ಕನ್ನಡ ವಾರ್ತೆಗಳು

ವಿದ್ಯಾರ್ಥಿನಿ ವರ್ಷಾ ಆಳ್ವ ಸಾವು ಪ್ರಕರಣ : ಸಹಪಾಠಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗೆ ನ್ಯಾಯಾಲಯ ಆದೇಶ

Pinterest LinkedIn Tumblr

Puttur_train_Varsha_1a

ಪುತ್ತೂರು,ನ.14: ಮಂಗಳೂರಿನ ಕೊಂಚಾಡಿ ನಿವಾಸಿ, ಪುತ್ತೂರು ಖಾಸಗಿ ಕಾಲೇಜು ವಿದ್ಯಾರ್ಥಿನಿ ವರ್ಷಾ ಆಳ್ವ (19) ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸಹಪಾಠಿ ವಿದ್ಯಾರ್ಥಿಗಳಿಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪುತ್ತೂರು ನ್ಯಾಯಾಲಯ ಆದೇಶಿಸಿದೆ.

2014ರ ಸೆ.28ರಂದು ಈಕೆ ಪುತ್ತೂರು ಸಮೀಪದ ನೆಹರೂ ನಗರದಲ್ಲಿ ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ಮೃತಪಟ್ಟಿದ್ದರು ಎಂದು ಮಂಗಳೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಪೊಲೀಸರ ತನಿಖೆಯಿಂದ ತೃಪ್ತರಾಗದ ವರ್ಷಾ ತಂದೆ, ಮಾಜಿ ಸೈನಿಕ ದಯಾನಂದ ಆಳ್ವ ಪುತ್ತೂರು ನ್ಯಾಯಾಲಯ ದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ವಿಚಾರಣೆ ನಡೆಸಿದ ಪ್ರಧಾನ ದಂಡಾಧಿಕಾರಿ ಸಿ.ಕೆ.ಬಸವರಾಜ್ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ರಚನಾ ಹಾಗೂ ಬಿಕಾಂ ವಿದ್ಯಾರ್ಥಿ ಸುಕೇಶ್‌ರಾಜ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಆದೇಶಿಸಿದ್ದಾರೆ. ವರ್ಷಾ 2ನೆ ವರ್ಷದ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು. ಆರೋಪಿ ರಚನಾ ಹಾಗೂ ಇತರರು ಸಹಪಾಠಿಗಳಾಗಿದ್ದು,ಹಾಸ್ಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು.

ರಚನಾ ಹಾಗೂ ವರ್ಷಾ ಆಳ್ವ ನಡುವೆ ಮನಸ್ತಾಪವಿದ್ದು, ಈ ವಿಚಾರವನ್ನು ವರ್ಷ ಹೆತ್ತವರ ಗಮನಕ್ಕೆ ತಂದಿದ್ದರು. 2014ರ ಸೆ.28ರಂದು ರಚನಾ ಮತ್ತು ಇತರ ಕೆಲ ವಿದ್ಯಾರ್ಥಿನಿಯರು ಹುಟ್ಟುಹಬ್ಬದ ಪಾರ್ಟಿ ಕೊಡಿಸುವುದಾಗಿ ನಂಬಿಸಿ, ಆಕೆಯನ್ನು ನೆಹರುನಗರ ರೈಲ್ವೆ ಹಳಿ ಬಳಿಗೆ ಕರೆದೊಯ್ದಿದ್ದರು.

ಫೋಟೋ ತೆಗೆಯುವ ನೆಪದಲ್ಲಿ ವರ್ಷಾಳನ್ನು ರೈಲ್ವೆ ಹಳಿಗೆ ದೂಡಿ ಹಾಕಿ ಹತ್ಯೆಗೈಯಲಾಗಿದೆ. ಬಳಿಕ ಸುಕೇಶ್‌ರಾಜ್‌ನ ಸಹಾಯದೊಂದಿಗೆ ಮೃತದೇಹವನ್ನು ಬೇರೆ ಕಡೆಗೆ ಸಾಗಿಸಲಾಗಿತ್ತು ಎಂದು ದಯಾನಂದ ಆಳ್ವ ಆರೋಪಿಸಿದ್ದರು. ಆ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 302, 379, 201ರ ಸಹ ಕಲಂ 34ರಂತೆ ಪ್ರಕರಣ ದಾಖಲಿಸಲು ನ್ಯಾಯಾಧೀಶರು ಆದೇಶಿಸಿದ್ದಾರೆ.

Write A Comment