ಕರ್ನಾಟಕ

ಮತದಾರರ ಓಲೈಕೆಗೆ ಬಗೆ ಬಗೆ ತಂತ್ರ ಸಾಹಿತ್ಯ ಪರಿಷತ್ ಚುನಾವಣೆ

Pinterest LinkedIn Tumblr

Kasapa-buildingಬೆಂಗಳೂರು, ಜ. ೨೨- ಕನ್ನಡ‌ ಸಾರಸ್ವತ ಲೋಕದ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಫೆ.28ರಂದು ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳು ಈಗಾಗಲೇ ಸದ್ದಿಲ್ಲದೆ ಮತದಾರರನ್ನು ಓಲೈಸಿಕೊಳ್ಳುವ ತಂತ್ರವನ್ನು ಅನುಸರಿಸಲಾರಂಭಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷಗಳು ತುಂಬಿದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿಯೇ ಈ ಬಾರಿ ಅಧ್ಯಕ್ಷ ಸ್ಥಾನ ಗಿಟ್ಟಿಸಲು ಅಭ್ಯರ್ಥಿಗಳು ಶತ ಪ್ರಯತ್ನ ನಡೆಸಲಾರಂಭಿಸಿದ್ದಾರೆ.

ಈ ಬಾರಿಯ ಅಧ್ಯಕ್ಷ ಸ್ಥಾನಕ್ಕೆ ಹಿರಿಯ ನಿವೃತ್ತ ಐ‌ಎ‌‌ಎಸ್ ಅಧಿಕಾರಿ ಡಾ. ಮನು ಬಳೀಗಾರ್, ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಕಟ್ಟುವ ಕೈಕಂರ್ಯದಲ್ಲಿ ತೊಡಗಿಸಿಕೊಂಡಿರುವ ಪ್ರೊ. ಜಯಪ್ರಕಾಶ ಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿ ಪಟೇಲ ಪಾಂಡು ಅವರು ಸೇರಿದಂತೆ ಇನ್ನೂ ಕೆಲವರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.

ಈ ಬಾರಿಯ ಅಧ್ಯಕ್ಷ ಸ್ಥಾನಕ್ಕೆ ಮನು ಬಳಿಗಾರ್, ಪ್ರೊ. ಜಯಪ್ರಕಾಶ ಗೌಡ ಅವರ ನಡುವೆ ನೇರ ಪೈಪೋಟಿಯಿದ್ದು, ಇಬ್ಬರು ಚುನಾವಣೆ ದಿನಾಂಕ ಪ್ರಕಟವಾಗುವ ಮೊದಲೇ ರಾಜ್ಯಾದ್ಯಂತ ಸಂಚರಿಸಿ ಪ್ರಚಾರ ಕಾರ್ಯವನ್ನು ಕೈಗೊಂಡಿರುವುದು ಗುಟ್ಟಾಗಿ ಉಳಿದಿಲ್ಲ.

ಐ‌ಎ‌ಎಸ್ ಅಧಿಕಾರಿಯಾಗಿದ್ದುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಡಾ. ಮನುಬಳಿಗಾರ್ ಅಧಿಕಾರಿಯಾಗಿದ್ದುಕೊಂಡೆ ಕನ್ನಡ ಸಾಹಿತ್ಯದ ಒಲವು ಬೆಳೆಸಿಕೊಂಡೇ ಬಂದವರು ಹಾಗೂ ಸಕ್ರಿಯವಾಗಿ ಕನ್ನಡ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ಕಳೆದ ಹಲವು ತಿಂಗಳಿನಿಂದಲೇ ಸದ್ದಿಲ್ಲದೆ ಪ್ರಚಾರ ತಂತ್ರವನ್ನು ನಡೆಸಿಕೊಂಡೆ ಬಂದಿದ್ದಾರೆ.

