ಎಷ್ಟೋ ಸಲ ಯಾರದ್ದೋ ತಪ್ಪಿಗಾಗಿ ಇನ್ಯಾರೋ ಪ್ರಾಣ ಕಳೆದುಕೊಳ್ಳುವಂತಾಗುತ್ತದೆ. ಅದರಲ್ಲೂ ಅಪಘಾತದ ವೇಳೆ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ವಣವಾಗುತ್ತದೆ. ನೆಲದ ಮೇಲೆ ಅಪಘಾತ ಸಂಭವಿಸಿದರೆ ಸ್ಥಳೀಯರು ಹೋಗಿ ರಕ್ಷಿಸಬಹುದು.
ಒಂದೊಮ್ಮೆ ಆಕಾಶದಲ್ಲಿ ಅನಾಹುತ ನಡೆದರೆ ರಕ್ಷಿಸುವುದು ಕಷ್ಟ. ಈ ಕಾರಣದಿಂದಲೇ ಸಣ್ಣ ತಾಂತ್ರಿಕ ದೋಷದಿಂದ ಆಗುವ ವಿಮಾನ ಅಪಘಾತದಲ್ಲಿ ಅದರೊಳಗಿದ್ದ ಎಲ್ಲ ಪ್ರಯಾಣಿಕರು ಜೀವ ತೆರುವಂಥ ಅನೇಕ ಸಂದರ್ಭಗಳು ಬಂದೊದಗಿವೆ. ಅದನ್ನು ತಪ್ಪಿಸಲು ಹೊಸ ತಂತ್ರಜ್ಞಾನವು ವೈಮಾನಿಕ ಕ್ಷೇತ್ರದಲ್ಲಿ ಆವಿಷ್ಕಾರವಾಗುತ್ತಿದೆ. ತುರ್ತು ಸಂದರ್ಭದಲ್ಲಿ ಸ್ವಯಂಚಾಲಿತವಾಗಿ ಕ್ಯಾಬಿನ್ ಪ್ರತ್ಯೇಕಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸುವ ವಿಮಾನದ ವಿನ್ಯಾಸವೊಂದು ರೆಡಿಯಾಗಿದೆ.
ಸಾವಿರಾರು ಅಡಿ ಎತ್ತರದಿಂದ ಗಟ್ಟಿ ನೆಲ, ನೀರಿನ ಮೇಲೆ ಬಿದ್ದರೂ ಒಳಗಿದ್ದವರಿಗೆ ಏನೂ ಆಗುವುದಿಲ್ಲ. ಇದರಿಂದ ಪ್ರಯಾಣಿಕರು ನಿಶ್ಚಿಂತೆಯಿಂದ ಪ್ರಯಾಣಿಸಬಹುದು. ಉಕ್ರೇನ್ನ ವೈಮಾನಿಕ ಇಂಜಿನಿಯರ್ ವ್ಲಾದಿಮರ್ ಟಟರೆಂಕೋ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.