ಕನ್ನಡ ವಾರ್ತೆಗಳು

ಮಹಾಪ್ರಸ್ಥಾನಗೈದ ಕಾಶೀಮಠಾಧೀಶರಿಗೆ ಗಂಗಾತಟದಲ್ಲಿ ಅಂತಿಮ ನಮನ

Pinterest LinkedIn Tumblr

sudhindra_swami_yatra_1

ಹರಿದ್ವಾರದ ವ್ಯಾಸ ಭೂಮಿಯಲ್ಲಿ ವೃಂದಾವನಸ್ಥರಾದ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿ

ಮೂಡುಬಿದಿರೆ / ಹರಿದ್ವಾರ : ಜನವರಿ 17ರ ರವಿವಾರದಂದು ಹರಿಪಾದ ಸೇರಿದ್ದ ಶ್ರೀ ಕಾಶೀಮಠಾಧೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ವೃಂದಾವನ ಪ್ರವೇಶ ಪ್ರಕ್ರಿಯೆಗಳು ಹರಿದ್ವಾರದ ಶ್ರೀವ್ಯಾಸ ಮಂದಿರದ ಆವರಣದಲ್ಲಿ ರವಿವಾರ ರಾತ್ರಿ ನಡೆದಿವೆ.

ಶ್ರೀಗಳವರ ಪಟ್ಟ ಶಿಷ್ಯರಾಗಿರುವ ಶ್ರೀಮತ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನ ಮತ್ತು ಹಿರಿತನದಲ್ಲಿ ಸೇರಿದ್ದ ಸಹಸ್ರಾರು ಭಜಕರ, ವೈದಿಕರು,ಸಾಧು ಸಂತರ ಉಪಸ್ಥಿತಿಯಲ್ಲಿ ಗುರುಗಳ ವೃಂದಾವನ ಪ್ರಕ್ರಿಯೆಗಳು ರವಿವಾರ ಬೆಳಗ್ಗಿನಿಂದ ಅರಂಭವಾಗಿ ಸೋಮವಾರ ಬೆಳಗ್ಗಿನ ಜಾವ 4ರ ವೇಳೆಗೆ ಪ್ರಧಾನ ಕಾರ್ಯಗಳು ಪೂರ್ಣಗೊಂಡವು. ಇದರೊಂದಿಗೆ ಸಂಸ್ಥಾನದ ಕೀರ್ತಿಯನ್ನು ಉತ್ತುಂಗಕ್ಕೇರಿಸಿ ಜತೆಗೆ ಸಮಾಜವನ್ನೂ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿ ಶಿಷ್ಯವರ್ಗದ ಪಾಲಿಗೆ ಮಾತನಾಡುವ ದೇವರೆನಿಸಿದ್ದ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಭೌತಿಕ ಶರೀರ ದೇವಭೂಮಿಯ ವ್ಯಾಸ ಸನ್ನಿಧಿಯ ಗಂಗೆಯ ಮಡಿಲಲ್ಲಿ ಭೂಮಾತೆಯ ಒಡಲಲ್ಲಿ ಲೀನವಾದಂತಾಗಿದೆ.

sudhindra_swami_yatra_3 sudhindra_swami_yatra_4 sudhindra_swami_yatra_5 sudhindra_swami_yatra_6 sudhindra_swami_yatra_7 sudhindra_swami_yatra_8

