ಹೊಸದಿಲ್ಲಿ, ಅ.8: 2009-13ರ ನಡುವೆ ನಾಲ್ಕು ವರ್ಷಗಳ ಅವಧಿಯಲ್ಲಿ ದೇಶದ 11 ಅಣು ವಿಜ್ಞಾನಿಗಳು ಅಸ್ವಾಭಾವಿಕ ಸಾವನ್ನಪ್ಪಿದ್ದಾರೆ ಎಂದು ಅಣು ಇಂಧನ ಇಲಾಖೆಯ ಮಾಹಿತಿಗಳು ತಿಳಿಸುತ್ತವೆ. ಇವರ ಪೈಕಿ, ಇಲಾಖೆಯ ಪ್ರಯೋಗಾಲಯಗಳು ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದ ಎಂಟು ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಸ್ಫೋಟ, ಆತ್ಮಹತ್ಯೆ ಇಲ್ಲವೇ ಸಮುದ್ರದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ವಿಜ್ಞಾನಿಗಳು ನಿಗೂಢವಾಗಿ ಸತ್ತಿದ್ದಾರೆ. ಇವರಲ್ಲಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆಂದು ಹರ್ಯಾಣ ಮೂಲದ ರಾಹುಲ್ ಸೆಹ್ರಾವತ್ ಅವರಿಗೆ ಇಲಾಖೆಯು ಆರ್‌ಟಿಐ ಮಾಹಿತಿ ಮೂಲಕ ತಿಳಿಸಿದೆ.
ಟ್ರಾಂಬೆಯ ಭಾಭಾ ಆಟೊಮಿಕ್ ರಿಸರ್ಚ್ ಸೆಂಟರ್‌ನಲ್ಲಿ (ಬಾರ್ಕ್) ಕೆಲಸ ಮಾಡುತ್ತಿದ್ದ ಇಬ್ಬರು ವಿಜ್ಞಾನಿಗಳು (ಸಿ-ಗ್ರೂಪ್) 2010ರಲ್ಲಿ ತಮ್ಮ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಸ್ಥಾನದ ರಾವತ್‌ಭಟ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಅದೇ ಶ್ರೇಣಿಯ ವಿಜ್ಞಾನಿಯೊಬ್ಬರು 2012ರಲ್ಲಿ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಒಂದು ಪ್ರಕರಣದಲ್ಲಿ, ದೀರ್ಘಕಾಲೀನ ಕಾಯಿಲೆಯಿಂದ ನರಳುತ್ತಿದ್ದ ವಿಜ್ಞಾನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸ್ ದಾಖಲೆಗಳು ತಿಳಿಸುತ್ತವೆ. ಉಳಿದ ಪ್ರಕರಣಗಳ ಕುರಿತು ಇನ್ನೂ ತನಿಖೆ ನಡೆಯುತ್ತಿದೆ. 2010ರಲ್ಲಿ ಟ್ರಾಂಬೆಯ ‘ಬಾರ್ಕ್’ ಪ್ರಯೋಗಾಲಯದಲ್ಲಿ ನಿಗೂಢ ಬೆಂಕಿ ಆಕಸ್ಮಿಕ ಘಟನೆಯಲ್ಲಿ ಇಬ್ಬರು ಸಂಶೋಧನಾ ವಿದ್ಯಾರ್ಥಿಗಳು ಮೃತಪಟ್ಟಿದ್ದರು.
‘ಎಫ್’ ಶ್ರೇಣಿಯ ವಿಜ್ಞಾನಿಯೊಬ್ಬರು ಮುಂಬೈಯ ತಮ್ಮ ನಿವಾಸದಲ್ಲಿ ಹತ್ಯೆಯಾಗಿದ್ದರು. ಅವರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು ಎಂದು ಶಂಕಿಸಲಾಗಿದೆ. ಕೊಲೆ ಆರೋಪಿ ಈ ತನಕವೂ ಪತ್ತೆಯಾಗಿಲ್ಲ. ಇಂದೋರ್‌ನ ರಾಜಾ ರಾಮಣ್ಣ ಸೆಂಟರ್ ಫಾರ್ ಅಡ್ವಾನ್ಸ್ಡ್ ಟೆಕ್ನಾಲಜಿಯಲ್ಲಿ ‘ಡಿ’ ಶ್ರೇಣಿಯ ವಿಜ್ಞಾನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ಈ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಾರೆ.