ಮನೋರಂಜನೆ

ಟೈಗರ್ಸ್‌ಗೆ ಮಣಿದ ವಾರಿಯರ್ಸ್‌

Pinterest LinkedIn Tumblr

CRICK-16_ಮೈಸೂರು, ಸೆ.15: ಹುಬ್ಬಳ್ಳಿ ಟೈಗರ್ಸ್‌ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ್ದರೂ ಪ್ರಯೋಜನ ಪಡೆಯುವಲ್ಲಿ ವಿಫಲವಾದ ಮೈಸೂರು ವಾರಿಯರ್ಸ್‌ ತಂಡ ಇಲ್ಲಿ ನಡೆದ ಕೆಪಿಎಲ್‌ನ 23ನೆ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್‌ ವಿರುದ್ಧ 24 ರನ್‌ಗಳ ಸೋಲು ಅನುಭವಿಸಿದೆ.
ಇಲ್ಲಿನ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಕ್ರೀಡಾಂಗಣದಲಿ ಮಂಗಳವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 156 ರನ್ ಗಳಿಸಬೇಕಿದ್ದ ಮೈಸೂರು ವಾರಿಯರ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 131 ರನ್ ಗಳಿಸಿತು.

ಟೈಗರ್ಸ್‌ನ ಕಿಶೋರ್ ಕಾಮತ್(3-12), ಕ್ರಾಂತಿ ಕುಮಾರ್(2-15), ಎಸ್.ಅಕ್ಷಯ್(2-12) ಮತ್ತು ಪ್ರತೀಕ್ ಜೈನ್(1-35) ದಾಳಿಗೆ ತತ್ತರಿಸಿದ ಮೈಸೂರು ವಾರಿಯರ್ಸ್‌ ತಂಡಕ್ಕೆ ಗೆಲುವಿನ ಗುರಿ ತಲುಪಲು ಸಾಧ್ಯವಾಗಲಿಲ್ಲ. ಈ ಗೆಲುವಿನೊಂದಿಗೆ ಹುಬ್ಬಳ್ಳಿ ಟೈಗರ್ಸ್‌ ಅಂಕಪಟ್ಟಿಯಲ್ಲಿ ನಾಲ್ಕನೆ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

ಮೈಸೂರು ವಾರಿಯರ್ಸ್‌ ತಂಡದ ಬ್ಯಾಟಿಂಗ್ ಆರಂಭದಲ್ಲಿ ಚೆನ್ನಾಗಿತ್ತು.ಅದು 3.4 ಓವರ್‌ಗಳಲ್ಲಿ 22 ರನ್ ಗಳಿಸಿತ್ತು. ಬಳಿಕ ರನ್ ಸರಾಸರಿ ಕುಸಿಯಿತು. 10 ಓವರ್‌ಗಳಲ್ಲಿ 51 ರನ್ ಗಳಿಸಿತು. 60 ಎಸೆತಗಳಲ್ಲಿ 105 ರನ್ ಗಳಿಸಬೇಕಾದ ಒತ್ತಡಕ್ಕೆ ಸಿಲುಕಿತು.
ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಮತ್ತು ನಾಯಕ ಚಿದಂಬರಂ ಗೌತಮ್ (30) ಕ್ರೀಸ್‌ನಲ್ಲಿ ಇರುವ ತನಕ ನಿರೀಕ್ಷೆ ಇತ್ತು. ಆದರೆ ಅವರನ್ನು 12.2ನೆ ಓವರ್‌ನಲ್ಲಿ ಕಿಶೋರ್ ಕಾಮತ್ ಎಲ್‌ಬಿಡಬ್ಲು ಬಲೆಗೆ ಕೆಡವಿ ಟೈಗರ್ಸ್‌ಗೆ ಮೇಲುಗೈ ಸಾಧಿಸಲು ನೆರವಾದರು. ನವೀನ್ ಎಂಜಿ(13), ನಿಹಾಲ್ ಉಳ್ಳಾಲ್(10), ಜಗದೀಶ್ ಸುಚಿತ್(27), ಶುಐಬ್ ಮ್ಯಾನೇಜರ್(17) ಮತ್ತು ಕೆ.ಗೌತಮ್(17) ಹೊರತುಪಡಿಸಿದರೆ ತಂಡದ ಸಹ ಆಟಗಾರರ ವೈಯಕ್ತಿಕ ಕೊಡುಗೆ 10 ರನ್ ತಲುಪಲಿಲ್ಲ.
ಹುಬ್ಬಳ್ಳಿ ಟೈಗರ್ಸ್‌ 155/7: ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಹುಬ್ಬಳ್ಳಿ ಟೈಗರ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 7ವಿಕೆಟ್ ನಷ್ಟದಲ್ಲಿ 155 ರನ್ ಗಳಿಸಿತ್ತು.

ಹುಬ್ಬಳ್ಳಿ ಟೈಗರ್ಸ್‌ ತಂಡ ಮೊದಲ 10 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 72 ರನ್ ಗಳಿಸಿತ್ತು. ಆರಂಭಿಕ ದಾಂಡಿಗರಾದ ಮುಹಮ್ಮದ್ ತಾಹ ಮತ್ತು ಕೆಬಿ ಪವನ್ ಮೊದಲ ವಿಕೆಟ್‌ಗೆ 11 ಓವರ್‌ಗಳಲ್ಲಿ 75 ರನ್‌ಗಳ ಜೊತೆಯಾಟ ನೀಡಿದರು. 11 ಓವರ್‌ನ ಕೊನೆಯ ಎಸೆತದಲ್ಲಿ ತಾಹ ಅವರು ಕೆ ಗೌತಮ್ ಎಸೆತದಲ್ಲಿ ಶುಐಬ್‌ಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ವಾಪಸಾದರು. 13.2 ಓವರ್‌ಗಳಲ್ಲಿ 87 ರನ್ ತಲುಪುವ ಹೊತ್ತಿಗೆ 4 ವಿಕೆಟ್ ಕಳೆದುಕೊಂಡಿತು. ಕೆಬಿ ಪವನ್(36), ನಿತಿನ್ ಭಿಲ್ಲೆ(8) ಮತ್ತು ನಾಯಕ ಕುನಾಲ್ ಕಪೂರ್(2) ರನ್ ಗಳಿಸಿ ಔಟಾದರು. ಚೇತನ್ ವಿಲಿಯಮ್ 43 ರನ್(26ಎ, 3ಬೌ, 3ಸಿ) ಮತ್ತು ದಿಕ್ಷಾಂಶು ನೇಗಿ(18) ಹೋರಾಟದ ಫಲವಾಗಿ ಟೈಗರ್ಸ್‌ನ ಸ್ಕೋರ್ 150ರ ಗಡಿ ದಾಟಿತು. ವಿಲಿಯಮ್ ಗರಿಷ್ಠ ಸ್ಕೋರ್ ದಾಖಲಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

Write A Comment