sudhindra_swami_yatra_2

ರವಿವಾರ ಇಳಿಹಗಲು 1.10ರ ವೇಳೆಗೆ ಹರಿದ್ವಾರದ ವ್ಯಾಸಾಶ್ರಮದಲ್ಲಿ ದೇಹತ್ಯಾಗ ಮಾಡಿದ್ದ ಶ್ರೀಗಳವರ ಭೌತಿಕ ಶರೀರದ ಮುಂದೆ ಭಜಕರು ಹರಿನಾಮಸ್ಮರಣೆ, ಸ್ತೋತ್ರ ಪರಾಯಣಗಳನ್ನು ನಡೆಸಿದ್ದರು. ಅಪರಾಹ್ನದ ವೇಳೆಗೆ ಮುಂಬೈ ವಾಲ್ಕೇಶ್ವರ ಮೊಕ್ಕಾಂನಿಂದ ಪಟ್ಟ ಶಿಷ್ಯರಾಗಿರುವ ಶ್ರೀಮತ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಚಿತ್ತೈಸುವುದರೊಂದಿಗೆ ವೃಂದಾವನ ಪ್ರವೇಶ ಪ್ರಕ್ರಿಯೆಗಳು ಚುರುಕುಗೊಂಡವು. ಸಂಸ್ಥಾನ ದೇವರ ತ್ರಿಕಾಲ ಪೂಜೆ, ಅಭಿಷೇಕ, ಆರತಿ ಬಳಿಕ ಶ್ರೀಗಳವರಿಂದ ಗುರುಗಳ ಶರೀರದ ಮುಂದೆ ಪಾರಾಯಣಾದಿ ವಿಧಾನಗಳು,ಅರ್ಚನಾ ಪ್ರಕ್ರಿಯೆಗಳು ನಡೆದವು. ಬಳಿಕ ಶ್ರೀಮತ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಶ್ರೀ ವ್ಯಾಸ ಮಂದಿರಕ್ಕೆ ಭೇಟಿ ನೀಡಿದರು.

ನಂತರ ನಡೆದ ಪ್ರಕ್ರಿಯೆಯಲ್ಲಿ ಗುರುಗಳ ದೇಹವನ್ನು ಅಲಂಕರಿಸಿ ಪೀಠದಲ್ಲಿರಿಸಿ ವ್ಯಾಸ ಮಂದಿರದ ಆವರಣದಿಂದ ಹತ್ತಿರದ ವ್ಯಾಸ ಘಾಟ್‍ಗೆ ಮೆರವಣಿಗೆಯಲ್ಲಿ ಕೊಂಡ್ಯೊಯ್ಯಲಾಯಿತು. ಇಲ್ಲಿ ಪವಿತ್ರ ಗಂಗಾನದಿಯ ತಟದಲ್ಲಿ ಶ್ರೀಮತ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರಿಂದ ಗಂಗಾ ಪೂಜನ ನಡೆಯಿತು. ಬಳಿಕ ಗುರುಗಳ ದೇಹಕ್ಕೆ ಗಂಗಾಭಿಷೇಕ, ಕ್ಷೀರಾಭಿಷೇಕ ಸಹಿತ ಪೂರಕ ವಿಧಿವಿಧಾನಗಳನ್ನು ನಡೆಸಲಾಯಿತು.

ಕುಳಿತ ಧ್ಯಾನ ಭಂಗಿಯಲ್ಲಿದ್ದ ಅಲಂಕೃತ ಗುರುಗಳ ಶರೀರವನ್ನು ರಾತ್ರಿ 11ರವೇಳೆಗೆ ಮತ್ತೆ ವ್ಯಾಸ ಮಂದಿರದ ಆವರಣದಲ್ಲಿ ಸಕಲ ಬಿರುದು ಬಾವಲಿ, ಶಂಖನಾದ., ಜಾಗಟೆ, ವಾದ್ಯ ಮೇಳಗಳ ಸಹಿತ ಮೆರವಣಿಗೆಯಲ್ಲಿ ತಂದು ವ್ಯಾಸ ಮಂದಿರದ ಹಿಂಭಾಗದಲ್ಲಿ ಸಿದ್ಧಪಡಿಸಲಾದ ಸಮಾಧಿ ಸ್ಥಳದಲ್ಲಿ ವೃಂದಾವನ ಪ್ರವೇಶ ಪ್ರಕ್ರಿಯೆಗಳನ್ನು ನಡೆಸಲಾಯಿತು.

