ಪುತ್ತೂರು, ಅ .6: ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಚಿನ್ನಾಭರಣ ಮಳಿಗೆ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾದ ಘಟನೆ ಮಂಗಳವಾರ ಸಂಜೆ 7.30ರ ಸುಮಾರಿಗೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರಿನ ಸಿಪಿಸಿ ಪ್ಲಾಜಾದಲ್ಲಿ ಕಾರ್ಯಾನಿರ್ವಾಹಿಸುತ್ತಿರುವ ತನ್ಜಾ ಎಂಬವರ ಮಾಲಕತ್ವದ ರಾಜಧಾನಿ ಚಿನ್ನಾಭರಣ ಮಳಿಗೆಯ ಮುಂದಿನ ಗಾಜುಗಳಿಗೆ ಒಂದು ಬಾರಿ ಗುಂಡು ಹಾರಿಸಿದ ದುಷ್ಕರ್ಮಿಗಳು ಮತ್ತೆ ಬಂದು ಇನ್ನೊಂದು ಬಾರಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಯಾವೂದೇ ರೀತಿಯ ಅನಾಹುತ ಅಥವಾ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಪುತ್ತೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನೆಯ ಬಗ್ಗೆ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪುತ್ತೂರಿನಲ್ಲಿ ಶೂಟೌಟ್ : News Updated
ಪುತ್ತೂರು ನಗರದ ಮುಖ್ಯ ರಸ್ತೆಯಲ್ಲಿರುವ ಜ್ಯುವೆಲ್ಲರಿ ಮಳಿಗೆಯೊಂದಕ್ಕೆ ಬೈಕೊಂದರಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಾಟ ನಡೆಸಿ ಪರಾರಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಜ್ಯುವೆಲ್ಲರಿ ಮಳಿಗೆಯ ಗಾಜು ಪುಡಿಯಾಗಿದೆ.
ಮಂಗಳವಾರ ರಾತ್ರಿ 8 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಪುತ್ತೂರು ಮುಖ್ಯರಸ್ತೆಯಲ್ಲಿರುವ ರಾಜಧಾನಿ ಜ್ಯುವೆಲ್ಲರ್ಸ್ ನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಲಾಗಿದೆ. ವಿಟ್ಲ ನಿವಾಸಿ ಥಾನಾಝ್ ಎಂಬ ವರ ಮಾಲಕತ್ವದ ಈ ಮಳಿಗೆಯ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದು, ದಾಳಿಯ ಹಿಂದಿನ ಉದ್ದೇಶ ತಿಳಿದು ಬಂದಿಲ್ಲ.
ಬೈಕ್ ಚಲಾಯಿಸುತ್ತಲೇ ಗುಂಡು ಹಾರಿಸಲಾಗಿದೆ. ಶೂಟೌಟ್ ನಡೆಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಸ್ಥಳದಲ್ಲಿ ದೊರಕಿದ ಗುಂಡನ್ನು ನಗರ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಪುತ್ತೂರು ಬಸ್ನಿಲ್ದಾಣ ಕಡೆಗೆ ಹೋಗು ತ್ತಿದ್ದ ಬೈಕ್ನಿಂದ ಮೊದಲ ಗುಂಡು ಹಾರಿಸಲಾಗಿತ್ತು. ಈ ಶಬ್ದಕ್ಕೆ ಮಳಿಗೆಯಲ್ಲಿದ್ದ ಸಿಬ್ಬಂದಿ ವಿಚಲಿತರಾದರೂ, ಅವರಿಗೆ ವಿಷಯ ಮನದಟ್ಟಾಗಿಲ್ಲ.
ಸುಮಾರು 10 ನಿಮಿಷಗಳ ಬಳಿಕ ಅದೇ ಬೈಕ್ ಹಿಂದಿರುಗಿ ಬಂದಿದ್ದು, ಮತ್ತೊಂದು ಸುತ್ತಿನ ಗುಂಡು ಹಾರಿಸಿದ್ದಾರೆ. ಮೊದಲ ಸುತ್ತಿನಲ್ಲಿ ಹಾರಿಸಿದ ಗುಂಡು ಮಳಿಗೆಯ ಮುಂಭಾಗದಲ್ಲಿ ಹಾಕಿದ್ದ ಬೋರ್ಡ್ ಗೆ ತಗಲಿದೆ. ಎರಡನೆಯ ಗುಂಡಿಗೆ ಗಾಜು ಪುಡಿಯಾಗಿ ಗುಂಡು ಒಳಭಾಗದಲ್ಲಿ ಬಿದ್ದಿದೆ. ಮಳಿಗೆಯೊಳಗೆ ನಾಲ್ಕು ಮಂದಿ ಸಿಬ್ಬಂದಿಗಳಿದ್ದು ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಬೈಕ್ನಲ್ಲಿ ಸಂಚರಿಸುತ್ತಿದ್ದ ಇಬ್ಬರು ಶೂಟೌಟ್ ನಡೆಸಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಮಾಲಕರ ಬಗ್ಗೆ ಇರುವ ಪೂರ್ವದ್ವೇಷ ಅಥವಾ ಹಫ್ತಾ ಬೇಡಿಕೆಯ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರ ತನಿಖೆಯಿಂದಷ್ಟೇ ನಿಜಾಂಶ ಗೊತ್ತಾಗಬೇಕಾಗಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.


