ರಾಷ್ಟ್ರೀಯ

ವಾಯುಪಡೆ ಪರಿಶೀಲನೆ: ಯುದ್ಧ ವಿಮಾನಗಳಲ್ಲಿ ಮಹಿಳಾ ಪೈಲಟ್‌ಗಳ ನಿಯೋಜನೆ

Pinterest LinkedIn Tumblr

111________ಹೊಸದಿಲ್ಲಿ, ಅ. 8: ಮಹಿಳೆಯರನ್ನು ಯುದ್ಧ ವಿಮಾನಗಳ ಪೈಲಟ್‌ಗಳಾಗಿ ನಿಯೋಜಿಸುವ ಬಗ್ಗೆ ಸರಕಾರ ಪರಿಶೀಲನೆ ನಡೆಸುತ್ತಿದೆ ಎಂದು ಭಾರತೀಯ ವಾಯು ಪಡೆ (ಐಎಎಫ್) ಯ ಮುಖ್ಯಸ್ಥ ಅರೂಪ್ ರಾಹ ಗುರುವಾರ ತಿಳಿಸಿದ್ದಾರೆ.
‘‘ಸಾಗಾಟ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಹಾರಿಸುವ ಮಹಿಳಾ ಪೈಲಟ್‌ಗಳು ನಮ್ಮಲ್ಲಿದ್ದಾರೆ. ಭಾರತದ ಯುವ ಮಹಿಳೆಯರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮಹಿಳೆಯರನ್ನು ಯುದ್ಧ ವಿಮಾನಗಳ ಪೈಲಟ್‌ಗಳಾಗಿ ನಿಯೋಜಿಸುವ ಬಗ್ಗೆ ಸಮಾಲೋಚನೆ ಜಾರಿಯಲ್ಲಿದೆ’’ ಎಂದು ಹಿಂಡನ್ ವಾಯುನೆಲೆಯಲ್ಲಿ ವಾರ್ಷಿಕ ವಾಯು ಪಡೆ ದಿನದ ಪರೇಡ್‌ನಲ್ಲಿ ರಾಹ ಹೇಳಿದರು.

ಮಹಿಳೆಯರನ್ನು ಯುದ್ಧ ವಿಮಾನಗಳ ಪೈಲಟ್‌ಗಳಾಗಿ ನಿಯೋಜಿಸುವ ವಿಷಯದಲ್ಲಿ ಭಾರತೀಯ ವಾಯು ಪಡೆ ಕಳೆದ ಹಲವಾರು ವರ್ಷಗಳಿಂದ ಗೊಂದಲದಲ್ಲಿದೆ. ಅಧಿಕ ಸಾಮರ್ಥ್ಯದ ಯುದ್ಧ ವಿಮಾನಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಮಹಿಳೆಯರಿಗೆ ಸಾಧ್ಯವೇ ಎಂಬ ಜಿಜ್ಞಾಸೆ ಎಲ್ಲ ಗೊಂದಲಗಳ ಕೇಂದ್ರಬಿಂದುವಾಗಿದೆ.ಸೇನೆಯ ಮೂರು ವಿಭಾಗಗಳ ಮುಖ್ಯಸ್ಥರನ್ನೊಳರಗೊಂಡ ಸೇನಾ ಮುಖ್ಯಸ್ಥರ ಸಮಿತಿಯು, ಯುದ್ಧ ವಿಮಾನಗಳಲ್ಲಿ ಮಹಿಳೆಯರನ್ನು ನಿಯೋಜಿಸಬಾರದು ಎಂಬುದಾಗಿ 2007 ಮಾರ್ಚ್‌ನಲ್ಲಿ ಸರಕಾರಕ್ಕೆ ಶಿಫಾರಸು ಮಾಡಿತ್ತು. ಅಲ್ಲಿಂದೀಚೆಗೆ ಸೇನೆ ಬಹು ದೂರ ಸಾಗಿಬಂದಿದೆ.ಭಾರತೀಯ ಸೇನೆಯಲ್ಲಿ ಈಗ 3,250ಕ್ಕೂ ಹೆಚ್ಚು ಮಹಿಳೆಯರಿದ್ದಾರೆ. ಆದರೆ, ಯುದ್ಧ ವಿಮಾನಗಳನ್ನು ಹಾರಿಸುವುದು ಹಾಗೂ ಪದಾತಿ, ಸಶಸ್ತ್ರ ಪಡೆ ಮತ್ತು ಯುದ್ಧ ನೌಕೆಗಳಲ್ಲಿ ಕಾರ್ಯನಿರ್ವಹಿಸುವಂಥ ಮುಖಾಮುಖಿ ಯುದ್ಧದ ಪಾತ್ರಗಳಿಂದ ಅವರನ್ನು ದೂರ ಇಡಲಾಗಿದೆ.2014ರ ಮೊದಲು ಮಹಿಳೆಯರು ಯುದ್ಧ ವಿಮಾನಗಳನ್ನುಹಾರಿಸಬಹುದಾಗಿದೆ ಎಂಬುದಾಗಿ 2009ರಲ್ಲಿ ನಿವೃತ್ತಿಯಾಗುವ ಮುನ್ನ ಅಂದಿನ ವಾಯು ಪಡೆ ಮುಖ್ಯಸ್ಥ ಎಫ್.ಎಚ್. ಮೇಜರ್ ಹೇಳಿದ್ದರು.

‘‘ಯುದ್ಧ ವಿಮಾನಗಳಲ್ಲಿ ಮಹಿಳೆಯರನ್ನು ನಿಯೋಜಿಸುವುದಕ್ಕೆ ಸಂಬಂಧಿಸಿದ ಮಾನಸಿಕ ವಿಷಯಗಳ ಬಗ್ಗೆ ವಾಯು ಪಡೆ ಅಧ್ಯಯನಗಳನ್ನು ನಡೆಸುತ್ತಿದೆ’’ ಎಂದು ಮೇಜರ್ ಹೇಳಿದ್ದರು.1992ರ ಬಳಿಕ ಮಹಿಳೆಯರು ವಾಯು ಪಡೆಯಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದರು. ಈಗ ಭಾರತೀಯ ವಾಯುಪಡೆಯಲ್ಲಿ ಇರುವ 10,500 ಸಿಬ್ಬಂದಿ ಪೈಕಿ ಸುಮಾರು 750 ಮಂದಿ ಮಹಿಳೆಯರು.

Write A Comment