ಎಲ್ಲೆಡೆಯಿಂದ ಗುರು ಮಹರಾಜ್ ಗುರುಮಹರಾಜ್ ಜೈ ಜೈ ಗುರುಮಹರಾಜ್ ಎನ್ನುವ ಘೋಷಣೆಗಳು ಮೊಳಗಿದವು. ಇದೇ ಸಂದರ್ಭದಲ್ಲಿ ಹರಿದ್ವಾರದ ವಿವಿಧ ಮಠ ಮಂದಿರಗಳ ಸಾಧು ಸಂತರುಗಳು ವೃಂದಾವನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

sudhindra_swami_yatra_9 sudhindra_swami_yatra_11 sudhindra_swami_yatra_12 sudhindra_swami_yatra_14 sudhindra_swami_yatra_15

ಅಂತಿಮವಾಗಿ ರಜತವರ್ಣದ ಜರಿಯ ಚಿತ್ತಾರಗಳಿಂದ ಕೂಡಿದ ಕಡುಕೆಂಪು ವರ್ಣದ ಪಾಮರಿಯನ್ನು ಹೊದೆಸಿ ದಂಡ, ಜಪಮಾಲೆ ಇತ್ಯಾದಿ ಸಾಂಪ್ರದಾಯಿಕ ಯತಿಪರಂಪರೆಯ ಗೌರವಾದರಗಳೊಂದಿಗೆ ಶ್ರೀಗಳವರ ದೇಹವನ್ನು ಭೂಮಡಿಲಿಗೆ ಅರ್ಪಿಸಲಾಯಿತು.

ಅದಾಗಲೇ ಸೋಮವಾರದ ಏರು ಹಗಲು ನಾಲ್ಕು ಗಂಟೆಯ ಹೊತ್ತಾಗಿದ್ದು ದೀರ್ಘ ಅವಧಿಯ ಈ ವೃಂದಾವನ ಪ್ರಕ್ರಿಯೆಯಲ್ಲಿ ತದೇಕಚಿತ್ತದಿಂದ ಭಾಗಿಯಾಗಿದ್ದ ಶಿಷ್ಯವರ್ಗ ‘ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮಿ ಮಹರಾಜ್ ಕೀ ಜೈ’ ಎನ್ನುವ ಘೋಷಣೆಯೊಂದಿಗೆ ಭಾವುಕರಾಗಿ ತಮ್ಮ ಗುರುಗಳ ಅಂತಿಮ ದರ್ಶನ ಪಡೆದು ದೇಹವನ್ನು ಭೂಮಾತೆಯ ಮಡಿಲಿಗೆ ಸಮರ್ಪಿಸುವ ಭಾವುಕ ಕ್ಷಣಗಳಿಗೆ ಸಾಕ್ಷಿಯಾದರು.

ವೃಂದಾವನದ ಸ್ಥಳದಲ್ಲಿ ತುಲಸೀ ಗಿಡ ಸಹಿತ ಪ್ರಾಣ ದೇವರ ಮೂರ್ತಿಯನ್ನಿರಿಸಿ ಶ್ರೀಮತ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ಆರತಿ ಬೆಳಗಿದರು.
ಸೊಮವಾರ ಅಪರಾಹ್ನದ ಪೂಜೆಯ ಬಳಿಕ ಶ್ರೀಗಳವರು ವೃಂದಾವನ ಸ್ಥಳದಲ್ಲಿ ಮೊದಲ ದಿನದ ಆರತಿ ಬೆಳಗಿದರು. ಒಟ್ಟು 13 ದಿನಗಳ ಕಾಲ ವೃಂದಾವನ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ವಿವಿಧ ಆರಾಧನಾ ಪ್ರಕ್ರಿಯೆಗಳು, ಹವನಾದಿ ಧಾರ್ಮಿಕ ಪ್ರಕ್ರಿಯೆಗಳು ವ್ಯಾಸಮಂದಿರದಲ್ಲಿ ನಡೆಯಲಿವೆ.

