ರಾಷ್ಟ್ರೀಯ

ದೇಶದಲ್ಲೀಗ ಪ್ರತಿಭಟನೆ ಅಂದ್ರೆ ದೇಶದ್ರೋಹಕ್ಕೆ ಸಮವಾಗಿದೆ:ರಾಹುಲ್ ಕಿಡಿ

Pinterest LinkedIn Tumblr

rahul-gandhi-lok-sabha-aನವದೆಹಲಿ: ರಾಜ್ಯಸಭೆಯಲ್ಲಿ ಸಂವಿಧಾನದ ಬದ್ಧತೆ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಮತ್ತೊಂದೆಡೆ ಲೋಕಸಭೆಯಲ್ಲಿ ಅಸಹಿಷ್ಣುತೆ ಕುರಿತ ಚರ್ಚೆ ಮುಂದುವರಿದಿದ್ದು, ಇವತ್ತಿನ ಭಾರತದಲ್ಲಿ ಪ್ರತಿಭಟನೆ ನಡೆಸೋದು ದೇಶದ್ರೋಹವಾಗುತ್ತೆ. ನಿಮ್ಮ ಸಚಿವರು ದಲಿತರ ಮಕ್ಕಳನ್ನು ನಾಯಿಗಳಿಗೆ ಹೋಲಿಸುತ್ತಾರೆ…ಹೀಗೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಟು ಟೀಕಾಪ್ರಹಾರ ನಡೆಸಿದರು.

ಮಂಗಳವಾರ ಲೋಕಸಭೆಯಲ್ಲಿ ಮುಂದುವರಿದ ಅಸಹಿಷ್ಣುತೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ರಾಹುಲ್, ಗುಜರಾತ್ ನಲ್ಲಿ ಪಟೇಲ್ ಸಮುದಾಯದ ಮೀಸಲಾತಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಆದಕ್ಕೆ ಸರ್ಕಾರದಿಂದ ಅದಕ್ಕೆ ದೊರೆತ ಪ್ರತಿಕ್ರಿಯೆ ಏನು ಗೊತ್ತಾ? 20 ಸಾವಿರ ಎಫ್ ಐಆರ್ ದಾಖಲು ಮತ್ತು ದೇಶದ್ರೋಹದ ಆರೋಪ. ಹಾಗಾಗಿ ಇವತ್ತಿನ ಭಾರತದಲ್ಲಿ ಪ್ರತಿಭಟನೆ ನಡೆಸುವುದೆಂದರೆ ಅದರ ಅರ್ಥ ದೇಶದ್ರೋಹದ ಆರೋಪವನ್ನು ಮೈಮೇಲೆ ಎಳೆದುಕೊಳ್ಳು ಎಂದಾಗಿದೆ ಎಂಬುದಾಗಿ ರಾಹುಲ್ ಕಿಡಿಕಾರಿದರು.

ಹಾಗಾಗಿ ನಾನು ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ನೆರೆಯ ಪಾಕಿಸ್ತಾನದಿಂದ ತಪ್ಪು ಪಾಠವನ್ನು ಕಲಿಯಬೇಡಿ. ಏಕೆಂದರೆ, ಭಾರತದ ಅತಿ ದೊಡ್ಡ ಶಕ್ತಿ ಯಾವುದೆಂದರೆ ಅದು ಸಹಿಷ್ಣುತೆ, ಪಾಕಿಸ್ತಾನದ ಅತಿ ದೊಡ್ಡ ದೌರ್ಬಲ್ಯವೇ ಅಸಹಿಷ್ಣುತೆ ಎಂದು ರಾಹುಲ್ ಈ ಸಂದರ್ಭದಲ್ಲಿ ಹೇಳಿದರು.

ನಿಮ್ಮದೇ ಸಂಪುಟದ ಸಚಿವರೊಬ್ಬರು(ವಿಕೆ ಸಿಂಗ್) ದಲಿತ ಸಮುದಾಯದ ಮಕ್ಕಳನ್ನು ನಾಯಿ ಮರಿಗಳಿಗೆ ಹೋಲಿಸಿದರು. ಆದರೆ ಅಸಹಿಷ್ಣುತೆ ಬಗ್ಗೆ ಯಾಕೆ ಆಕ್ಷೇಪ ಎತ್ತಲಿಲ್ಲ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಪ್ರಧಾನಿಯವರು ಅಸಹಿಷ್ಣುತೆ ಕುರಿತು ಮಾತನಾಡುತ್ತ ಎಲ್ಲ ವಿಷಯವನ್ನು ಹೇಳಿದ್ದಾರೆ. ಆದರೆ ಅದರಲ್ಲಿ ಜನಸಾಮಾನ್ಯರ ಬಗ್ಗೆ ಕಳಕಳಿ ಇಲ್ಲ, ವಿಕೆ ಸಿಂಗ್ ಅವರಂತಹವರ ಅಸಹಿಷ್ಣುತೆ ಕುರಿತ ಹೇಳಿಕೆಗೆ ಎಚ್ಚರಿಕೆಯೂ ಇಲ್ಲ ಎಂದು ಟೀಕಿಸಿದರು.
-ಉದಯವಾಣಿ

Write A Comment