ಬೆಂಗಳೂರು, ಅ.6: ದೇಶದ ಯುವ ಸಮುದಾಯಕ್ಕೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಪ್ರಸ್ತುತ ನಮ್ಮ ಮುಂದೆ ಇರುವ ಬೃಹತ್ ಸವಾಲು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಲಾಗಿದ್ದ ‘ಇಂಡೊ-ಜರ್ಮನ್’ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಉದ್ಯೋಗ ಸೃಷ್ಟಿಯ ಸವಾಲನ್ನು ಸಮರ್ಥವಾಗಿ ಎದುರಿಸಲು ಉತ್ಪಾದನಾ ವಲಯಕ್ಕೆ ಆದ್ಯತೆ ನೀಡಬೇಕಾಗಿದೆ ಎಂದರು.
ಉತ್ಪಾದನಾ ವಲಯವು ದೇಶದ ಜಿಡಿಪಿಗೆ ಶೇ.16ರಷ್ಟು ಕೊಡುಗೆಯನ್ನು ಹಲವು ದಶಕಗಳಿಂದ ನೀಡುತ್ತಿದೆ. ಈ ಪ್ರಮಾಣವನ್ನು ಶೇ.25ಕ್ಕೆ ಹೆಚ್ಚಿಸಬೇಕಿದೆ. ಕೇಂದ್ರ ಸರಕಾರವು ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮವನ್ನು ಇದೇ ಉದ್ದೇಶದಿಂದ ಜಾರಿಗೆ ತಂದಿದೆ ಎಂದು ಮೋದಿ ಹೇಳಿದರು.
ಭಾರತದಲ್ಲಿ ಈಗಾಗಲೇ ಸುಮಾರು 600 ಇಂಡೊ-ಜರ್ಮನ್ ಸಹಭಾಗಿತ್ವದ ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಜಾಗತಿಕ ಆರ್ಥಿಕ ಹಿಂಜರಿತದ ಪರಿಸ್ಥಿತಿಯಲ್ಲೂ ಭಾರತವು ಬಂಡವಾಳ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿತ್ತು. ಕಳೆದ 15 ತಿಂಗಳಲ್ಲಿ ಕೇಂದ್ರ ಸರಕಾರವು ಉದ್ಯಮಗಳಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಅವರು ತಿಳಿಸಿದರು.
ದೇಶದ ಸಾಮಾನ್ಯ ನಾಗರಿಕರ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ವ್ಯಾಪಾರ ಹಾಗೂ ಕೈಗಾರಿಕೆಗಳ ಬೆಳವಣಿಗೆಗೆ ಉತ್ತೇಜನ ನೀಡಲಾಗಿದೆ. ದೇಶದ ಅಗತ್ಯತೆಗಳನ್ನು ಪೂರೈಸಲು ಸ್ಥಳೀಯವಾಗಿ ಇರುವಂತಹ ಆರ್ಥಿಕ ಪರಿಸ್ಥಿತಿ ಪೂರಕವಾಗಿಲ್ಲ. ಈ ಹಿನ್ನೆಲೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣವನ್ನು ರೈಲ್ವೆಯಲ್ಲಿ ಶೇ.100, ರಕ್ಷಣಾ ಹಾಗೂ ವಿಮೆ ಕ್ಷೇತ್ರದಲ್ಲಿ ಶೇ.49ಕ್ಕೆ ಮಿತಿಗೊಳಿಸಲಾಗಿದೆ ಎಂದು ಪ್ರಧಾನಿ ಹೇಳಿದರು.
ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದಕ್ಕಾಗಿಯೆ ಹೂಡಿಕೆ ಮತ್ತು ಮೂಲಭೂತ ಸೌಕರ್ಯ ನಿಧಿಯನ್ನು ಸ್ಥಾಪಿಸಲಾಗಿದೆ. ವಾರ್ಷಿಕ 20 ಸಾವಿರ ಕೋಟಿ ರೂ.ಸಂಗ್ರಹದ ಗುರಿಯನ್ನು ಹೊಂದಲಾಗಿದೆ. ಅಲ್ಲದೆ, ರೈಲ್ವೆ, ರಸ್ತೆ ಹಾಗೂ ನೀರಾವರಿ ಕ್ಷೇತ್ರಗಳಿಗೆ ತೆರಿಗೆ ರಹಿತ ಮೂಲಸೌಕರ್ಯ ಬಾಂಡ್ಸ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದೇವೆ ಎಂದು ಅವರು ತಿಳಿಸಿದರು.
ಸಮಾರಂಭದಲ್ಲಿ ಜರ್ಮನಿಯ ಚಾನ್ಸಲರ್ ಡಾ.ಏಂಜೆಲೊ ಮರ್ಕೆಲ್, 15 ರಾಜ್ಯಗಳ ಪ್ರತಿನಿಧಿಗಳು, ದೇಶದ ನೂರಾರು ಕಂಪೆನಿಗಳು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.
‘ಬೆಂಗಳೂರಿನಲ್ಲಿ 650 ಕೋಟಿ ರೂ. ಬಂಡವಾಳ ಹೂಡಿಕೆಗೆ ಜರ್ಮನಿ ಆಸಕ್ತಿ’
ಬೆಂಗಳೂರು, ಅ.6: ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ತವರು, ಸಿಲಿಕಾನ್ ವ್ಯಾಲಿ ಖ್ಯಾತಿಯ ಬೆಂಗಳೂರಿನಲ್ಲಿ ಸುಮಾರು 650 ಕೋಟಿ ರೂ.ಬಂಡವಾಳ ಹೂಡಲು ಜರ್ಮನಿ ಆಸಕ್ತಿ ವಹಿಸಿದೆ.
