ನವದೆಹಲಿ: ಶಬರಿಮಲೆಯ ಖ್ಯಾತ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸಬೇಕು ಎಂದು ಆಗ್ರಹಿಸಿರುವ ಚಳವಳಿಯ ಮುಂಚೂಣಿ ವಕೀಲ ನೌಶಾದ್ ಅಹ್ಮದ್ ಖಾನ್ ಅವರು ತಮಗೆ 500 ಬೆದರಿಕೆ ಕರೆಗಳು ಬಂದಿವೆ ಎಂದು ಶುಕ್ರವಾರ ಸುಪ್ರೀಂಕೋರ್ಟಿಗೆ ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಂದಿರುವ ಈ ಕರೆಗಳಲ್ಲಿ ಬಹುತೇಕ ಕರೆಗಳು ಅಮೆರಿಕದಿಂದ ಬಂದಿವೆ.
ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿರುವ ಅರ್ಜಿಯನ್ನು ಹಿಂತಿಗೆದುಕೊಳ್ಳುವಂತೆ ಆಗ್ರಹಿಸಿದ ಈ ಕರೆಗಳು, ಇಲ್ಲದೇ ಇದ್ದಲ್ಲಿ ಮನೆಯನ್ನು ಸ್ಪೋಟಿಸುವುದಾಗಿ ಈ ಕರೆಗಳು ತಮಗೆ ಬೆದರಿಕೆ ಹಾಕಿವೆ ಎಂದು ಇಂಡಿಯನ್ ಯಂಗ್ ಲಾಯರ್ಸ್ ಅಸೋಸಿಯೇಷನ್ (ಐವೈಎಲ್ಎ) ಅಧ್ಯಕ್ಷ ನೌಶಾದ್ ಅಹ್ಮದ್ ಖಾನ್ ಹೇಳಿದ್ದಾರೆ.
ಈ ವಾರದ ಆದಿಯಲ್ಲಿ ಖಾನ್ ಅವರ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಮಹಿಳಾ ಭಕ್ತೆಯರ ಮೇಲಿನ ನಿಷೇಧ ಸಂವಿಧಾನಬಾಹಿರವಾಗಿರುವಂತೆ ಕಾಣುತ್ತದೆ ಎಂದು ಹೇಳಿದ್ದರು. ಖಾನ್ ಅವರಿಗೆ ಎಂತಹ ಭದ್ರತೆ ಒದಗಿಸಬೇಕು ಎಂಬುದಾಗಿ ತಾವು ಸೋಮವಾರ ನಿರ್ಧರಿಸುವುದಾಗಿ ನ್ಯಾಯಮೂರ್ತಿಗಳು ಹೇಳಿದರು.
ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ನಿಷೇಧಿಸಿದ್ದು ಏಕೆ ಎಂಬ ಬಗ್ಗೆ ಸ್ಪಷ್ಟನೆ ನೀಡುವಂತೆ ಸುಪ್ರೀಂಕೋರ್ಟ್ ತಿರುವನಂತಪುರ ದೇವಸ್ವಂ ಮಂಡಳಿ ಮತ್ತು ಸರ್ಕಾರಕ್ಕೆ ಸೂಚಿಸಿದೆ. ಏನಿದ್ದರೂ ತಾನು ದಶಕಗಳಿಂದ ನಡೆದು ಬಂದಿರುವ ಸಂಪ್ರದಾಯದ ಪರ ದೃಢವಾಗಿ ನಿಲ್ಲುವುದಾಗಿ ಸರ್ಕಾರ ಹೇಳಿದೆ. ದೇವಾಲಯಕ್ಕೆ 10 ವರ್ಷದ ಒಳಗಿನ ಬಾಲಕಿಯರು ಮತ್ತು 50 ವರ್ಷ ಮೇಲ್ಪಟ್ಟ ಮಹಿಳೆರಿಯರಿಗೆ ಮಾತ್ರ ಪ್ರವೇಶಾವಕಾಶವಿದೆ.