ಬೆಂಗಳೂರು, ಅ. 8: ಸ್ನೇಹಿತರೊಂದಿಗೆ ಕೆರೆಯಲ್ಲಿ ಈಜಲು ಹೋಗಿ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಬಾಲಕ ಗುರುವಾರ ಶವವಾಗಿ ಪತ್ತೆಯಾಗಿದ್ದಾನೆ.
ಸುಲ್ತಾನಪಾಳ್ಯದ ನಿವಾಸಿಯಾಗಿದ್ದ ಪ್ರಕಾಶ್ ಬುಧವಾರ ಅಪರಾಹ್ನ ತನ್ನ ಸ್ನೇಹಿತ ಹಾಗೂ ಸಹೋದರ ಸೂರ್ಯನೊಂದಿಗೆ ಮಾನ್ಯತಾ ಟೆಕ್ ಪಾರ್ಕ್ ಹಿಂಭಾಗದ ದಾಸರಹಳ್ಳಿ ಕೆರೆಯಲ್ಲಿ ಈಜಾಡಲು ತೆರಳಿದ್ದ. ಕೆಲ ಕಾಲ ಸ್ನೇಹಿತರೊಂದಿಗೆ ಆಟವಾಡಿ ಈಜಾಡಲು ಕೆರೆಗೆ ಇಳಿದಾಗ ಕೋಡಿ ಬಿದ್ದಿದ್ದ ಕೆರೆ ನೀರಿನ ರಭಸಕ್ಕೆ ರಾಜಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದ.
ಆತನ ಸ್ನೇಹಿತರು ಪ್ರಕಾಶನನ್ನು ರಕ್ಷಿಸಲು ಯತ್ನಿಸಿದರಾದರೂ ಸಫಲರಾಗಲಿಲ್ಲ. ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ಸಂಪಿಗೆಹಳ್ಳಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಪ್ರಕಾಶನ ಪತ್ತೆಗಾಗಿ ಶೋಧ ನಡೆಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕತ್ತಲಾಗಿದ್ದರಿಂದ ಬುಧವಾರ ಸಂಜೆ ಶೋಧ ಕಾರ್ಯ ಸ್ಥಗಿತಗೊಳಿಸಿದ್ದ ಅಗ್ನಿಶಾಮಕ ಸಿಬ್ಬಂದಿ ಗುರುವಾರ ಬೆಳಗ್ಗೆ 6 ಗಂಟೆಯಿಂದ ಪಾತಾಳ ಗರಡಿ ಬಳಸಿ ಕಾರ್ಯಾಚರಣೆ ಮುಂದುವರಿಸಿದ್ದರು.
ಪ್ರಕಾಶ ಕೊಚ್ಚಿ ಹೋದ 50 ಮೀಟರ್ ಅಂತರದಲ್ಲಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾಗ ಕಾಲುವೆಯಲ್ಲಿದ್ದ ಪ್ರಕಾಶ್ ಮೃತದೇಹ ಪತ್ತೆಯಾಗಿದೆ.
ಪರಿಹಾರ: ಶೋಧ ಕಾರ್ಯಾಚರಣೆ ಸ್ಥಳ್ಕಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೇಯರ್ ಮಂಜುನಾಥ ರೆಡ್ಡಿ ಅವರು ಪ್ರಕಾಶ್ನ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿ, ಬಿಬಿಎಂಪಿಯಿಂದ ಅಗತ್ಯ ಪರಿಹಾರ ಕೊಡಿಸುವ ಭರವಸೆ ನೀಡಿದರು.ರಾಜಕಾಲುವೆಗಳಲ್ಲಿ ಮಕ್ಕಳು ಕೊಚ್ಚಿ ಕೊಂಡು ಹೋಗಿ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕ ಸೃಷ್ಟಿಸಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