ಎಲ್ಲೆಡೆ ಗುರುಗುಣಗಾನ:

ರವಿವಾರ ಮುಂಜಾವ ಶ್ರೀ ಕಾಶೀಮಠಾಧಿಪತಿಗಳ ಮಹಾಪ್ರಸ್ಥಾನದ ಸುದ್ದಿ ಹಬ್ಬುತ್ತಿದ್ದಂತೆ ಜಿ.ಎಸ್. ಬಿ.ಸಮಾಜ ಎಲ್ಲೆಡೆ ಶೋಕ ಸಾಗರದಲ್ಲಿ ಮುಳುಗಿ ಮೌನಕ್ಕೆ ಶರಣಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸಂದೇಶದಂತೆ ಹೆಚ್ಚಿನವರು ಮನೆಗಳಲ್ಲಿ ಗುರುಗಳ ಭಾವಚಿತ್ರವನ್ನು ತುಲಸೀ ಹಾರಗಳೊಂದಿಗೆ ಅಲಂಕರಿಸಿ ತುಪ್ಪದ ದೀಪ ಬೆಳಗಿ ಸ್ತೋತ್ರ ಪಠಣ, ಸಂಕೀರ್ತನೆಯಲ್ಲಿ ತೊಡಗಿಕೊಂಡರು.

ದೇವಾಲಯ, ಮಠ ಮಂದಿರಗಳಲ್ಲಿ ಗುರುಗಳ ಭಾವಚಿತ್ರದೆದುರು ದೀಪ ಬೆಳಗಿ ಗುರು ಗುಣಗಾನ, ಭಜನೆ, ವಿಶೇಷ ಪೂಜೆ, ಪ್ರಾರ್ಥನೆಗಳು ನಡೆದವು. ರವಿವಾರ ಮುಂಜಾನೆಯಿಂದ ಹರಿದ್ವಾರದಲ್ಲಿ ನಡೆದ ವೃಂದಾವನ ಪ್ರಕ್ರಿಯೆಗಳು ಸೋಮವಾರ ಮುಂಜಾವದ ವರೆಗೂ ನಡೆದರೆ ಇಲ್ಲಿ ಹೆಚ್ಚಿನ ಕಡೆಗಳಲ್ಲಿ ದೇವಾಲಯಗಳು, ಮಠ, ಮಂದಿರಗಳು ತಡರಾತ್ರಿವರೆಗೂ ತೆರೆದುಕೊಂಡು ಭಜಕರ ಸತ್ಸಂಗ, ಸಂಕೀರ್ತನೆಗೆ ಅವಕಾಶವಿತ್ತವು.

ಮಂಗಳೂರಿನ ಜಿ.ಎಸ್.ಬಿ.ದೇವಾಲಯಗಳ ಒಕ್ಕೂಟವು ನೀಡಿದ ಕರೆಯಂತೆ ಸೋಮವಾರ ಅವಿಭಜಿತ ದಕ್ಷಿಣ ಕನ್ನಡ ಸಹಿತ ಕಾಸರಗೋಡಿನ ಸಹಿತ ಎಲ್ಲೆಡೆ ಜಿಎಸ್.ಬಿ. ಸಮಾಜದ ಆಡಳಿತೆಗೆ ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳು, ಉದ್ದಿಮೆಗಳು, ವ್ಯವಹಾರ ಸಂಘಟನೆಗಳು,ವರ್ತಕರು ತಮ್ಮ ವ್ಯವಹಾರ. ಉದ್ಯೋಗಕ್ಕೆ ರಜೆ ಮಾಡಿ ಶ್ರೀಗಳವರಿಗೆ ಗೌರವ ಸಲ್ಲಿಸಿದರು.

