ಹೈದರಾಬಾದ್: ಹೈದರಾಬಾದ್ ವಿಶ್ವ ವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಅವರ ಆತ್ಮಹತ್ಯೆ ಪ್ರಕರಣ ತೀವ್ರ ಕೋಲಾಹಲ ಉಂಟು ಮಾಡಿರುವುದರ ನಡುವೆಯೇ ಅವರು ಬರೆದಿಟ್ಟಿರುವ ಕೊನೆಯ ಪತ್ರದಲ್ಲಿ ಒಂದು ಪೂರ್ತಿ ಪ್ಯಾರಾವನ್ನು ಹೊಡೆದುಹಾಕಿರುವುದು ಕಂಡು ಬಂದಿದ್ದು, ಈ ಕೆಲಸವನ್ನು ಮಾಡಿದವರು ಯಾರು ಎಂದು ತಜ್ಞರು ಇದೀಗ ತನಿಖೆ ಆರಂಭಿಸಿದ್ದಾರೆ.
ಹೊಡೆದು ಹಾಕಲಾಗಿರುವ ಪ್ಯಾರಾದಲ್ಲಿ ಏನು ಬರೆಯಲಾಗಿತ್ತು ಮತ್ತು ಅದನ್ನು ಹೊಡೆದು ಹಾಕಿದ್ದು ಏಕೆ ಎಂಬುದು ನಿಗೂಢವಾಗಿದೆ. ರೋಹಿತ್ ನೇಣುಹಾಕಿಕೊಂಡಿದ್ದ ಹೈದರಾಬಾದ್ ಸೆಂಟ್ರಲ್ ವಿಶ್ವವಿದ್ಯಾಲಯದ ವಸತಿ ನಿಲಯದ ಕೊಠಡಿಯಿಂದ ಈ ಪತ್ರವನ್ನು ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಲಾಗಿದೆ.
ಹೊಡೆದು ಹಾಕಲಾಗಿರುವ ಪ್ಯಾರಾದ ಕೆಳಭಾಗದಲ್ಲಿ ‘ನಾನೇ ಈ ಪದಗಳನ್ನು ಹೊಡೆದುಹಾಕಿದ್ದೇನೆ’ ಎಂಬುದಾಗಿ ಬರೆಯಲಾಗಿದ್ದು ಕೆಳಗೆ ರೋಹಿತ್ ಸಹಿ ಕಾಣುತ್ತಿರುವುದರಿಂದ ರೋಹಿತ್ ಅವರೇ ಈ ಪ್ಯಾರಾವನ್ನು ಹೊಡೆದುಹಾಕಿರುವ ಸಾಧ್ಯತೆ ಇದೆ. ಆದರೆ ಹೊಡೆದು ಹಾಕಿದ್ದೇಕೆ, ಅದರಲ್ಲಿ ಏನು ಬರೆಯಲಾಗಿತ್ತು ಎಂಬುದು ನಿಗೂಢವಾಗಿದೆ. ತಮ್ಮದೇ ಸಂಘಟನೆಯಾದ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್ ಬಗ್ಗೆ ರೋಹಿತ್ಗೆ ಭ್ರಮನಿರಸನವಾಗಿದ್ದ ಬಗ್ಗೆ ಈ ಪ್ಯಾರಾದಲ್ಲಿ ಇದ್ದಿರಬಹುದು ಎಂಬ ಊಹಾಪೋಹಗಳು ಹರಡಿವೆ. ಏನಿದ್ದರೂ ವಿಧಿವಿಜ್ಞಾನ ಪ್ರಯೋಗಾಲಯದಿಂದ ವರದಿ ಬರಲು ಕೆಲವು ದಿನಗಳು ಬೇಕಾಗಬಹುದು, ಬಂದ ಬಳಿಕವಷ್ಟೇ ಈ ನಿಗೂಢ ಒಡೆಯಬಹುದು ಎಂದು ವರದಿಗಳು ಹೇಳಿವೆ.