ಬೆಂಗಳೂರು, ಡಿ.1: ಅಂಬೇಡ್ಕರ್ ರಚಿಸಿದ ಸಂವಿಧಾನ ಹಾಗೂ ಅವರ ನೀತಿಗಳನ್ನು ವಿರೋಧಿಸುವ ಮೋದಿಗೆ ಅವರ ಕುರಿತು ಹಾಗೂ ಸಂವಿಧಾನದ ಕುರಿತು ಮಾತನಾಡುವ ನೈತಿಕತೆಯಿಲ್ಲ ಎಂದು ಕಾರ್ಮಿಕ ಮುಖಂಡ ಸಿಪಿಐನ ರಾಜ್ಯ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ್ ಟೀಕಿಸಿದ್ದಾರೆ.
ಮಂಗಳವಾರ ನಗರದ ಫ್ರೀಡಂ ಪಾರ್ಕಿನಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ಅಸಹಿಷ್ಣುತೆ ಯನ್ನು ವಿರೋಧಿಸಿ ಆಯೋಜಿಸಿದ್ದ ಮೂರು ದಿನಗಳ ‘10ನೆ ರಾಜ್ಯ ಸಮ್ಮೇಳನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಪ್ರಧಾನಿ ನರೇಂದ್ರ ಮೋದಿಯವರು ವಿದೇಶಿ ಬಂಡವಾಳಗಾರರ ಅನುಕೂಲಕ್ಕಾಗಿ ದೇಶದಲ್ಲಿರುವ ಬಡವರು, ರೈತರು ಹಾಗೂ ಕಾರ್ಮಿಕರ ಪರವಾದ ಕಾನೂನುಗಳನ್ನು ತಿದ್ದುಪಡಿ ಮಾಡಲು ಮುಂದಾಗುವ ಮೂಲಕ ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದರು.
ದೇಶದಲ್ಲಿ ಅಧಿಕಾರಕ್ಕೆ ಬರುವ ಪ್ರತೀ ರಾಜಕೀಯ ಪಕ್ಷ ಅಭಿವೃದ್ಧಿಯ ಹೆಸರಿನಲ್ಲಿ ರೈತರ ಹಾಗೂ ಕಾರ್ಮಿಕರ ವಿರೋಧಿ ನೀತಿ ಗಳನ್ನು ಜಾರಿಗೆ ತಂದಿವೆ. ನೂತನ ಆರ್ಥಿಕ ನೀತಿ ಜಾರಿಗೆ ಬಂದಾಗಿನಿಂದ ಸುಮಾರು 3.5ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂ ಡಿದ್ದು, ರೈತರ ಆತ್ಮಹತ್ಯೆ ಹೆಚ್ಚಳ ಅಭಿವೃದ್ಧಿಯೇ ಎಂದು ಪ್ರಶ್ನಿಸಿದರು.
ಪ್ರಧಾನಿಯಾಗಿ ಮೋದಿಯವರು ಅಧಿಕಾರ ಸ್ವೀಕರಿಸಿ ಅವರು ಮಾಡಿದ ಮೊದಲ ಸಾಧನೆಯೆಂದರೆ ರೈತರ ಹಾಗೂ ಕಾರ್ಮಿಕರ ಪರವಾಗಿರುವ 65ಕ್ಕೂ ಹೆಚ್ಚು ಕಾನೂನುಗಳಿಗೆ ತಿದ್ದುಪಡಿಗಳನ್ನು ತರಲು ಮುಂದಾಗಿದ್ದು. ನಂತರ ರೈತರ ಭೂಮಿಯನ್ನು ಕಿತ್ತುಕೊಳ್ಳುವ ಭೂ ಸ್ವಾಧೀನ ಕಾಯ್ದೆಗೆ ಸುಗ್ರೀವಾಜ್ಞೆ ಹೊರಡಿಸಿದ್ದು ಎಂದು ವ್ಯಂಗ್ಯವಾಡಿದರು.
