ಕರ್ನಾಟಕ

18 ವಿದೇಶಿ ಜೋಡಿಗಳ ವಿವಾಹ

Pinterest LinkedIn Tumblr

marrage

ಬೆಂಗಳೂರು: ಇರಾನ್‌, ತೈವಾನ್‌, ಬ್ರೆಜಿಲ್‌ ಸೇರಿದಂತೆ ಎಂಟು ದೇಶಗಳ 18 ಜೋಡಿಗಳ ಮದುವೆ ನಗರದ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಮದಲ್ಲಿ ಭಾನುವಾರ ವೈದಿಕ ಪದ್ಧತಿಗೆ ಅನುಸಾರವಾಗಿ ನಡೆಯಿತು.

ವೇದ ಆಗಮ ಸಂಸ್ಕೃತ ಮಹಾ ಪಾಠಶಾಲಾದ ಪಂಡಿತರ ನೇತೃತ್ವದಲ್ಲಿ ಆಶ್ರಮದ ಯಜ್ಞಶಾಲೆಯಲ್ಲಿ ವಿವಾಹದ ವಿಧಿ–ವಿಧಾನಗಳು ನೆರವೇರಿದವು. ನವ ವಿವಾಹಿತರಲ್ಲಿ ಇರಾನ್‌ನ ವಕೀಲರಾದ ವಸ್ಫಿ ಸಿನಲ್‌ ಮತ್ತು ರೋಜಿನ್‌ ಅಸಾದಿ ಜೋಡಿಯೂ ಸೇರಿತ್ತು.

‘ಶ್ರೀ ಶ್ರೀ ರವಿಶಂಕರ ಗುರೂಜಿ ಅವರಿಂದ ಆಶೀರ್ವಾದ ಪಡೆಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಬೇಕು ಎನ್ನುವುದು ನಮ್ಮ ಹಂಬಲವಾಗಿತ್ತು. ಮಂತ್ರಘೋಷಗಳ ಮಧ್ಯೆ ನಡೆದ ಈ ಮದುವೆ ಅವಿಸ್ಮರಣೀಯ ಆನಂದ ಉಂಟು ಮಾಡಿದೆ’ ಎಂದು ಸಿನಲ್‌ ಹೇಳಿದರು.

‘ಈ ನೆಲ ಅತ್ಯಂತ ಪವಿತ್ರವಾಗಿದೆ. ನಮ್ಮ ಮದುವೆಗೆ ಇದಕ್ಕಿಂತ ಉತ್ತಮ ಸ್ಥಳ ಮತ್ತೆ ಯಾವುದು ಸಿಗಲು ಸಾಧ್ಯ’ ಎಂದು ಅವರು ಕೇಳಿದರು.

ನವದೆಹಲಿಯಲ್ಲಿ ಮಾ. 11ರಿಂದ 13ರವರೆಗೆ ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥೆ ಅಂತರರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಏರ್ಪಡಿಸಿದೆ. ಆ ಉತ್ಸವಕ್ಕೆ ಜಗತ್ತಿನ ವಿವಿಧ ಭಾಗಗಳಿಂದ ಪ್ರತಿನಿಧಿಗಳು ಬರುತ್ತಿದ್ದಾರೆ. ಮದುವೆಯಾದ ಹೊಸ ಜೋಡಿಗಳು ಸಹ ಈ ಉತ್ಸವಕ್ಕಾಗಿ ಬಂದವರು. ಇರಾನ್‌, ತೈವಾನ್‌, ಬ್ರೆಜಿಲ್‌, ಅಮೆರಿಕ, ಪೋಲೆಂಡ್‌, ರಷ್ಯಾ ಅರ್ಜೆಂಟಿನಾ ಹಾಗೂ ಭಾರತದ ಒಲಿದ ಮನಸ್ಸುಗಳು ಇಲ್ಲಿ ಒಂದಾದವು.

ಅರ್ಜೆಂಟಿನಾದ ಜಾರ್ಜ್‌ ಫ್ರಾನ್ಸಿಸ್ಕೊ ಕ್ಯಾಸರೆಟ್ಟೊ ಮತ್ತು ಕಾರ್ಮೆನ್‌ ರೋಸಾರಿಯೊ ಸೆಂಟಿಯಾಗೊ, ಬ್ರೆಜಿಲ್‌ ದೇಶದ ಎಡ್ವರ್ಡೊ ಸೇಲ್ಸ್‌ ಮೊಸಿರ್‌ ಡೆ ವ್ಯಾಸ್ಕೊನ್ಸೆಲಾಸ್‌ ಮತ್ತು ಕ್ರಿಸ್ಟಿಯಾನೆ ಡೆ ಓಲಿವರ್‌ ಸ್ಯಾಂಟನಾ ಜೋಡಿಗಳು 20 ವರ್ಷಗಳ ಹಿಂದೆಯೇ ಮದುವೆ ಆಗಿದ್ದರೂ ವೇದ ಮಂತ್ರ ಘೋಷದ ಮಧ್ಯೆ ಸಪ್ತಪದಿ ತುಳಿದರು. ‘ನಮ್ಮ ಸಂಬಂಧವನ್ನು ಈ ಎರಡನೇ ಮದುವೆ ಮತ್ತಷ್ಟು ಗಟ್ಟಿಗೊಳಿಸಿದೆ’ ಎಂದು ಹರ್ಷದಿಂದ ಹೇಳಿದರು.

Write A Comment