ಬೆಂಗಳೂರು, ಡಿ.28-ತಮ್ಮನ ಕೊಲೆಗೆ ಸೇಡು ತೀರಿಸಿಕೊಂಡ ಅಕ್ಕ ಸೇರಿದಂತೆ ಆರು ಜನರನ್ನು ಸಿದ್ದಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಯನಗರ 1ನೇ ಬ್ಲಾಕ್, ದಯಾನಂದನಗರ ವಾಸಿ ರಜಿಯಾ ಸುಲ್ತಾನ್ (33), ತಬ್ರೇಜ್ ಪಾಷಾ (36), ಮೊಹಮದ್ ಸುಲ್ತಾನ್ (23), ಸೈಯದ್ (24), ವಸಿಂ (23) ಮತ್ತು ಮಂಗಮ್ಮನ ಪಾಳ್ಯ ವಾಸಿ ಮೊಹಮದ್ ಜಹೀರ್ (27) ಬಂಧಿತರು. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ರಜಿಯಾಳ ತಮ್ಮ ಚೂನ್ಯ ಮತ್ತು ಅಲಿಯಾಸ್ ಮೊಹಮದ್ ಕಮಲ್‌ನನ್ನು ಜಾಫರ್ ಸಾದಿಕ್ 2014ರ ಮಾರ್ಚ್ ತಿಂಗಳಲ್ಲಿ ಹತ್ಯೆ ಮಾಡಿದ್ದನೆಂದು ಪೊಲೀಸರು ತಿಳಿಸಿದ್ದರು.
ಈ ಕೊಲೆಗೆ ಸೇಡು ತೀರಿಸಿಕೊಳ್ಳಲು ರಜಿಯಾ ಸುಲ್ತಾನ್ ತನ್ನ ಗಂಡ ತಬ್ರೇಜ್ ಹಾಗೂ ಆತನ ಸಹಚರರ ಜತೆ ಸೇರಿ ಸಂಚು ರೂಪಿಸಿದ್ದಳು ಎಂದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಚಿನಂತೆ ಡಿ.23 ರಂದು ಆರೋಪಿಗಳು ಜಾಫರ್‌ಸಾದಿಕ್‌ನ ಕಣ್ಣಿಗೆ ಖಾರದ ಪುಡಿ ಎರಚಿ, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಡಿಸಿಪಿ ಲೋಕೇಶ್‌ಕುಮಾರ್, ಎಸಿಪಿ ಕಾಂತರಾಜ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ರಾಘವೇಂದ್ರ ಮತ್ತು ಸಿಬ್ಬಂದಿ ರಜಿಯಾ ಹಾಗೂ ಇತರ 5 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ಕೃತ್ಯ ನಂತರ ವಿವಿಧೆಡೆ ತಲೆ ಮರೆಸಿಕೊಂಡಿದ್ದು, ಮಾಹಿತಿ ಕಲೆ ಹಾಕಿದ ಪೊಲೀಸರು ತಬ್ರೇಜ್ ಮತ್ತು ಮೊಹಮದ್‌ನನ್ನು ಅತ್ತಿಬೆಲೆಯಲ್ಲಿ ಮೊಹಮದ್ ಜಾಹಿರ್ ಮತ್ತು ಸಯ್ಯದ್‌ನನ್ನು ವಿಲ್ಸನ್ ಗಾರ್ಡನ್ ಗ್ರೌಂಡ್‌ನಲ್ಲಿ ವಸಿಂನನ್ನು ಸಿದ್ದಾಪುರದ ಎಸ್‌ಕೆ ಶಾಲೆ ಬಳಿ ಹಾಗೂ ರಜಿಯಾಳನ್ನು ಸಿದ್ದಾಪುರದ ನಿವಾಸದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಸೇಡಿಗೆ ಮತ್ತೊಂದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದವರನ್ನು ಬಂಧಿಸಿದ ಸಿದ್ದಾಪುರ ಠಾಣೆ ಪೊಲೀಸರ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
ಕರ್ನಾಟಕ