ಕರ್ನಾಟಕ

‘ನಗರೀಕರಣ’ದ ಕುರಿತು ಜೈನ್ ವಿ.ವಿ ಸಮಾವೇಶ; ಯೋಜನಾಬದ್ದವಿಲ್ಲದ ನಗರೀಕರಣದಿಂದ ಅಪಾಯ: ಎ. ರವೀಂದ್ರ

Pinterest LinkedIn Tumblr

aniಬೆಂಗಳೂರು: ‘ದೂರದೃಷ್ಟಿ ಇಲ್ಲದ ಯಾವುದೇ ಯೋಜನೆಗಳನ್ನು ಹಾಕಿಕೊಳ್ಳದೇ ನಗರೀಕರಣದ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸುವುದು ಅಪಾಯಕಾರಿ’ ಎಂದು ಐಸಿಎಸ್‌ಎಸ್‌ಆರ್‌ ಸಲಹೆಗಾರ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎ.ರವೀಂದ್ರ ಅಭಿಪ್ರಾಯಪಟ್ಟರು.

ಶನಿವಾರ ನಗರದ ಜೈನ್ ವಿಶ್ವವಿದ್ಯಾಲಯದಲ್ಲಿ ‘ನಗರೀಕರಣ ಮತ್ತು ಪರಿವರ್ತನೆ’ ಎಂಬ ವಿಷಯದ ಕುರಿತ ಏರ್ಪಡಿಸಿದ್ದ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಲಂಡನ್, ನ್ಯೂಯಾರ್ಕ್ ಸೇರಿದಂತೆ ವಿಶ್ವದ ಕೆಲವು ಅತ್ಯುತ್ತಮ ನಗರಗಳ ಸುಸ್ಥಿರ ಬೆಳವಣಿಗೆಗೆ ಆ ನಗರದ ನಿರ್ಮಾತೃಗಳ ದೂರದೃಷ್ಠಿಯೇ ಕಾರಣ. ಆದರೆ ನಮ್ಮಲ್ಲಿ ಎಗ್ಗಿಲ್ಲದೇ ಬೆಳೆಯುತ್ತಿರುವ ಯಾವುದೇ ನಗರಗಳು ಯೋಜನಾಬದ್ಧವಾಗಿ ನಿರ್ಮಾಣಗೊಳ್ಳುತ್ತಿಲ್ಲ. ಹೀಗಾಗಿ ನಗರೀಕರಣದ ಅಡ್ಡಪರಿಣಾಮಗಳು ನಮ್ಮಲ್ಲಿ ವ್ಯಾಪಕವಾಗಿವೆ’ ಎಂದು ಕಳವಳಪಟ್ಟರು.

‘ದೇಶದ ಆರ್ಥಿಕ ಬೆಳವಣಿಗೆ ಪ್ರಮುಖವಾಗಿ ನಗರಗಳ ಬೆಳವಣಿಗೆಯ ಮೇಲೆ ನಿರ್ಧರಿತವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಕೊಡುಗೆಯಿಂದ ಇಂದು ನಗರಗಳು ತ್ವರಿತವಾಗಿ ವಿಸ್ತಾರಗೊಳ್ಳುತ್ತಿವೆ. ಇದರಿಂದ ಗ್ರಾಮಗಳಿಂದ ನಗರಗಳಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದರು.

‘ಸ್ಮಾರ್ಟ್‌ಸಿಟಿ ಎಂಬುದು ನಗರೀಕರಣದ ಹೊಸ ಅವತಾರವಾಗಿದೆ. ಆದರೆ ಭಾರತದಲ್ಲಿ ನಗರಗಳನ್ನು ಸ್ಮಾರ್ಟ್‌ ಸಿಟಿಯಾಗಿ ರೂಪಿಸುವುದು ಸುಲಭವಲ್ಲ. ನಗರಗಳ ಪರಿವರ್ತನೆಗೆ ಪ್ರಮುಖವಾಗಿ ರಾಜಕೀಯ ಪರಿವರ್ತನೆ ಬೇಕು. 1990 ರಿಂದ ಬೆಂಗಳೂರು ನಗರದ ಜನಸಂಖ್ಯೆ ಗಣನೀಯವಾಗಿ ಹೆಚ್ಚಳವಾಯಿತು. ಸದ್ಯ ಕೋಟಿಗೂ ಅಧಿಕ ಜನಸಂಖ್ಯೆ ಬೆಂಗಳೂರಿನಲ್ಲಿದೆ. ಈ ಪರಿಯ ಏರಿಕೆಯನ್ನು ನಾವು ಅಂದು ಊಹಿಸಿರಲಿಲ್ಲ. ಜನಸಂಖ್ಯೆಯ ಅಸಮರ್ಪಕ ಬೆಳವಣಿಗೆ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ’ ಎಂದರು

‘ಬೆಂಗಳೂರು ನಗರ ಪರಿವರ್ತನೆಯ ಆಡಳಿತ ಕುರುಹುಗಳು’ ಎಂಬ ವಸ್ತುಪ್ರದರ್ಶನವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎ.ಕೆ.ಜೈನ್ ಉದ್ಘಾಟಿಸಿದರು. ವಿವಿ ಕುಲಸಚಿವ ಪ್ರೊ. ಎನ್‌.ವಿ.ಎಚ್ ಕೃಷ್ಣನ್, ಸಾಮಾಜಿಕ ವಿಷಯಗಳ ವಿಭಾಗದ ಡೀನ್ ಡಾ.ಚೂಡಾಮಣಿ ನಂದಗೋಪಾಲ್ ಉಪಸ್ಥಿತರಿದ್ದರು.

Write A Comment