ತುಮಕೂರು. ಸೆ.15: ವಿಜ್ಞಾನ ಮತ್ತು ತಂತ್ರಜ್ಞ್ಞಾನ ಕ್ಷೇತ್ರದಲ್ಲಿ ದೇಶ ಮುಂದುವರಿದಿದ್ದರೂ ಸಹ ಜನರಲ್ಲಿನ ಮೌಢ್ಯ, ಮೂಢನಂಬಿಕೆಯನ್ನು ಹೋಗಲಾ ಡಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಯಲ್ಲಿ ನಾಡನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ತಳಹದಿಯ ಮೇಲೆ ಕಟ್ಟಲು ಸರಕಾರ ಬದ್ಧವಾಗಿದೆ ಮಾಹಿತಿ ತಂತ್ರಜ್ಞಾನ ಮತ್ತು ಯೋಜನಾ ಸಚಿವ ಎಸ್.ಆರ್. ಪಾಟೀಲ್ ತಿಳಿಸಿದ್ದಾರೆ.
ಗಾರ್ಡನ್ ರಸ್ತೆಯ ಶನಿದೇವರ ದೇವಾಲಯದ ಬಳಿಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ವಿಜ್ಞಾನ ಕೇಂದ್ರದ ಕಟ್ಟಡ ನಿರ್ಮಾಣದ ನೀಲಿ ನಕ್ಷೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಇದಕ್ಕಾಗಿ ರಾಜ್ಯದ 21 ಕಡೆಗಳಲ್ಲಿ ತಲಾ 4ಕೋಟಿ ರೂ.ಗಳ ವೆಚ್ಚದಲ್ಲಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ತೆರೆದು ಮಕ್ಕಳಲ್ಲಿ ವೈಜ್ಞಾನಿಕೆ, ವೈಚಾರಿಕೆ ಮನೋಭಾವವನ್ನು ಬೆಳೆಸಲು ಪ್ರಯತ್ನಿಸಲಾಗುತ್ತಿದೆ ಎಂದರು.
ತುಮಕೂರು ನಗರದಲ್ಲಿ ಒಂದು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ತೆರೆಯಲು 2006 ರಲ್ಲಿಯೇ 1.30 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರೂ, ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ, ಹೊಸದಾಗಿ 4 ಕೋಟಿ ರೂ.ಗಳನ್ನು ಕಾಯ್ದಿರಿಸಿದ್ದರೂ ಇದುವರೆಗೆ ಕನಿಷ್ಠ ಭೂಮಿಯನ್ನು ಗುರುತಿಸಿಲ್ಲ. ಇಲ್ಲಿನ ಜಿಲ್ಲಾಧಿಕಾರಿಗಳು ಏನು ಮಾಡುತ್ತಿದ್ದಾರೆ. ಅವರಿಗೆ ಏನು ಕೆಲಸ ಎಂದು ಖಾರವಾಗಿಯೇ ಪ್ರಶ್ನಿಸಿದ ಸಚಿವರು, ಮಹಿಳಾ ವಿವಿಯವರು ಖುದ್ದಾಗಿ ನಮ್ಮ ಬಳಿ ಬಂದು ಒತ್ತಾಯ ಪೂರ್ವಕವಾಗಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಮಂಜೂರು ಮಾಡಿಕೊಂಡು ಶಂಕುಸ್ಥಾಪನೆಯನ್ನು ನೆರವೇರಿಸಿದ್ದಾರೆ.
ವಿಜ್ಞಾನ ನಗರಗಳಿಗೆ ಸೀಮಿತವಾಗ ಬಾರದು: ವಿಜ್ಞಾನ ನಗರಗಳಿಗೆ ಸೀಮಿತ ವಾಗದೆ ಗ್ರಾಮೀಣ ಪ್ರದೇಶಕ್ಕೆ ತಲುಪಬೇಕು. ಸರಕಾರದ ಎಲ್ಲಾ ತಂತ್ರಜ್ಞಾನಗಳು ಸಾಮಾನ್ಯ ಜನರನ್ನು ತಲುಪಿ ಅವರಲ್ಲಿರುವ ಅಜ್ಞಾನ, ಮೂಢ ನಂಬಿಕೆಗಳು ತೊಲಗಿ, ತಮ್ಮೆಲ್ಲಾ ಕಷ್ಟ ಕೋಟಲೆಗಳಿಂದ ಹೊರಬರ ಬೇಕಿದೆ. ಈ ನಿಟ್ಟಿನಲ್ಲಿ ಇಂತಹ ವಿಜ್ಞಾನ ಕೇಂದ್ರಗಳು ಹೆಚ್ಚು ಸಕ್ರಿಯವಾಗಿ ಕೆಲಸ ಮಾಡಬೇಕಿದೆ ಎಂದು ಎಸ್.ಆರ್.ಪಾಟೀಲ್ ನುಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸರ್.ಎಂ.ವಿಶ್ವೇಶ್ವರಯ್ಯ ವಿಜ್ಞಾನಕೇಂದ್ರದ ಶಂಕುಸ್ಥಾಪನೆ ನೆರವೇರಿಸಿದರು. ವಿಧಾನಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ, ವಿ.ಎಸ್.ಉಗ್ರಪ್ಪ, ಎಂ.ಡಿ.ಲಕ್ಷ್ಮೀನಾರಾಯಣ, ಶಾಸಕ ಡಾ.ರಫೀಕ್ ಅಹ್ಮದ್, ಹಾಲು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಜಿಪಂ ಸಿಇಒ ಡಾ.ಎಂ.ಆರ್.ಮಮತಾ, ವಿಜ್ಞಾನ ಕೇಂದ್ರದ ಅಧ್ಯಕ್ಷ ಸಿ.ವಿಶ್ವನಾಥ್, ಉಪಾಧ್ಯಕ್ಷ ಸಿ.ಯತಿರಾಜು, ಮಾಜಿ ಅಧ್ಯಕ್ಷ ಡಾ.ನಿರಂಜರಾಧ್ಯ, ಜಿಲ್ಲಾ ಎಂಜಿನಿ ಯರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಮಮೂರ್ತಿ ಮೊದಲಾದವರು ಭಾಗವಹಿಸಿದ್ದರು.