ನಗರದ ಆಡುಗೋಡಿಯಲ್ಲಿರುವ ಬಾಷ್ ಕಂಪೆನಿಗೆ ಜರ್ಮನಿಯ ಚಾನ್ಸಲರ್ ಡಾ.ಆ್ಯಂಜೆಲಾ ಮರ್ಕೆಲ್, ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘೋಷಣೆ ಹೊರಬಿದ್ದಿದೆ.
ಬಾಷ್ ಕಂಪೆನಿಯಲ್ಲಿ ಕೈಗೊಳ್ಳುತ್ತಿರುವ ಸಂಶೋಧನೆ ಮತ್ತು ಕೌಶಲ ಅಭಿವೃದ್ಧಿಯ ಮಾಹಿತಿಯನ್ನು ಮರ್ಕೆಲ್ ಪಡೆದುಕೊಂಡರು. ಈ ಸಂದರ್ಭದಲ್ಲಿ ಬಾಷ್ ಕಂಪೆನಿಯು ಜಾಗತಿಕವಾಗಿ ತನ್ನ ಖ್ಯಾತಿಯನ್ನು ಉಳಿಸಿಕೊಳ್ಳಲು ಸ್ಥಳೀಯ ಪ್ರತಿಭೆಗಳು ಹಾಗೂ ಭಾರತದ ಎಂಜಿನಿಯರ್‌ಗಳು ನೀಡುತ್ತಿರುವ ಕೊಡುಗೆಗೆ ಬಾಷ್‌ನ ಏಷ್ಯಾ ಪೆಸಿಫಿಕ್ ಆಡಳಿತ ಮಂಡಳಿಯ ಜವಾಬ್ದಾರಿ ವಹಿಸಿಕೊಂಡಿರುವ ಪೀಟರ್ ಟೈರೊಲ್ಲರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಜಾಗತಿಕವಾಗಿ ವ್ಯಾಪಾರ ವಹಿವಾಟಿನಲ್ಲಿ ಪ್ರಮುಖ ಸ್ಥಾನ ಪಡೆದಿರುವ ಭಾರತದಲ್ಲಿ ಜರ್ಮನಿಯೂ ಪ್ರಸಕ್ತ ಸಾಲಿನಲ್ಲೆ 650 ಕೋಟಿ ರೂ.(100 ದಶಲಕ್ಷ ಯೂರೋ) ಹೂಡಿಕೆ ಮಾಡಲು ಯೋಚಿಸಿದೆ. ಮಧ್ಯ ಹಾಗೂ ದೀರ್ಘಾವಧಿಯಲ್ಲಿ ನಮ್ಮ ಸಂಸ್ಥೆ ಧನಾತ್ಮಕವಾದ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದೆ ಎಂದು ಅವರು ಹೇಳಿದರು.
‘ಬಾಷ್’ ಕಂಪೆನಿಯೊಳಗೆ ಸಿಎಂ ಕಾರಿಗೆ ಪ್ರವೇಶ ನಿರಾಕರಣೆ
ಬೆಂಗಳೂರು, ಅ.6: ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರನ್ನು ಬಾಷ್ ಕಂಪೆನಿಯ ಒಳಗೆ ಬಿಡದೆ, ಮುಖ್ಯಮಂತ್ರಿಗೆ ‘ಅವಮಾನ’ ಮಾಡಲಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಮಂಗಳವಾರ ನಗರದ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಪ್ರಧಾನಿ ಮೋದಿ ಅವರನ್ನು ಬರಮಾಡಿಕೊಂಡು ಕಾರಿನಲ್ಲೇ ಬಾಷ್ ಕಂಪೆನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೆರಳಿದರು. ಆದರೆ, ಸಿಎಂ ಸಿದ್ದರಾಮಯ್ಯರ ಕಾರನ್ನು ಭದ್ರತಾ ದೃಷ್ಟಿಯಿಂದ ಕಂಪೆನಿಯ ಒಳಗೆ ಬಿಟ್ಟಿಲ್ಲ.
ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ಇಬ್ಬರು ಗಣ್ಯರ ಕಾರುಗಳ ಹಿಂದೆ ಸುಮಾರು 15ಕ್ಕೂ ಹೆಚ್ಚು ವಾಹನಗಳಿದ್ದವು. ಸಿಎಂ ಸಿದ್ದರಾಮಯ್ಯ ಪ್ರಧಾನಿ ಕಾರಿನಲ್ಲೆ ತೆರಳಿದರು. ಆದರೆ, ಸಿಎಂ ಅವರ ಕಾರನ್ನು ಕಂಪೆನಿ ಹಾಗೂ ಎನ್‌ಎಸ್‌ಜಿ ಭದ್ರತಾ ಸಿಬ್ಬಂದಿ ಪಾರ್ಕಿಂಗ್ ಕೊರತೆ ಹಿನ್ನೆಲೆಯಲ್ಲಿ ಪ್ರವೇಶ ನಿರಾಕರಿಸಿರುವುದು ವಿವಾದ ಸೃಷ್ಟಿಸಿದೆ.
ಕರ್ನಾಟಕ