ಹೊಸದಿಲ್ಲಿ,ಅ.19: ಗೋಮಾಂಸ ಸೇವನೆಯ ವದಂತಿಗಳಿಂದಾಗಿ ದಾದ್ರಿಯಲ್ಲಿ ಮುಹಮ್ಮದ್ ಅಖ್ಲಾಕ್ ಹತ್ಯೆಯು ‘ಯಾವುದೇ ಕಾರಣವಿಲ್ಲದೇ ನಡೆದಿದ್ದಲ್ಲ, ಗೋಹಂತಕರನ್ನು ಕೊಲ್ಲುವಂತೆ ವೇದಗಳೇ ಆದೇಶಿಸಿವೆ’ ಎಂದು ಆರೆಸ್ಸೆಸ್ ಮುಖವಾಣಿ ಪಾಂಚಜನ್ಯ ತನ್ನ ಮುಖಪುಟ ಲೇಖನದಲ್ಲಿ ಪ್ರತಿಪಾದಿಸುವ ಮೂಲಕ ಗೋಮಾಂಸ ಕುರಿತು ನಡೆಯುತ್ತಿರುವ ಚರ್ಚೆಗೆ ಇನ್ನಷ್ಟು ಕಾವು ನೀಡಿದೆ.
ಗೋವನ್ನು ಕೊಲ್ಲುವ ಯಾರನ್ನೇ ಆದರೂ ಕೊಲ್ಲುವಂತೆ ವೇದಗಳು ಆದೇಶಿಸಿವೆ. ಗೋಹತ್ಯೆ ಹಿಂದೂ ಸಮುದಾಯಕ್ಕೆ ದೊಡ್ಡ ಸಮಸ್ಯೆಯಾಗಿದೆ. ನಮ್ಮಲ್ಲಿ ಹೆಚ್ಚಿನವರ ಪಾಲಿಗೆ ಇದು ಬದುಕು ಮತ್ತು ಸಾವಿನ ಪ್ರಶ್ನೆಯಾಗಿದೆ ಎಂದು ಲೇಖನವು ಹೇಳಿದೆ.
ದಾದ್ರಿ ಹತ್ಯೆಯನ್ನು ಪ್ರತಿಭಟಿಸಿ ತಮ್ಮ ಪ್ರಶಸ್ತಿಗಳನ್ನು ಮರಳಿಸುತ್ತಿರುವ ಸಾಹಿತಿಗಳ ಬಂಡಾಯವನ್ನೂ ಪ್ರಶ್ನಿಸಿರುವ ಅದು, ಅಖ್ಲಾಕ್ ಗೋ ಹತ್ಯೆ ಮಾಡಿದ್ದು ನಿಮ್ಮ(ಸಾಹಿತಿಗಳ) ಕಣ್ಣಿಗೆ ಬೀಳುತ್ತಿಲ್ಲ. ಅಖ್ಲಾಕ್‌ನೊಂದಿಗೆ ಗ್ರಾಮದ ಯಾರಿಗೂ ದ್ವೇಷವಿರಲಿಲ್ಲ ಎಂಬ ಮಾಧ್ಯಮ ವರದಿಗಳ ಸತ್ಯ ನಿಮಗೆ ಕಾಣುತ್ತಿಲ್ಲ. ದಾದ್ರಿ ಗ್ರಾಮವೆಂದೂ ಯಾವುದೇ ಬಗೆಯ ಕೋಮು ಉದ್ವಿಗ್ನತೆಯನ್ನು ಕಂಡಿಲ್ಲ. ಅಖ್ಲಾಕ್ ಹತ್ಯೆ ಕಾರಣವಿಲ್ಲದೆ ನಡೆದಿದೆಯೆಂದು ಯಾರಾದರೂ ನಂಬಿರಬಹುದು. ಆದರೆ ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇರುತ್ತದೆ ಎಂದು ನ್ಯೂಟನ್ ನಿಯಮ ಹೇಳುತ್ತದೆ ಎಂದು ಲೇಖನವು ಹೇಳಿದೆ.
ಶಾಂತಿಯ ಇತಿಹಾಸವಿರುವ ಗ್ರಾಮದಲ್ಲಿ ಅಖ್ಲಾಕ್ ಹತ್ಯೆ ಕಾರಣವಿಲ್ಲದೆ ನಡೆದಿರುವುದು ಸಾಧ್ಯವಿಲ್ಲ ಎಂದಿದೆ. ಇಂತಹ ಘೋರ ಪರಿಣಾಮಗಳನ್ನು ಹೊಂದಿರುವ ಅಪರಾಧವನ್ನೆಸಗಲು ಅಖ್ಲಾಕ್‌ಗೆ ಪ್ರಚೋದಿಸಿದ ಸಾಮಾಜಿಕ ಮನಃಸ್ಥಿತಿಯನ್ನು ನೀವೇಕೆ ಪ್ರಶ್ನಿಸುತ್ತಿಲ್ಲ ಎಂದು ಅದು ಬಂಡಾಯವೆದ್ದಿರುವ ಸಾಹಿತಿಗಳನ್ನು ಪ್ರಶ್ನಿಸಿದೆ.
ಲೇಖಕನ ಪ್ರಲಾಪ ಇಷ್ಟಕ್ಕೇ ಮುಗಿದಿಲ್ಲ. ಈಗಿನ ಮುಸ್ಲಿಮರೆಲ್ಲ ಕೆಲವು ತಲೆಮಾರುಗಳ ಹಿಂದೆ ಹಿಂದೂಗಳೇ ಆಗಿದ್ದರು. ತಮ್ಮದೇ ಸಂಸ್ಕೃತಿ ಮತ್ತು ವೌಲ್ಯಗಳನ್ನು ಹೀಗಳೆಯಲು ಮತಾಂತರಿತ ಭಾರತೀಯರಿಗೆ ಕಲಿಸಿದವರು ಯಾರು? ಎಷ್ಟೆಂದರೂ ಅಖ್ಲಾಕ್ ಸೇರಿದಂತೆ ಎಲ್ಲ ಭಾರತೀಯ ಮುಸ್ಲಿಮರೂ ಕೆಲವು ತಲೆಮಾರುಗಳ ಹಿಂದಿನವರೆಗೂ ಹಿಂದೂಗಳೇ ಆಗಿದ್ದರು. ಅಖ್ಲಾಕ್‌ನ ಪೂರ್ವಜರೂ ಗೋಹಂತಕರನ್ನು ಶಿಕ್ಷಿಸುವ ಹಲವಾರು ಧೈರ್ಯವಂತರಂತೆ ಗೋರಕ್ಷಕರೇ ಆಗಿದ್ದರು ಎಂದಿರುವ ಅದು, ಈ ಮತಾಂತರಿತ ಜನರು ಗೋರಕ್ಷಕರಿಂದ ಗೋಹಂತಕರಾಗುವಷ್ಟು ದ್ವೇಷವನ್ನು ಅದ್ಹೇಗೆ ಬೆಳೆಸಿಕೊಂಡರು ಎಂದು ಪ್ರಶ್ನಿಸಿದೆ.