‘ಮಹದಾಯಿ ಬಗ್ಗೆ ಪ್ರಧಾನಿಯ ಅಸಹಕಾರ ದುರದೃಷ್ಟಕರ’
ತುಮಕೂರು, ಸೆ.15: ಮಹದಾಯಿ ಯೋಜನೆ ಜಾರಿ ಕುರಿತಂತೆ ರಾಜ್ಯದ ಮುಖ್ಯಮಂತ್ರಿ ನೇತೃತ್ವದಲ್ಲಿ 57 ಮಂದಿ ಜನಪ್ರತಿನಿಧಿಗಳ ಬೃಹತ್ ನಿಯೋಗವನ್ನು ಪ್ರಧಾನಿ ಬಳಿ ಕೊಂಡೊಯ್ದರೂ ಕೇಂದ್ರ ಸರಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆಯದಿರುವುದು ರಾಜ್ಯದ ದುರಂತ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ತುಮಕೂರು ವಿಜ್ಞಾನ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸುತ್ತಾರೆ ಎಂದು ಅಂದುಕೊಂಡ ನಮಗೆ ತೀವ್ರ ನಿರಾಶೆಯಾಯಿತು ಎಂದರು.
ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ತೆಲುಗುಗಂಗಾ, ನರ್ಮದಾ ನದಿ ಯೋಜನೆಗಳ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಅಂತಾರಾಜ್ಯ ನದಿ ವಿವಾದ ಬಗೆಹರಿಸಿದ್ದರು. ವಾಜಪೇಯಿ ಅವರು ಕಾವೇರಿ ವಿಷಯದಲ್ಲಿ ಮಧ್ಯಪ್ರವೇಶಿಸಿ ನ್ಯಾಯಾಧೀಕರಣ ಸ್ಥಾಪಿಸಿದರು. ಆ ಕೆಲಸವನ್ನು ಪ್ರಧಾನಿ ಮೋದಿಯವರು ಮಾಡಬೇಕು ಎಂದು ಹೇಳಿದರು.
ಯೋಜನೆ ಜಾರಿ ಹೋರಾಟಕ್ಕೆ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದರಾದ ಬಿ.ಎಸ್. ಯಡಿಯೂರಪ್ಪನೇತೃತ್ವ ವಹಿಸುತ್ತಾರೆಂದು ಹೇಳಿಕೆ ನೀಡಿದ್ದಾರಲ್ಲ ಎಂಬ ಪ್ರಶ್ನೆಗೆ ಅವರು ದೊಡ್ಡವರು ಅವರ ಬಗ್ಗೆ ಏನೂ ಮಾತನಾ ಡಲಾರೆ ಎಂದು ಜಾರಿಕೊಂಡರು.
ಕೆಪಿಸಿಸಿ ಅಧ್ಯಕ್ಷ ಗಾದಿಗೆ ಸಿದ್ಧ: ಪಕ್ಷ ಸಂಘಟನೆ ವಿಚಾರವಾಗಿ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಾನು ನಿಭಾಯಿಸುತ್ತೇನೆ. ಪಕ್ಷ ನೀಡುವ ಯಾುದೇ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಲು ಸಿದ್ಧನಿದ್ದೇನೆ ಎಂದ ಅವರು, ಅದು ಕೆಪಿಸಿಸಿ ಅಧ್ಯಕ್ಷರ ಹುದ್ದೆ ಇರಬಹುದು. ಮಂತ್ರಿ ಸ್ಥಾನವಿರಬಹುದು. ಏನೇ ಇರಬಹುದು. ಕಡೆಯದಾಗಿ ಪಕ್ಷದ ಕಾರ್ಯಕರ್ತನಾಗಿ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ. ನಾನೆಂದೂ ಅಧಿಕಾರದ ಹಿಂದೆ ಬಿದ್ದವನಲ್ಲ ಎಂದು ಎಸ್.ಆರ್. ಪಾಟೀಲ್ ನುಡಿದರು.
ಸಂಪುಟ ವಿಸ್ತರಣೆಯಲ್ಲಿ ಪರಿಷತ್ ಸದಸ್ಯರಿಗೆ ಪ್ರಾತಿನಿಧ್ಯ ಕೊಡಬೇಕು ಎಂದು ಮೇಲ್ಮನೆ ಸಭಾ ನಾಯಕರಾಗಿ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಂಪುಟ ವಿಸ್ತರಣೆಯ ಪೂರ್ಣ ಅಧಿಕಾರ ಮುಖ್ಯಮಂತ್ರಿಗಳಿಗೆ ಬಿಟ್ಟದ್ದು. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೋ ಅಥವಾ ಬಿಡಬೇಕೋ ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯೂ ಅವರಿಗೆ ಬಿಟ್ಟ ವಿಚಾರ ಎಂದು ಪ್ರತಿಕ್ರಿಯೆ ನೀಡಿದರು.