ಕನ್ನಡಪರ ಚಟುವಟಿಕೆಗಳಲ್ಲಿ ಪೊ. ಜಯಪ್ರಕಾಶ್ ಗೌಡ ಕೂಡ ಹಿಂದೆ ಬಿದ್ದಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಕನ್ನಡ ಸಂಘವನ್ನು ಕಟ್ಟಿ ಕನ್ನಡ ಭಾಷೆಯನ್ನು ಬೆಳೆಸಿಕೊಂಡು ಬಂದವರು. ಕಸಾಪದೊಂದಿಗೆ ನಿಕಟ ಬಾಂಧವ್ಯವನ್ನಿಟ್ಟುಕೊಂಡು ಕನ್ನಡ ಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಕಸಾಪ ಗೌರವ ಕಾರ್ಯದರ್ಶಿಯಾಗಿದ್ದುಕೊಂಡು ಸೇವೆ ಸಲ್ಲಿಸಿರುವ ಸಂಗಮೇಶ ಬಾದವಡಗಿ ಹಾಗೂ ಸರ್ಕಾರಿ ನೌಕರರ ಸಂಘದ ಪಟೇಲ್ ಪಾಂಡು ಅಲ್ಲದೆ ಕನ್ನಡಪರ ಹೋರಾಟಗಾರ ಆರ್.ಎಸ್.ಎನ್.ಗೌಡ ಅವರು ಕೂಡ ಅಧ್ಯಕ್ಷ ಸ್ಥಾನ ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಈ ತಿಂಗಳ 25ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದು, ಒಟ್ಟು 17 ಮಂದಿ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಹಣಾಹಣಿ ನಡೆದಿದ್ದು, ಸರ್ಕಾರಿ ನೌಕರರಾಗಿದ್ದರೂ ಕನ್ನಡಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಪಾಲ್ಗೊಂಡು ಕನ್ನಡಕ್ಕೆ ಅನ್ಯಾಯ ಎದುರಾದಗಲೆಲ್ಲಾ ಹೋರಾಟ ನಡೆಸಿಕೊಂಡು ಬಂದಿರುವ ಕೆ.ಮಾಯಣ್ಣ ಈ ಬಾರಿಯ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಹಾಗೆಯೇ ಹಲವು ದಶಕಗಳಿಂದ ಕನ್ನಡಪರ ಹೋರಾಟ ನಡೆಸಿಕೊಂಡು ಬಂದಿರುವ ನೇ.ಭಾ. ರಾಮಲಿಂಗಶೆಟ್ಟಿ ಅವರು ನಗರ ಅಧ್ಯಕ್ಷ ಸ್ಥಾನಕ್ಕೆ ಕಣ್ಣಿಟ್ಟಿದ್ದಾರೆ.

ಕನ್ನಡ ಕೈಂಕರ್ಯವನ್ನು ನಡೆಸಿಕೊಂಡು ಬಂದಿರುವ ಸಾಮಾಜಿಕ ಕಾರ್ಯಕರ್ತ ಎಂ. ಪ್ರಕಾಶ ಮೂರ್ತಿ, ಕನ್ನಡ ವಚನ ಸಾಹಿತ್ಯದ ಬಗ್ಗೆ ಜಾಗೃತಿ ಮೂಡಿಸಿರುವ ಪಿನಾಕಪಾನಿ ಅವರು ಕೂಡ ನಗರ ಅಧ್ಯಕ್ಷ ಸ್ಥಾನ ಬಯಸಿದ್ದಾರೆ.

ಒಟ್ಟು 8 ಮಂದಿ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಮಾಯಣ್ಣ ಹಾಗೂ ಎಂ. ಪ್ರಕಾಶ ಮೂರ್ತಿ ಅವರ ನಡುವೆ ನೇರ ಪೈಪೋಟಿ ನಡೆದಿದೆ. ಈ ಬಾರಿಯ ಕೇಂದ್ರ ಅಧ್ಯಕ್ಷ ಸ್ಥಾನ ಮತ್ತು ನಗರ ಅಧ್ಯಕ್ಷ ಸ್ಥಾನಕ್ಕೆ ಅಧ್ಯಕ್ಷರುಗಳು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಪರಿಷತ್ ಘಟಕಗಳ ಅಧ್ಯಕ್ಷರುಗಳನ್ನು ಒಟ್ಟು 1 ಲಕ್ಷದ 89 ಸಾವಿರದ 355 ಮಂದಿ ಮತದಾರರು ಆಯ್ಕೆ ಮಾಡಲಿದ್ದಾರೆ.

Write A Comment