ಕರ್ನಾಟಕ

ಸಿದ್ದು ಆಪ್ತ ಬಳಗದಲ್ಲಿ ಬಿರುಕು : ಎಚ್.ಎಂ.ರೇವಣ್ಣ ಖರ್ಗೆ ಪಾಳಯಕ್ಕೆ

Pinterest LinkedIn Tumblr

sidduಬೆಂಗಳೂರು, ಜ.18- ಸಿದ್ದು ಆಪ್ತಬಳಗದಲ್ಲಿ  ಮತ್ತೆ ಬಿರುಕು ಮೂಡಿದೆ. ಉಪಚುನಾವಣೆ ಟಿಕೆಟ್ ಪಡೆಯಲು ಸಿದ್ದು ಬಳಗದ ಪರಮಾಪ್ತರಾದ ಎಚ್.ಎಂ.ರೇವಣ್ಣ ಅವರು ಖರ್ಗೆ ಪಾಳಯಕ್ಕೆ ಜಿಗಿದಿದ್ದಾರೆ. ಕಳೆದ 2013ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿತ್ತು. ನಂತರ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದರು. ಸಿದ್ದು ಸಂಪುಟ ಸೇರಲು ರೇವಣ್ಣ ಅವರಿಗೆ ಸಾಧ್ಯವಾಗಿಲ್ಲ. ಸಿದ್ದರಾಮಯ್ಯನವರೇ    ಮುಖ್ಯಮಂತ್ರಿಯಾಗಿರುವುದರಿಂದ ಆ ಸಮುದಾಯದವರ್ಯಾ ರೂ ಸಂಪುಟದಲ್ಲಿ ಇಲ್ಲ. ಇದೇ ಧೋರಣೆ ಮುಂದುವರೆದರೆ ನಮಗೆ ಮತ್ಯಾವ ಅಧಿಕಾರ ಸಿಗುವ ಸಾಧ್ಯತೆ ಇಲ್ಲ ಎಂದು ಸಿದ್ದು ಪರಮಾಪ್ತರು ಅಸಮಾಧಾನಗೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೈರತಿಸುರೇಶ್ ಅವರಿಗೆ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಟಿಕೆಟ್ ನೀಡಲು ಭಾರೀ ಉತ್ಸುಕರಾಗಿದ್ದಾರೆ.  ಕಳೆದ 6 ತಿಂಗಳ ಹಿಂದೆಯೇ ಬೈರತಿ ಸುರೇಶ್ ಅವರಿಗೆ ಕ್ಷೇತ್ರದಲ್ಲಿ ಕೆಲಸ ಮಾಡುವ ಸೂಚನೆ ನೀಡಿ ನಮ್ಮನ್ನು ಕಡೆಗಣಿಸಿದ್ದಾರೆ ಎಂದು ಅತೃಪ್ತಿಗೊಂಡ ರೇವಣ್ಣ ಬಣ ಕಾಂಗ್ರೆಸ್ ಮುಖಂಡ, ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆ.ಆರ್.ಪುರಂನವರ ಪ್ರಭಾವ ಹೆಚ್ಚಾಗಿದೆ. ಅವರೇ ಎಲ್ಲಾ ಕಡೆ ಏಕಿರಬೇಕು, ಕಳೆದ ಬಾರಿ ಟಿಕೆಟ್ ದೊರೆತಿದ್ದರೆ ನನಗೆ ಗೆಲುವು ಸುಲಭವಾಗಿತ್ತು. ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ನನಗೆ ಅವಕಾಶ ದೊರೆಯಲಿಲ್ಲ. ಈಗ ನನಗೆ ಅವಕಾಶ ನೀಡಬೇಕು. ಅವಕಾಶ ಸಿಕ್ಕರೆ  ಗೆಲ್ಲುವ ಸಾಮರ್ಥ್ಯವಿದೆ ಎಂದು ಖರ್ಗೆ ಮುಂದೆ ಪ್ರತಿಪಾದಿಸಿದ್ದಾರೆ. ಕಳೆದ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯಾದ ಇಕ್ಬಾಲ್ ಅಹಮ್ಮದ್ ಸರಡಗಿ ಅವರ ಸೋಲಿಗೆ ಬೈರತಿ ಸುರೇಶ್ ಅವರು ಕಾರಣರಾಗಿದ್ದರು. ಮತ್ತೆ ಅವರಿಗೆ ಟಿಕೆಟ್ ನೀಡುವುದು ಎಷ್ಟು ಸಮಂಜಸ ಎಂದು ಅತೃಪ್ತು ವ್ಯಕ್ತಪಡಿಸಿದ್ದಾರೆ. ಈ ನಡುವೆ ಸಿದ್ದು ಬಣದಲ್ಲಿರುವ ಮಾಜಿ ಮೇಯರ್ ರಾಮಚಂದ್ರಪ್ಪ ಅವರು ಕೂಡ ಆಕಾಂಕ್ಷಿಯಾಗಿದ್ದು, ಅವಕಾಶ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಅಲ್ಪಸಂಖ್ಯಾತ ಮುಖಂಡರಾದ ರೋಷನ್‌ಬೇಗ್, ರಿಜ್ವಾನ್, ನಜೀರ್ ಅಹಮ್ಮದ್ ಸೇರಿದಂತೆ ಹಲವರು ಈ ಕ್ಷೇತ್ರಕ್ಕೆ ಅಲ್ಪಸಂಖ್ಯಾತರಿಗೆ ಅವಕಾಶ ನೀಡಬೇಕೆಂದು ತಮ್ಮ ಹಕ್ಕೊತ್ತಾಯ ಮಂಡಿಸಿದ್ದಾರೆ. ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಪೈಪೋಟಿ ತೀವ್ರಗೊಂಡಿದ್ದು, ಟಿಕೆಟ್ ಪಡೆಯಲು ಸಿದ್ದು ಬಳಗದವರ ಆಕಾಂಕ್ಷೆ ಹೆಚ್ಚಾಗಿದೆ. ಮಾಜಿ ಮೇಯರ್ ರಾಮಚಂದ್ರಪ್ಪ, ಬೈರತಿ ಸುರೇಶ್, ಎಚ್.ಎಂ.ರೇವಣ್ಣ ಅವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರ ನಡುವೆ ವಿಧಾನಪರಿಷತ್ ಮುಖ್ಯ ಸಚೇತಕರಾದ ಆರ್.ವಿ.ವೆಂಕಟೇಶ್ ಕೂಡ ನಮಗೆ ಟಿಕೆಟ್ ನೀಡಬೇಕೆಂದು ಆಗ್ರಹಿಸಿದ್ದಾರೆ. ಈ ಕ್ಷೇತ್ರದ ಅಭ್ಯರ್ಥಿಯ ಆಯ್ಕೆ ಪಕ್ಷದಲ್ಲಿ ಕಗ್ಗಂಟ್ಟು ಉಂಟು ಮಾಡಿರುವುದಲ್ಲದೆ, ಸಿದ್ದು ಆಪ್ತರಲ್ಲಿ ಬಿರುಕು ಮೂಡಿಸಿದೆ.