ಜ.28: ಸಂಯಮಿಂದ್ರ ತೀರ್ಥ ಶ್ರೀ ಪೀಠಾರೋಹಣ

ಶ್ರೀ ಕಾಶೀಮಠದ ಮಠಾದಿಪತಿಯಾಗಿದ್ದ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮಿಯವರ ಪರಂಧಾಮದಿಂದ ತೆರವಾಗಿರುವ ಗುರುಸ್ಥಾನದಲ್ಲಿ ಪೀಠಾಧಿಪತಿಯಾಗಿ ಶ್ರೀಮತ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಪೀಠಾರೋಹಣ ಸಮಾರಂಭ ಜ28ರಂದು ಹರಿದ್ವಾರದ ಶ್ರೀ ವ್ಯಾಸ ಮಂದಿರ ಶ್ರೀ ಕಾಶೀಮಠದಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಈ ಸಮಾರಂಭದಲ್ಲಿ ಜಿ.ಎಸ್.ಬಿ.ಸಮಾಜದ ಧರ್ಮಪೀಠಗಳಾದ ಶ್ರೀ ಗೋಕರ್ಣ ಮಠಾಧೀಶರು, ಶ್ರೀ ಕೈವಲ್ಯ ಮಠಾಧೀಶರರು, ಜತೆಗೆ ಚಿತ್ರಾಪುರ, ಹಲ್ದೀಪುರ ಮಠದ ಶ್ರೀಗಳವರು, ಉಡುಪಿಯ ಅಷ್ಟಮಠಗಳ ಯತಿವರ್ಯರನ್ನು ಆಹ್ವಾನಿಸಲಾಗುತ್ತಿದೆ. ಗುರುವರ್ಯರುಗಳು, ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಧಾರ್ಮಿಕ ವಿದಿ ವಿಧಾನಗಳೊಂದಿಗೆ ಸಮಾರಂಭ ನಡೆಯಲಿದೆ ಎಂದು ತಿಳಿದುಬಂದಿದೆ. ಅಂದು ಶ್ರೀ ಕಾಶೀಮಠದ 21ನೇ ಪೀಠಾಧಿಪತಿಯಾಗಿ ಸಮ್ಯಮೀಂದ್ರ ಶ್ರೀಗಳವರು ಗುರುಸ್ಥಾನವನ್ನು ಅಲಂಕರಿಸಲಿದ್ದಾರೆ.

ಇದೇ ವೇಳೆ ಹಿರಿಯ ಗುರುಗಳ ವೃಂದಾವನಸ್ಥರಾಗಿರುವ ಹಿರಿಯ ಗುರುಗಳ ಸ್ಮರಣೆಯಲ್ಲಿ ಜ26ರಿಂದ 28ರವರೆಗೆ ಜಿಎಸ್.ಬಿ. ಸಮಾಜದ ಎಲ್ಲ ದೇವಾಲಯಗಳು ಮತ್ತು ಮಠ ಮಂದಿರಗಳಲ್ಲಿ ವಿಶೇಷ ಸಂಕೀರ್ತನೆ, ಪೂಜಾದಿಗಳನ್ನು ನಡೆಸುವಂತೆ ನಿರ್ಧರಿಸಲಾಗಿದೆ.

ಮಹಷಿಯ ಹೆಜ್ಜೆಯ ಗುರುತುಗಳು..

