ಕರ್ನಾಟಕ

ಲೋಕ ಶವ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆದ ಸಿದ್ದು ಸುರೇಶ್ ಟೀಕೆ

Pinterest LinkedIn Tumblr

loಬೆಂಗಳೂರು, ಮಾ. ೧೫- ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸುವ ಆದೇಶದ ಮೂಲಕ ಸರ್ಕಾರ ಲೋಕಾಯುಕ್ತ ಶವಪೆಟ್ಟಿಗೆಗೆ ಕೊನೆ ಮೊಳೆ ಹೊಡೆದಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ಸುರೇಶ್ ಕುಮಾರ್ ಟೀಕಿಸಿದ್ದಾರೆ.

ವಿಕಾಸಸೌಧದಲ್ಲಿಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ರವರನ್ನು ಬಿಜೆಪಿ ನಿಯೋಗ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸನಬದ್ಧವಾದ ಲೋಕಾಯುಕ್ತ ಸಂಸ್ಥೆಯ ಚಟುವಟಿಕೆಗಳಿಗೆ ಸರ್ಕಾರ ಭ್ರಷ್ಟಾಚಾರ ವಿರೋಧಿ ದಳ ಸ್ಥಾಪನೆಯ ಆದೇಶದ ಮೂಲಕ ಚರಮಗೀತೆ ಹಾಡಿದೆ ಎಂದು ಕಿಡಿ ಕಾರಿದರು.

ಶಾಸನಬದ್ಧವಾದ ಲೋಕಾಯುಕ್ತ ಸಂಸ್ಥೆಯನ್ನು ಒಂದು ಸರ್ಕಾರಿ ಆಜ್ಞೆಯ ಮೂಲಕ ಮೂಲೆಗುಂಪು ಮಾಡುವ ಪ್ರಯತ್ನವನ್ನು ಸರ್ಕಾರ ನ‌ಡೆಸಿದೆ ಎಂದರು.

ಲೋಕಾಯುಕ್ತ ಸಂಸ್ಥೆಯನ್ನು ಮೂಲೆಗುಂಪು ಮಾಡಿ ಹೊಸ ಭ್ರಷ್ಟಾಚಾರ ವಿರೋಧಿ ದಳ ಸ್ಥಾಪಿಸುವ ಸರ್ಕಾರದ ತೀರ್ಮಾನ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ಹೊಂದಿರುವ ಮೃದು ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದರು.

ಭ್ರಷ್ಟಾಚಾರ ನಿಗ್ರಹಿಸುವ ಲೋಕಾಯುಕ್ತ ಸಂಸ್ಥೆಯ ಬಗ್ಗೆ ಸರ್ಕಾರಕ್ಕಿರುವ ತಿರಸ್ಕಾರ ಹಾಗೂ ದ್ವೇಷ ಈ ಆದೇಶದಿಂದ ಸ್ಪಷ್ಟವಾಗಿ ವ್ಯಕ್ತವಾಗಿದೆ ಎಂದು ಅವರು ಹೇಳಿದರು.

ಸರ್ಕಾರದ ಈ ತೀರ್ಮಾನದ ವಿರುದ್ಧ ಬಿಜೆಪಿ ಸದನದ ಒಳಗೂ ಹೊರಗೂ ಹೋರಾಟ ನಡೆಸಲಿದೆ ಎಂದು ಸುರೇಶ್ ಕುಮಾರ್ ಹೇಳಿದರು.

Write A Comment