ಕಳೆದ ಬಾರಿ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಎಚ್.ಎಂ.ರೇವಣ್ಣ ಅವರು ಸಿದ್ದು ವಿರುದ್ಧ ಪರೋಕ್ಷ ದಾಳಿ ನಡೆಸಿದ್ದರು. ಆ ಸಂದರ್ಭದಲ್ಲಿ ಅವರಿಗೆ ಸಂಪುಟ ಸೇರಲು ಅವಕಾಶವಾಗಲಿಲ್ಲ. ಈಗ ಶಾಸಕರಾಗುವುದು ಕೈ ತಪ್ಪಿದರೆ ಕ್ಷೇತ್ರ ವಂಚಿತರಾಗುವುದರ ಜತೆಗೆ ಪಕ್ಷದಲ್ಲಿ ಮೂಲೆ ಗುಂಪಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ತಮಗೆ ಟಿಕೆಟ್ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ. ಹೆಬ್ಬಾಳದಲ್ಲಿ ಕಳೆದ ಬಾರಿ ರೇವಣ್ಣ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅವರನ್ನು ಮೇಲ್ಮನೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಆದರೂ ಅವರು ಈ ಕ್ಷೇತ್ರದ ಮೇಲೆ ಕಣ್ಣಿಟ್ಟು ಟಿಕಟ್‌ಗಾಗಿ ಪ್ರಯತ್ನ ನಡೆಸಿದ್ದಾರೆ. ಅಲ್ಲದೆ, ಸಿದ್ದು ಅವರ ಆಂತರಿಕ ವಿರೋಧಿಗಳ ಜತೆ ಕೈ ಜೋಡಿಸಿದ್ದಾರೆ ಎಂಬುದು ಕಂಡು ಬಂದಿದೆ. ಫೆಬ್ರುವರಿ 13ರಂದು ನಡೆಯಲಿರುವ ಉಪ ಚುನಾವಣೆಗೆ ಈ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ತೀವ್ರ ಕುತೂಹಲಕಾರಿ ವಿಷಯವಾಗಿದೆ.  ಒಮ್ಮತದ ಅಭ್ಯರ್ಥಿ ಆಯ್ಕೆಗೆ ವೀಕ್ಷಕರನ್ನು ನೇಮಿಸಿದ್ದು, ಇದೇ 20ರೊಳಗೆ ವೀಕ್ಷಕರು ವರದಿ ನೀಡಬೇಕಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸದಾಕಾಲ ಬೆಂಬಲವಾಗಿ ನಿಂತಿರುವ ಪಕ್ಷದ ಉಸ್ತುವಾರಿ ದಿಗ್ವಿಜಯ್‌ಸಿಂಗ್ ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ. ಈ ಕ್ಷೇತ್ರದ ಟಿಕೆಟ್  ಪಡೆಯುವ ಪ್ರಯತ್ನ ಎಲ್ಲಿ ಹೋಗಿ ಮುಟ್ಟುತ್ತದೆ ಕಾದು ನೋಡಬೇಕು.

Write A Comment