1926 ಮಾರ್ಚ್ 31 ಎರ್ನಾಕುಲಂನಲ್ಲಿ ಜನನ
1944 ಮೂಲ್ಕಿಯಲ್ಲಿ ಶ್ರೀ ಕಾಶೀ ಮಠದ 21ನೇ ಯತಿಯಾಗಿ ಸನ್ಯಾಸ ದೀಕ್ಷೆ
1949 ಗುರುಗಳ ಅಗಲುವಿಕೆ, ಮಠಾಧಿಪತಿಯಾಗಿ ಜವಾಬ್ದಾರಿ
1953 ಮೈಸೂರು ಪ್ರಾಂತ್ಯದಲ್ಲಿ ಶ್ರೀಗಳವರಿಗೆ ಸರ್ಕಾರದ ಗೌರವ ಸನದು
1955 ಬಂಟ್ವಾಳದಲ್ಲಿ ಸುಧಾ ಮಂಗಳ
1959 ಶ್ರೀಕಾಶೀಮಠ ಸಂಸ್ಥಾನ ಕ್ಷೇಮಾಭ್ಯುದಯ ನಿಧಿ ಸ್ಥಾಪನೆ
1960 ಬಾಗೇಮಂಡಲದಲ್ಲಿ ಮಠ ಸ್ಥಾಪನೆ
1963 ಕಾರ್ಕಳದಲ್ಲಿ ಮೂರುಮಠದ ಯತಿಗಳ ಅಪೂರ್ವ ಚಾತುರ್ಮಾಸ ವೃತಾಚರಣೆ
1965 ಬಸ್ರೂರಿನಲ್ಲಿ ಶ್ರೀ ಭುವನೇಂದ್ರ ಬಾಲಕಾಶ್ರಮ ಸ್ಥಾಪನೆ
1967 ಕೊಂಚಾಡಿಯಲ್ಲಿ ಮಠ, ದೇವಳ ಸ್ಥಾಪನೆ
1969 ಸನ್ಯಾಸ ದೀಕ್ಷಾ ರಜತಮಹೋತ್ಸವ
1971 ಭಾರತೀಯ ಸಾಂಸ್ಕøತಿಕ ಪ್ರಕಟನಾಲಯ ಸ್ಥಾಪನೆ.
1973 ಗೋವಾದ ಬಾಂದೋರಾದಲ್ಲಿ ಮಠ ಸ್ಥಾಪನೆ
1974 ಮಠಾಧಿಪತಿಯಾಗಿ ರಜತಮಹೋತ್ಸವ (ಮೂಲ್ಕಿ)
1986 ಷಷ್ಠ್ಯಬ್ದಪೂರ್ತಿ ಸಂಭ್ರಮ ಬೆಂಗಳೂರಿನಲ್ಲಿ ಮಠ ಸ್ಥಾಪನೆ
1988 ಹರಿದ್ವಾರದಲ್ಲಿ ವ್ಯಾಸಮಂದಿರ ಆಶ್ರಮ ಸ್ಥಾಪನೆ,
1993 ಅಂಬಲಮೇಡುವಿನಲ್ಲಿ ಕುಲದೇವತಾ ಸಂಕೀರ್ಣ, ಮಠ ಸ್ಥಾಪನೆ
1994 ಸನ್ಯಾಸಾಶ್ರಮದ ಸ್ವರ್ಣ ಮಹೋತ್ಸವ, ಚೆನ್ನೈನಲ್ಲಿ ಮಠ ಸ್ಥಾಪನೆ
1995 ಮಹಾರಾಷ್ಟ್ರದ ಖೇಡ್‍ನಲ್ಲಿ ಮಠ ಸ್ಥಾಪನೆ
1996 ಮಂಗಳೂರಿನಲ್ಲಿ ಸಪ್ತತಿ ಸಂಭ್ರಮ
1999 ಮಠಾಧೀಶರಾಗಿ ಪೀಠಾರೋಹಣದ ಸ್ವರ್ಣ ಮಹೋತ್ಸವ (ಕೊಚ್ಚಿ)
2002 ಜೂನ್ 26 ಸಂಯಮೀಂದ್ರ ತೀರ್ಥರನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ
2002 ಕಲ್ಪಿಯಲ್ಲಿ ಬಾಲವ್ಯಾಸ ಮಂದಿರ
2005 ಹರಿದ್ವಾರದಲ್ಲಿ ವ್ಯಾಸಮಹರ್ಷಿಗೆ ಅಪರೂಪದ ಸಹಸ್ರಶಂಖಾಭಿಷೇಕ ಸಂಭ್ರಮ
2007 ಕೊಂಚಾಡಿಯಲ್ಲಿ ಸಹಸ್ರಪೂರ್ಣಚಂದ್ರ ದರ್ಶನ ಶಾಂತಿ ಸಂಭ್ರಮ.
2008 ಶ್ರೀಮತ್ ಕೇಶವೇಂದ್ರ ತೀರ್ಥರ ನೆನಪಿನಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವಿನ ದತ್ತಿ ಸಂಸ್ಥೆ ಸ್ಥಾಪನೆ
2013 ಜೂನ್ 13 ಮಂಗಳೂರಿನಲ್ಲಿ ಸಂಸ್ಥಾನ ದೇವರುಗಳ ಪುನಃ ಪ್ರತಿಷ್ಠೆ
2015 ಹರಿದ್ವಾರದಲ್ಲಿ ನವತಿ ಸಂಭ್ರಮ
2016 ಹರಿದ್ವಾರದಲ್ಲಿ ಹರಿಪಾದ ಸೇರಿದ ಶ್ರೀಗಳು, ವೃಂದಾವನ.

ಚಿತ್ರ ಕೃಪೆ : ಮಂಜು ನಿರೇಶ್ವಾಲ್ಯ

Write A Comment