ಬೆಂಗಳೂರು, ಜ. ೧೮: ಯುವ ಶಕ್ತಿ ಅತಿ ದೊಡ್ಡ ಶಕ್ತಿಯಾಗಿದ್ದು, ಯುವಶಕ್ತಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಬೆಂಗಳೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಗರದಲ್ಲಿಂದು ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಜಿಲ್ಲಾ ಮಟ್ಟದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವ ರಾಷ್ಟ್ರದಲ್ಲಿ ಯುವ ಶಕ್ತಿ ಹೆಚ್ಚಾಗಿರುತ್ತದೋ ಆ ದೇಶ ಆರ್ಥಿಕವಾಗಿಯೂ ಅಭಿವೃದ್ಧಿ ಹೊಂದಿರುತ್ತದೆ. ಭಾರತದಲ್ಲಿ ಶೇಕಡಾ ೬೦ರಷ್ಟು ಯುವಶಕ್ತಿಯಿದ್ದು, ಇವರಿಗೆ ಸರಿಯಾದ ಮಾರ್ಗದರ್ಶನ ನೀಡಿ ದೇಶ ಶಕ್ತಿಯಾಗಿ ಮಾರ್ಪಡಿಸುವ ಅಗತ್ಯವಿದೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದರು ದೇಶ ಮತ್ತು ಜಗತ್ತಿಗೆ ಮಾದರಿಯಾಗುವ ಜೀವನ ನಡೆಸಿದರು. ಅವರು ವಿಶ್ವದ ಆಕರ್ಷಣೀಯ ವ್ಯಕ್ತಿ. ಅವರು ತೋರಿಸಿಕೊಟ್ಟ ಮಾರ್ಗದಲ್ಲಿ ಯುವ ಜನತೆ ನಡೆದರೆ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದು ಹೇಳಿದರು.
ಪೂರ್ವಿಕರ ತ್ಯಾಗ ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಇದರಿಂದ ಯುವಕರಿಗೆ ಇಂದು ತಮ್ಮ ಸಾಧನೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ದೊರಕಿದೆ. ಕಳೆದ ೬೦ ವರ್ಷಗಳಲ್ಲಿ ದೇಶದಲ್ಲಿ ಹಲವು ಪ್ರಗತಿಪರ ಹಾಗೂ ಅಭಿವೃದ್ಧಿ ಪರ ಕೆಲಸವಾಗಿದೆ ಎಂದು ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ೩೦ ಕೋಟಿ ಜನಸಂಖ್ಯೆ ದೇಶದಲ್ಲಿತ್ತು. ಇದೇ ವೇಳೆ ಬರಗಾಲ ಉಂಟಾದುದರಿಂದ ಜನರು ಸಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರ ದೂರದೃಷ್ಟಿಯ ಫಲವಾಗಿ ದೇಶ ಆಹಾರದಲ್ಲಿ ಸ್ವಾವಲಂಬನೆ ಆಗಿದೆ. ಇಲ್ಲದಿದ್ದರೆ ಆಹಾರಕ್ಕೆ ಅಮೆರಿಕದೆದುರು ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದು ಹೇಳಿದರು.
ಪಂಚವಾರ್ಷಿಕದಂತಹ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದರು. ಆದ್ದರಿಂದ ಇಂದಿನ ಯುವ ಜನಾಂಗ ನಮ್ಮ ಹಿಂದಿನ ಪೀಳಿಗೆಯನ್ನು ಮರೆಯಬಾರದು ಎಂದು ಹೇಳಿದ ಅವರು, ಬೆಂಗಳೂರು ನಗರವನ್ನು ದೇಶದಲ್ಲೇ ಅತ್ಯುತ್ತಮ ನಗರವಾಗಿ ರೂಪಿಸಲು ಸರ್ಕಾರ ಕ್ರಮಕೈಗೊಂಡಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಚ್. ಎಂ. ರೇವಣ್ಣ ಮಾತನಾಡಿ, ೩೯ ವರ್ಷಗಳ ಕಾಲ ಮಾತ್ರ ಜನಿಸಿದ ಸ್ವಾಮಿ ವಿವೇಕಾನಂದರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದೇಶದ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಪಸರಿಸಿದರು ಎಂದು ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ದಿನೇಶ್ ಗುಂಡೂರಾವ್ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಟಿ.ಎ.ಶರವಣ, ಲಹರ್ ಸಿಂಗ್ ಸಿರೋಯಾ, ಎಂ.ನಾರಾಯಣಸ್ವಾಮಿ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಜಿಲ್ಲಾಧಿಕಾರಿ ವಿ.ಶಂಕರ್, ನಟ ಶ್ರೀನಗರ ಕಿಟ್ಟಿ ಮತ್ತಿತರರು ಹಾಜರಿದ್ದರು.