ಬೆಂಗಳೂರು: ಮೋಜಿನ ಜೀವನಕ್ಕಾಗಿ ಸಹಚರರ ಜತೆ ಸೇರಿ ದೊಡ್ಡಪ್ಪನ ಮನೆಗೇ ಕನ್ನ ಹಾಕಿದ್ದ ಕ್ಯಾಬ್ ಚಾಲಕ, ಚಿನ್ನ–ಬೆಳ್ಳಿ ಮಾತ್ರವಲ್ಲದೆ ಅಲ್ಮೆರಾವನ್ನೇ ಕದ್ದೊಯ್ದು ಪೊಲೀಸರಿಗೇ ಅಚ್ಚರಿ ಮೂಡಿಸಿದ್ದ. ಆತನ ಪೂರ್ವಾಪರವೇ ಈಗ ಆರೋಪಿಗೆ ಜೈಲಿನ ದಾರಿ ತೋರಿಸಿದೆ.
ಎಂ.ಸಿ.ಲೇಔಟ್ ನಿವಾಸಿ ಸುರೇಶ್ ಕುಮಾರ್ ಎಂಬುವರು, ಕುಟುಂಬ ಸದಸ್ಯರ ಜತೆ ನ.24ರಂದು ಊರಿಗೆ ಹೋಗಿದ್ದರು. ಮರುದಿನ ಬೆಳಿಗ್ಗೆ ಅವರು ವಾಪಸಾದಾಗ ಮನೆಯ ಬೀಗ ಮುರಿದಿತ್ತು. ಒಳಗೆ ಹೋಗಿ ನೋಡಿದಾಗ ಅಲ್ಮೆರಾವೇ ಇರಲಿಲ್ಲ. ಈ ಸಂಬಂಧ ಅವರು ವಿಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ಪ್ರಾರಂಭಿಸಿದ ಪೊಲೀಸರು, ಸುರೇಶ್ ಅವರ ಸ್ನೇಹಿತರು ಹಾಗೂ ಸಂಬಂಧಿಗಳ ಪೂರ್ವಾಪರ ಪರಿಶೀಲಿಸಿದ್ದಾರೆ. ಆಗ ಎರಡು ತಿಂಗಳ ಹಿಂದೆ ಸರಗಳವು ಪ್ರಕರಣದಲ್ಲಿ ಬಂಧಿತನಾಗಿದ್ದ ಉಲ್ಲಾಸ್ ಅಲಿಯಾಸ್ ಸ್ವಿಫ್ಟ್ ಉಲ್ಲಾಸ್, ಸುರೇಶ್ ಅವರ ತಮ್ಮನ ಮಗ ಎಂಬುದು ಗೊತ್ತಾಗಿದೆ.
ಮನೆಯಲ್ಲೇ ಅಡಗಿದ್ದ: ಪೋಷಕರ ಜತೆ ಎಂ.ಸಿ.ಲೇಔಟ್‌ನಲ್ಲೇ ನೆಲೆಸಿದ್ದ ಉಲ್ಲಾಸ್‌ನನ್ನು ಪೊಲೀಸರು ಠಾಣೆಗೆ ಕರೆ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ತಾನೇ ಕೃತ್ಯ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತ ನೀಡಿದ ಸುಳಿವು ಆಧರಿಸಿ ಮತ್ತೊಬ್ಬ ಆರೋಪಿ ಚನ್ನಪಟ್ಟಣದ ಸಚಿನ್ ಎಂಬಾತನನ್ನೂ ಬಂಧಿಸಿದ್ದಾರೆ. ಪ್ರಕರಣದ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಕಾರಿನ ಮೇಲೆ ಅಲ್ಮೆರಾ: ಸಾಕಷ್ಟು ಸಾಲ ಮಾಡಿಕೊಂಡಿದ್ದ ಉಲ್ಲಾಸ್, ದೊಡ್ಡಪ್ಪನ ಮನೆಯಲ್ಲಿ ಕಳವು ಮಾಡಿ ಆ ಸಾಲ ತೀರಿಸಲು ಸಂಚು ರೂಪಿಸಿದ್ದ. ನ.24ರಂದು ಅವರ ಕುಟುಂಬ ಊರಿಗೆ ತೆರಳುತ್ತಿರುವ ವಿಷಯ ತಿಳಿದುಕೊಂಡ ಆತ, ತನ್ನ ಮೂವರು ಸಚರರನ್ನು ಮನೆ ಹತ್ತಿರ ಕರೆಸಿಕೊಂಡಿದ್ದ.
ಮನೆಗೆ ನುಗ್ಗಿದ ಕೂಡಲೇ ಒಂದು ಸಿಲಿಂಡರ್ ಕದ್ದು ಕಾರಿನಲ್ಲಿ ಇಟ್ಟುಕೊಂಡಿದ್ದರು. ನಂತರ ಅಲ್ಮೆರಾ ಬೀಗ ಮುರಿಯಲು ಹರಸಾಹಸ ಪಟ್ಟ ಅವರು, ಕೊನೆಗೇ ಅಲ್ಮೆರಾವನ್ನೇ ಹೊತ್ತು ಹೊರ ತಂದಿದ್ದರು. ಬಳಿಕ ಅದನ್ನು ಕಾರಿನ ಮೇಲೆ ಹಗ್ಗದಿಂದ ಕಟ್ಟಿಕೊಂಡು ತಾವರೆಕೆರೆಯತ್ತ ಸಾಗಿದ್ದರು. ಅಲ್ಲಿನ ನಿರ್ಜನ ಪ್ರದೇಶದಲ್ಲಿ ಅಲ್ಮೆರಾದ ಬೀಗ ಮುರಿದು 100 ಗ್ರಾಂ ಚಿನ್ನದ ಸರ, 3 ಕೆ.ಜಿ ಬೆಳ್ಳಿಯ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.
ಕೆರೆಯಲ್ಲಿ ಪತ್ತೆ
‘ಕದ್ದ ಒಡವೆಗಳೆಲ್ಲ ಉಲ್ಲಾಸ್ ಬಳಿಯೇ ಇದ್ದವು. ನ.15ರ ಭಾನುವಾರ ಅವುಗಳನ್ನು ಮಾರಾಟ ಮಾಡಿ, ಸಮನಾಗಿ ಹಣ ಹಂಚಿಕೊಳ್ಳಲು ಆರೋಪಿಗಳು ನಿರ್ಧರಿಸಿದ್ದರು. ನ.9ರಂದು ಇಬ್ಬರನ್ನೂ ಬಂಧಿಸಿ, ಒಡವೆ, ಸಿಲಿಂಡರ್ ಹಾಗೂ ತಾವರೆಕೆರೆಯಲ್ಲಿ ಎಸೆದಿದ್ದ ಅಲ್ಮೆರಾವನ್ನು ಜಪ್ತಿ ಮಾಡಲಾಗಿದೆ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದರು.
