ಮಂಗಳೂರು,ನ.14 : ಟಿಪ್ಪು ಜಯಂತಿ, ಕುಟ್ಟಪ್ಪ ಹತ್ಯೆ ಮತ್ತು ಬಂಟ್ವಾಳ ಹರೀಶ್ ಕೊಲೆ ಖಂಡಿಸಿ ವಿಎಚ್ಪಿ, ಬಜರಂಗದಳ- ಸಂಘಪರಿವಾರ ಕೊಟ್ಟ ಬಂದ್ ಕರೆಗೆ ದ.ಕ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇದೇ ಪರಿಸ್ಥಿತಿಯ ದುರ್ಲಾಭ ಎತ್ತಲು ಹವಣಿಸಿದ ದುಷ್ಕರ್ಮಿಗಳು ಬಂದರ್ ಪ್ರದೇಶದ ಕಸಾಯಿಗಲ್ಲಿ ಮಸೀದಿಗೆ ಕಲ್ಲು ತೂರಿ ಗಾಜು ಪುಡಿಗೈದ ಕಳವಳಕಾರಿ ಘಟನೆ ವರದಿಯಾಗಿದೆ.
ಬಂದರ್ನ್ ಕಸಾಯಿಗಲ್ಲಿ ಅಸಾಸುಲ್ ಇಸ್ಲಾಮ್ ಮಸೀದಿಗೆ ಸ್ಕೊರ್ಪಿಯೊ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಕಲ್ಲೆಸೆದು ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕಲ್ಲೆಸೆತ ಸುದ್ದಿಯಾಗುವಂತೆ ಪರಿಸರದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೋಲೀಸ್ ಕಮಿಷನರ್ ಸೇರಿದಂತೆ ಹಿರಿಯ ಅಧಿಕಾರಿಗಳು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ತಕ್ಷಣ ಮಸೀದಿಗೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಮುರುಗನ್ ಅವರು, ಜನರು ಇಂಥ ಸೌಹಾರ್ದ ಕದಡುವ ಘಟನೆಗಳಿಂದ ಉದ್ರಿಕ್ತರಾಗದಂತೆ ಮನವಿ ಮಾಡಿದ್ದಾರೆ.
ಬಂದರು ಠಾಣೆ ಪೋಲೀಸರು ಪ್ರಕರಣ ದಾಖಲಿಸಿದ್ದರು. ತಕ್ಷಣ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಬಂದರು ಪೋಲೀಸರು ಮಸೀದಿಗೆ ಕಲ್ಲು ತೂರಾಟ ನಡೆಸಿದ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ನಿತಿನ್ ಶೆಟ್ಟಿ (21), ಸುಶಾಂತ್ (16), ಭವಂತಿ ಸ್ಟ್ರೀಟ್ ನ ಗುರುಕಿರಣ್ (18) ಹಾಗೂ ಬಜಿಲಕೇರಿಯ ಮಂಜು (24) ಎಂದು ಗುರುತಿಸಲಾಗಿದೆ. ಕೆ.ಎ 16 ಝಡ್ 5180 ಸ್ಕೋರ್ಪಿಯೋ ವಾಹನದಲ್ಲಿ ಬಂದ ಈ ನಾಲ್ವರು ಮಸೀದಿಗೆ ಕಲ್ಲು ತೂರಿ ಪರಾರಿಯಾಗಿದ್ದಾರು.

