ರಾಷ್ಟ್ರೀಯ

ದಾದ್ರಿ ಹತ್ಯೆ: ಕೇಂದ್ರಕ್ಕೆ ಉ.ಪ್ರ. ವರದಿ ಸಲ್ಲಿಕೆ

Pinterest LinkedIn Tumblr

Dadriಲಕ್ನೋ, ಅ.6: ದಾದ್ರಿ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರಕಾರವು ಮಂಗಳವಾರ ಕೇಂದ್ರ ಗೃಹ ಸಚಿವಾಲಯಕ್ಕೆ ತನ್ನ ವರದಿಯನ್ನು ರವಾನಿಸಿದೆ.
ಆದರೆ, ಮುಹಮ್ಮದ್ ಇಖ್ಲಾಕ್ ಹತ್ಯೆಗೆ ಗೋಮಾಂಸ ಸೇವನೆ ಇಲ್ಲವೇ ಗೋಹತ್ಯೆಯ ಕುರಿತಾದ ವದಂತಿಗಳು ಕಾರಣ ವೆಂದು ವರದಿಯಲ್ಲಿ ನಿರ್ದಿಷ್ಟವಾಗಿ ನಮೂದಿಸಲಾಗಿಲ್ಲ ಎನ್ನಲಾಗಿದೆ. ಘಟನೆಯ ಕುರಿತು ಕೇಂದ್ರ ಸರಕಾರ ವರದಿ ಕೇಳಿದ ನಾಲ್ಕು ದಿನಗಳ ನಂತರ ವರದಿಯನ್ನು ರವಾನಿಸಲಾಗಿದೆ. ಹತ್ಯೆ ಘಟನೆಯ ಕುರಿತು ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ನಮೂದಿಸಿರುವ ಅಂಶಗಳನ್ನೇ ವರದಿಯಲ್ಲಿ ಸೇರ್ಪಡೆ ಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ನಿಷೇಧಿತ ಗೋಮಾಂಸವನ್ನು ಸೇವಿಸಿದ ಆರೋಪದ ಮೇಲೆ ಕೆಲವು ಅಪರಿಚಿತ ಜನರು ಇಖ್ಲಾಕ್ ಮತ್ತು ಅವರ ಮಗನ ಮೇಲೆ ಹಲ್ಲೆ ಮಾಡಿದ್ದಾರೆ ಎಂದಷ್ಟೇ ವರದಿಯಲ್ಲಿ ತಿಳಿಸಲಾಗಿದೆ. ಹತ್ಯೆ ಘಟನೆಗೆ ಪ್ರಚೋದನೆ ನೀಡಿದ ಸಂಭವನೀಯ ಸಂದರ್ಭಗಳ ಕುರಿತು ವರದಿಯಲ್ಲಿ ಪ್ರಸ್ತಾಪ ಮಾಡಲಾಗಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Write A Comment