭಾಗಿಯಾಗಿರಲಿ. ಅದರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.
ವಕ್ಫ್ ಆಸ್ತಿ ಅತಿಕ್ರಮಣದಲ್ಲಿ ನಮ್ಮ ಪಾತ್ರವೇನೂ ಇಲ್ಲ. ಒಂದು ಇಂಚು ವಕ್ಫ್ ಆಸ್ತಿಯನ್ನು ತಾನು ಕಬಳಿಸಿಲ್ಲ ಎಂದವರು ಸ್ಪಷ್ಟಪಡಿಸಿದರು.
ವಕ್ಫ್ ಮಸೀದಿ, ದೇವಸ್ಥಾನ ಸೇರಿದಂತೆ ಯಾವುದೇ ಸರ್ಕಾರಿ ಆಸ್ತಿಯನ್ನು ಒತ್ತುವರಿ ಮಾಡುವುದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಸಚಿವ ಖಮರುಲ್ಲಾ ಇಸ್ಲಾಂ ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಈಗಾಗಲೇ ಹೇಳಿಕೆ ನೀಡಿದ್ದಾರೆ. ಹಾಗಾಗಿ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದು ಸರಿಯಲ್ಲ ಎಂದು ಸಚಿವ ರೋಷನ್ ಬೇಗ್ ಹೇಳಿದರು.
ತಪ್ಪೇನಿಲ್ಲ
ಭ್ರಷ್ಟಾಚಾರವನ್ನು ತಡೆಯಲು ಬೇರೆ ರಾಜ್ಯಗಳಲ್ಲಿ ಭ್ರಷ್ಟಾಚಾರ ನಿಗ್ರಹದಳಗಳನ್ನು ಈಗಾಗಲೇ ರಚಿಸಲಾಗಿದೆ. ರಾಜ್ಯದಲ್ಲಿ ಈ ನಿಗ್ರಹದಳ ರಚನೆ ಮಾಡಿರುವುದಕ್ಕೆ ಬಿಜೆಪಿಯವರು ತಪ್ಪು ಹುಡುಕುವುದು ಸರಿಯಲ್ಲ ಎಂದರು.
ಈ ಭ್ರಷ್ಟಾಚಾರ ನಿಗ್ರಹದಳ ರಚನೆಯಿಂದ ಲೋಕಾಯುಕ್ತಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಅವರು ಹೇಳಿದರು.