ಬೆಂಗಳೂರು: ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲೇ ಸಿಲಿಕಾನ್ ಸಿಟಿ ಕೊಳೆತು ನಾರುವಂತಾಗಿದೆ. ಹಬ್ಬದ ಸಂದರ್ಭದಲ್ಲಿ ಕಸದ ಪ್ರಮಾಣ ನಾಲ್ಕು ಪಟ್ಟು ಹೆಚ್ಚಾಗಿದ್ದು, ಅದರ ವಿಲೇವಾರಿ ಸಮರ್ಪಕವಾಗಿ ನಡೆದಿಲ್ಲ. ಪ್ರತಿ ಹಬ್ಬಗಳಲ್ಲೂ ಬೆಂಗಳೂರಿಗೆ ಗ್ರಾಮೀಣ ಭಾಗದಿಂದ ಬರುವ ಬಾಳೆ ದಿಂಡು, ಎಲೆ, ಹೂವು, ಮಾವು ಹಾಗೂ ಬೇವಿನ ಸೊಪ್ಪು, ಯಕ್ಕದ ಹೂ, ತರಕಾರಿಯಂತಹ ವಸ್ತುಗಳು ಮಾರಾಟವಾಗದೆ ಉಳಿದ ನಂತರ ಎಲ್ಲೆಂದರಲ್ಲಿ ಚೆಲ್ಲಲಾಗುತ್ತಿದೆ. ಈ ಹಸಿ ತ್ಯಾಜ್ಯವನ್ನು ಶೇಖರಿಸಿ ಸಾಗಿಸುವುದು ಬಹಳ ಕಷ್ಟದ ಕೆಲಸ. ಹಬ್ಬಗಳ ಸಂದರ್ಭದಲ್ಲಿ ಪೌರಕಾರ್ಮಿಕರು ಕೂಡ ರಜೆಯ ಗುಂಗಿನಲ್ಲಿರುವುದರಿಂದ ಕಸ ವಿಲೇವಾರಿ ಸರಿಯಾಗಿ ನಡೆಯುವುದಿಲ್ಲ.
ಕೆ.ಆರ್.ಮಾರುಕಟ್ಟೆ, ಗಾಂಧಿಬಜಾರ್, ಚಾಮರಾಜಪೇಟೆ, ಶಿವಾಜಿನಗರ, ಯಶವಂತಪುರ ಮಾರುಕಟ್ಟೆ, ಪೀಣ್ಯಾ, ರಾಜಾಜಿನಗರ, ಬನಶಂಕರಿ ಮಾರುಕಟ್ಟೆ, ಮಲ್ಲೇಶ್ವರಂ ಸೇರಿದಂತೆ ಹಲವು ಕಡೆ ರಸ್ತೆ ಬದಿಯಲ್ಲೇ ಕಸದ ರಾಶಿಗಳನ್ನು ಕಾಣಬಹುದು. ಇಂದು ಮತ್ತು ನಾಳೆ ಕಸವಿಲೇವಾರಿ ಸರಿಯಾಗಿ ನಡೆಯುವುದು ಅನುಮಾನವಾಗಿದೆ. ಎರಡು ದಿನಗಳ ಹಿಂದೆಯೇ ನಗರಕ್ಕೆ ಬಂದಿರುವ ಈ ವಸ್ತುಗಳು ಈಗಾಗಲೇ ಕೊಳೆಯಲಾರಂಭಿಸಿವೆ. ಅಕಸ್ಮಾತ್ ಈ ಎರಡು ದಿನಗಳಲ್ಲಿ ಮಳೆ ಸುರಿದಂರಂತೂ ಬೆಂಗಳೂರಿನ ಪರಿಸ್ಥಿತಿ ನರಕಸದೃಶ್ಯವಾಗಲಿವೆ. ಒಂದಷ್ಟು ತ್ಯಾಜ್ಯ ಮಳೆ ನೀರಲ್ಲಿ ಕೊಚ್ಚಿ ಹೋಗಿ ರಾಜಕಾಲುವೆಯಲ್ಲಿ ಸಿಕ್ಕಿ ಹಾಕಿಕೊಂಡು ನೀರಿನ ಹರಿವಿಗೆ ತಡೆಯೊಡ್ಡಲಿವೆ.
ಈಗಾಗಲೇ ಬೆಂಗಳೂರಿನಲ್ಲಿ ಡೇಂಘಿ, ಚಿಕೂನ್ಗುನ್ಯಾ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಜನಸಾಮಾನ್ಯರನ್ನು ಹೈರಾಣಾಗಿಸಿವೆ. ಅಂತಹದರಲ್ಲಿ ಕಸ ಇನ್ನಷ್ಟು ಕೊಳೆತು ಮತ್ತುಷ್ಟು ಸೊಳ್ಳೆ ಉತ್ಪಾದನೆಗೆ ಅವಕಾಶವಾಗಿ ಸಾಂಕ್ರಾಮಿಕ ರೋಗಗಳು ಹೆಚ್ಚುವ ಭೀತಿ ನಗರ ವಾಸಿಗಳನ್ನು ಕಾಡುತ್ತಿದೆ. ಬಿಬಿಎಂಪಿಗೆ ಹೊಸ ಮೇಯರ್, ಉಪಮೇಯರ್ ಹಾಗೂ ಆಡಳಿತ ಮಂಡಳಿ ಬಂದಿದ್ದು, ಅವರ ಮುಂದೆ ಕಸದ ಸಮಸ್ಯೆ ಸವಾಲಾಗಿದೆ. ಕಸ ವಿಲೇವಾರಿ ಈವರೆಗೂ ಸಮರ್ಪಕವಾಗಿ ನಡೆದಿಲ್ಲ. ನಗರದಲ್ಲಿ ಎರಡು ಕಡೆ ಮಾತ್ರ ತ್ಯಾಜ್ಯಾ ಸಂಸ್ಕರಣಾ ಘಟಕಗಳು ಆರಂಭಗೊಳ್ಳುತ್ತಿವೆ. ಇನ್ನು ನಾಲ್ಕು ಸಂಸ್ಕರಣಾ ಘಟಕಗಳು ಪ್ರಗತಿಯ ಹಂತದಲ್ಲಿವೆ. ಬೆಂಗಳೂರಿನಲ್ಲಿ ರಾಶಿ ಬಿದ್ದಿರುವ ಕಸದ ರಾಶಿಯನ್ನು ಸಂಸ್ಕರಿಸಲು ಇನ್ನೂ 10 ಘಟಕಗಳನ್ನು ಸ್ಥಾಪಿಸುವ ಅಗತ್ಯವಿದೆ. ಒಟ್ಟಿನಲ್ಲಿ ಹಬ್ಬದ ಸಂಭ್ರಮ ಒಂದೆಡೆಯಾದರೆ, ಕಸದ ಸಮಸ್ಯೆ ಮತ್ತು ಸಾಂಕ್ರಾಮಿಕ ರೋಗಗಳ ಭೀತಿ ಇನ್ನೊಂದೆಡೆಯಾಗಿದೆ. ಇನ್ನೆರಡು ದಿನಗಳ ಕಾಲ ಬೆಂಗಳೂರಿಗೆ ಮಳೆ ಬಾರದಿದ್ದರೆ ಸಾಕಪ್ಪ ಎಂದು ಜನ ಮೊರೆಯಿಡುತ್ತಿದ್ದಾರೆ.