ಬೆಂಗಳೂರು, ಅ.18: ಮೀಸಲಾತಿ ವಿರುದ್ಧವಿರುವ ಕೊಳಕು ಮನಸ್ಸುಗಳ ವಿರುದ್ಧ ಶೋಷಿತರು ಸದಾ ಜಾಗೃತರಾಗಿರಬೇಕೆಂದು ಸಲಹೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸದಿದ್ದರೆ ಅವಕಾಶ ವಂಚಿತರಿಗೆ ಘೋರ ಅನ್ಯಾಯವಾಗಲಿದೆ ಎಂದು ಎಚ್ಚರಿಸಿದ್ದಾರೆ.
ರವಿವಾರ ನಗರದ ಗಾಂಧಿ ಭವನದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟ, ವಾಲ್ಮೀಕಿ ನಾಯಕ ಮಹಾಸಭಾ, ಸಮಾಜ ವೇದಿಕೆ ಆಶ್ರಯದಲ್ಲಿ ಏರ್ಪಡಿಸಿದ್ದ ‘ಸಾಮಾಜಿಕ ನ್ಯಾಯ ಮತ್ತು ಮೀಸಲಾತಿ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಅಳವಾಗಿ ಬೇರೂರಿರುವ ಜಾತಿ ತಾರತಮ್ಯ ಕೊನೆಗೊಳ್ಳಲು ಅವಕಾಶ ವಂಚಿತರಿಗೆ ಸಮಾನ ಅವಕಾಶಗಳು ದಕ್ಕಬೇಕು. ಆ ನಿಟ್ಟಿನಲ್ಲಿ ಜಾರಿಗೊಳಿಸಿರುವ ಮೀಸಲಾತಿ ಶೋಷಿತರಿಗೆ ದೊರೆಯಬೇಕು ಎಂದು ಪ್ರತಿಪಾದಿಸಿದ ಸಿದ್ದರಾಮಯ್ಯ, ಮೀಸಲಾತಿಯ ಕುರಿತು ದ್ವಿಮುಖ ನೀತಿ ಅನುಸರಿಸುವವರ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಟೀಕಿಸಿದರು.
ಇತ್ತೀಚಿನ ದಿನಗಳಲ್ಲಿ ಮೀಸಲಾತಿ ಕುರಿತ ಬಂದ ಪರಿಕಲ್ಪನೆಯೇ ಬದಲಾಗುತ್ತಿದ್ದು, ಮೀಸಲಾತಿಯ ಮಹತ್ವವೂ ಕಡಿಮೆಯಾಗುತ್ತಿದೆ. ಖಾಸಗಿಕರಣ ಹೆಚ್ಚಾದಂತೆ ಸರಕಾರಿ ವಲಯಕ್ಕಿಂತ ಖಾಸಗಿ ವಲಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತಿದ್ದು, ಆ ಕ್ಷೇತ್ರದಲ್ಲಿ ಅವಕಾಶ ವಂಚಿತ ವರ್ಗಗಳಲ್ಲಿ ಮೀಸಲಾತಿ ಕಲ್ಪಿಸಲು ಹೋರಾಟದ ಅಗತ್ಯವಿದೆ ಎಂದು ಸಿದ್ದರಾಮಯ್ಯ ಸೂಚಿಸಿದರು.
ರಾಜಕೀಯ ಮತ್ತು ನ್ಯಾಯಾಂಗ ಕ್ಷೇತ್ರದಲ್ಲೂ ಶೋಷಿತರಿಗೆ ಮೀಸಲಾತಿ ಕಲ್ಪಿಸಬೇಕು. ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿಯೂ ಈ ಬಗ್ಗೆ ಚರ್ಚೆ ಅಗತ್ಯ ಎಂದ ಮುಖ್ಯಮಂತ್ರಿ, ಆರ್ಥಿಕವಾಗಿ ಹಿಂದುಳಿದವರಿಗೂ ಮೀಸಲಾತಿ ಕಲ್ಪಿಸಬೇಕೆಂಬ ಕೂಗೆಬ್ಬಿಸಲಾಗುತ್ತಿರುವುದು ಸಂವಿಧಾನಬಾಹಿರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಾತಿಯ ಅವಮಾನದ ಕಾರಣಕ್ಕೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿರುವುದು; ಆರ್ಥಿಕವಾಗಿ ಹಿಂದುಳಿದವರಿಗಲ್ಲ ಎಂದು ಸ್ಪಷ್ಟಣೆ ನೀಡಿದ ಸಿದ್ದರಾಮಯ್ಯ, ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸಬೇಕೆಂಬ ಒತ್ತಾಯದ ಹಿಂದೆ ಕುತಂತ್ರ ಅಡಗಿದೆ. ಇದರಲ್ಲಿ ಸಾಮಾಜಿಕ ಹಿತಾಸಕ್ತಿ ಇಲ್ಲ ಎಂದರು.
ಮೀಸಲಾತಿಯ ಫಲವನ್ನು ಅನುಭವಿಸುತ್ತಿರುವ ಹಿಂದುಳಿದ ವರ್ಗದವರು ಉಳ್ಳವರಂತೆ ಸಂತೃಪ್ತರಾಗಿದ್ದು, ಅವರಲ್ಲಿ ಹೋರಾಟದ ಮನೋಭಾವ ಕ್ಷೀಣಿಸುತ್ತಿದೆ. ಇದು ಆ ಸಮುದಾಯಕ್ಕೆ ಒಳ್ಳೆಯದಲ್ಲ. ಪ್ರತಿರೋಧದ ಮನಸ್ಸಿಲ್ಲದ ಹಿನ್ನೆಲೆಯಲ್ಲಿ ಮೇಲ್ಜಾತಿ- ಮೇಲ್ವರ್ಗದವರು, ಶೋಷಣೆಗೆ ಗುರಿಪಡಿಸುತ್ತಿದ್ದಾರೆಂದು ವಿಶ್ಲೇಷಿಸಿದರು.
ಮೀಸಲು ನೀತಿಗೆ ತಿದ್ದುಪಡಿ ಅಗತ್ಯ: ಖಾಸಗಿ ವಲಯದಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಅಗತ್ಯ ತಿದ್ದುಪಡಿ ತರುವ ಮೂಲಕ ಗುತ್ತಿಗೆ ಪದ್ಧತಿಗೆ ಕೊನೆ ಹಾಡಬೇಕು ಎಂದು ಕಾನೂನು ಆಯೋಗದ ಅಧ್ಯಕ್ಷ ನಾಡೋಜ ನ್ಯಾ.ಎಸ್.ಆರ್. ನಾಯಕ್ ಆಗ್ರಹಿಸಿದರು. ಖಾಸಗಿಕರಣದ ಹಿನ್ನೆಲೆಯಲಿ ಸರಕಾರಿ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಕಡಿಮೆ ಆಗುತ್ತಿದ್ದು, ಖಾಸಗಿ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿದ್ದು, ಆ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಬೇಕೆಂದ ಅವರು, ಸ್ವಾತಂತ್ರ ಬಂದ ಆರು ದಶಕಗಳು ಕಳೆದರೂ ಎಲ್ಲಿಯೂ ಸಮಾನತೆ ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಮೇಲ್ಮನೆ ಸದಸ್ಯರಾದ ವಿ.ಎಸ್. ಉಗ್ರಪ್ಪ, ರೇವಣ್ಣ, ಮಾಜಿ ಶಾಸಕ ಎ.ಕೆ.ಸುಬ್ಬಯ್ಯ ಸೇರಿ ಇನ್ನಿತರರು ಪಾಲ್ಗೊಂಡಿದ್ದರು.