ನಂತರ ಮಾತನಾಡಿದ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತ ಸುಬ್ಬರಾವ್, ದೇಶದ ಮೊದಲ ಪ್ರಧಾನಿ ನೆಹರೂ ಅವರು ಸಾರ್ವಜನಿಕ ವಲಯ ದೇಶದ ಬಡವರ ದೇವಾಲಯ ಎಂದು ಹೇಳಿದ್ದರು. ಆದರೆ, ಮೋದಿಯಿಂದು ಉದ್ಯಮಿಗಳಿಗೆ ಹೆಚ್ಚು ಲಾಭ ಮಾಡಿಕೊಡುವ ಉದ್ದೇಶದಿಂದ ಸಾರ್ವಜನಿಕ ವಲಯವನ್ನು ಖಾಸಗೀಕರಣಗೊಳಿಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತದಲ್ಲಿ ಶೇ. 93ರಷ್ಟು ಕಾರ್ಮಿಕರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದು, ಶೇ.7ರಷ್ಟು ಕಾರ್ಮಿಕರು ಸಂಘಟಿತರಾಗಿದ್ದು, ಸಂವಿಧಾನದ ಮೂಲಕ ತಮ್ಮ ಹಕ್ಕುಗಳನ್ನು ಪಡೆದಿದ್ದಾರೆ. ಆದರೆ, ಈಗ ಮೋದಿಯವರು ಶೆ.7ರಷ್ಟು ಜನರನ್ನು ಬೀದಿಪಾಲು ಮಾಡಿ ನಿಶಕ್ತರನ್ನಾಗಿ ಮಾಡಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಭ್ರಷ್ಟಾಚಾರ ನಿಗ್ರಹಕ್ಕಾಗಿದ್ದ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಲು ಹುನ್ನಾರ ಮಾಡಿದ್ದು, ಈ ಮೂಲಕ ಭ್ರಷ್ಟ ಸಚಿವರನ್ನು ಹಾಗೂ ರಾಜಕಾರಣಿಗಳನ್ನು ಕಾಪಾಡಲು ರಾಜ್ಯ ಸರಕಾರ ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಕೆಲವು ವರ್ಷಗಳಿಂದ ರಾಜ್ಯದಲ್ಲಿ ಕಾರ್ಮಿಕ ಪ್ರತಿಭಟನೆಗಳು ಕಡಿಮೆಯಾಗಿದ್ದು, ಮಾಲಕರು ಕಂಪೆನಿಗಳನ್ನು ಮುಚ್ಚುವುದು ಹೆಚ್ಚಿದೆ. ಆದರೆ, ರಾಜ್ಯ ಕಾರ್ಮಿಕ ಸಚಿವರು ‘ಎಸ್ಮಾ’ ಕಾಯ್ದೆಯನ್ನು ಜಾರಿಗೆ ತಂದಿರುವುದರ ಹಿಂದೆ ಬಂಡವಾಳಗಾರರ ಕೈವಾಡವಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ಎಐಸಿಯುಸಿನ ಕಾರ್ಯಾಧ್ಯಕ್ಷ ಎಚ್.ಮಹದೇವನ್, ವಿದೇಶದಿಂದ ಕಪ್ಪು ಹಣ ತಂದು ದೇಶದ ಪ್ರತಿಯೊಬ್ಬ ಪ್ರಜೆಗೆ ತಲಾ 15ಲಕ್ಷ ರೂ. ಹಂಚುವುದಾಗಿ ತಿಳಿಸಿದ್ದ ಮೋದಿ, ಒಂದು ವರ್ಷ ಕಳೆದರೂ ಒಂದು ಪೈಸೆಯನ್ನು ಹಂಚಿಲ್ಲ. ಮೊದಲು ಅವರು ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನು 15 ಸಾವಿರ ಮಾಡಲಿ, ನಂತರ 15ಲಕ್ಷ ರೂ. ವಿತರಿಸಲಿ ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ ಸಮಾನ ಕೆಲಸಕ್ಕೆ, ಸಮಾನ ವೇತನ ನೀಡಬೇಕು ಎಂದು ಹಲವು ವರ್ಷಗಳ ಹಿಂದೆಯೇ ಆದೇಶ ನೀಡಿದೆ. ಆದರೆ, ಅದು ಇನ್ನೂ ಜಾರಿಗೆ ಬಂದಿಲ್ಲ ಎಂದ ಅವರು, ಕಾರ್ಮಿಕರಿಗೆ 15 ಸಾವಿರ ಕನಿಷ್ಠ ವೇತನವನ್ನು ನಿಗದಿಗೊಳಿಸಿ ಅವರಿಗೆ ಇಎಸ್‌ಐ ಹಾಗೂ ಪಿಎಫ್ ಸೌಲಭ್ಯಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.
ಈ ಮೊದಲು ಎಐಟಿಯುಸಿಯ ಸಾವಿರಾರು ಕಾರ್ಯಕರ್ತರು ನಗರದ ಟೌನ್‌ಹಾಲ್‌ನಿಂದ ಫ್ರೀಡಂ ಪಾರ್ಕಿನವರೆಗೆ ಮೆರವಣಿಗೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಅಸಹಿಷ್ಣುತೆಗೆ ಕೋಮುವಾದಿ ನೀತಿ ಕಾರಣ..!
ದೇಶದಲ್ಲಿ ವೈಷಮ್ಯ ಹಾಗೂ ಅಸಹಿಷ್ಣುತೆ ಹೆಚ್ಚಾಗಲು ಮೋದಿಯವರ ಕೋಮುವಾದಿ ನೀತಿಯೇ ಪ್ರಮುಖ ಕಾರಣ. ಹಿಂದೂ-ಮುಸ್ಲಿಮರ ನಡುವೆ ಕೋಮು ಗಲಭೆಗಳನ್ನು ಉಂಟುಮಾಡಿ ದೇಶವನ್ನು ವಿದೇಶಿಯರಿಗೆ ಮಾರಾಟ ಮಾಡಲು ಮೋದಿ ಮುಂದಾಗಿದ್ದಾರೆ
ಎಚ್.ವಿ.ಅನಂತ ಸುಬ್ಬರಾವ್, ಪ್ರಧಾನ ಕಾರ್ಯದರ್ಶಿ, ಎಐಟಿಯುಸಿ
