ಕರ್ನಾಟಕ

ಬೆಂಗಳೂರು ನಗರದಾದ್ಯಂತ ಹೈಅಲರ್ಟ್; ಸ್ಫೋಟಕ ಅಲ್ಲ, ಲಿಕ್ವಿಡ್ ಅಂತೆ!

Pinterest LinkedIn Tumblr

spotಬೆಂಗಳೂರು : ನಗರದ ಕಾವೇರಿ ಜಂಕ್ಷನ್‌ ಬಳಿ ನಿಗೂಢ ಬಾಕ್ಸ್‌ ವೊಂದು ಪತ್ತೆಯಾಗಿ ಬಾಂಬ್‌ ಭೀತಿ ಹುಟ್ಟು ಹಾಕಿ ನಗರದ ಜನತೆಯನ್ನು ಆತಂಕಕ್ಕೀಡುಮಾಡಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

ವಿಷಯ ತಿಳಿದ ಕೂಡಲೇ  ಸ್ಥಳಕ್ಕಾಗಮಿಸಿದ ಬಾಂಬ್‌ ನಿಷ್ಕ್ರಿಯ ದಳದ ಸಿಬಂದಿಗಳು ,ಪೊಲೀಸರು ಸಕಲ ಸಿದ್ದತೆಗಳೊಂದಿಗೆ ಸ್ಥಳವನ್ನು ಸುತ್ತುವರಿದು ವಸ್ತುವನ್ನು ತೆರೆದು ನಿಷ್ಕ್ರಿಯ ಗೊಳಿಸಿ ಆತಂಕ ದೂರ ಮಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಮೇಘರಿಕ್‌ ಅವರು ಮಾತನಾಡಿ ‘ಪತ್ತೆಯಾಗಿದ್ದು ಬಾಂಬ್‌ ಅಲ್ಲ, ತೆಂಗಿನ ನಾರಿನಲ್ಲಿ ಸುತ್ತಿಟ್ಟಿದ್ದ ಲಿಕ್ವಿಡ್‌ ರೂಪದ ವಸ್ತು. ಇದರಲ್ಲಿ ಚೀನಾ ಭಾಷೆಯ ಬರಹಗಳಿದ್ದವು. ನಾವು ಬಾಂಬ್‌ ಎನ್ನುವ ಸಂಶಯದೊಂದಿಗೆ ಎಲ್ಲಾ ಮುನ್ನೆಚ್ಚರಿಕೆಯೊಂದಿಗೆ ಕಾರ್ಯಾಚರಣೆಗೆ ಇಳಿದಿದ್ದೆವು’ ಎಂದು ತಿಳಿಸಿದರು.

ಜನರು ಯಾರು ಆತಂಕ ಪಡಬೇಕಾದ ಅಗತ್ಯವಿಲ್ಲ. ಇನ್ನು ಮುಂದೆ ಅನುಮಾನಾಸ್ಪದ ವಸ್ತುಗಳು ಪತ್ತೆಯಾದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀ ಡಲು ಮೇಘರಿಕ್‌ ಹೇಳಿದರು.

ಏರ್‌ಪೋರ್ಟ್‌ ರಸ್ತೆಯಲ್ಲಿರುವ ಜನ ನಿಬಿಢ ಕಾವೇರಿ ಜಂಕ್ಷನ್‌ ಬಳಿ ಈ ಬಾಕ್ಸ್‌ ಪತ್ತೆಯಾಗಿದ್ದು  ಆತಂಕ ಇನ್ನಷ್ಟು ಹೆಚ್ಚಲು ಕಾರಣವಾಯಿತು.

ಸ್ಥಳೀಯ ನಿವಾಸಿ ಬೆಳಗ್ಗೆ 11 ಗಂಟೆಯ ವೇಳೆ ಬಾಕ್ಸ್‌ ನೋಡಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು.

ವಿಷಯ ತಿಳಿದ ಕೂಡಲೇ  ವೈಯಾಲಿ ಕಾವಲ್‌ ಠಾಣಾ ಪೊಲೀಸರು, ಬಾಂಬ್‌  ನಿಷ್ಕ್ರಿಯ ದಳ ,ಶ್ವಾನದಳ ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಸುಮಾರು ಒಂದೂವರೆ ಅಡಿಯಷ್ಟು ಎತ್ತರವಿರುವ ಟಿಫ‌ನ್‌ ಬಾಕ್ಸ್‌ ನಂತಿರವ ಪೆಟ್ಟಿಗೆಗೆ ಹಸಿರು ಬಣ್ಣದ ಟೇಪ್‌ ಸುತ್ತಿರುವುದು ಕಂಡು ಬಂದಿತು.

ಸುರಕ್ಷತೆಯ ದೃಷ್ಟಿಯಿಂದ ಸುತ್ತಮುತ್ತಲು ಸಂಚಾರವನ್ನು ಕೆಲಕಾಲ ತಡೆಯಲಾಗಿತ್ತು.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್‌

ಘಟನೆಯ ಬಳಿಕದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಹೈ ಅಲರ್ಟ್‌ ಘೋಷಿಸಿ ಭಾರೀ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳು ಮತ್ತು ವ್ಯಕ್ತಿಗಳನ್ನು ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ.

ನಗರದ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಗೊಳಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ರಜಾ ದಿನವಾಗಿರುವ ಹಿನ್ನಲೆ ಯಲ್ಲಿ ಮಾಲ್‌ ಗಳು ,ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಲಾಗಿದೆ.
-ಉದಯವಾಣಿ

Write A Comment