ಕರ್ನಾಟಕ

ಸಂಶೋಧಕ ಎಂ.ಎಂ. ಕಲಬುರ್ಗಿಗೆ ಕಂಬನಿ ಮಿಡಿದ ಸಾಹಿತ್ಯಲೋಕ; ಗೋಡ್ಸೆ ಗುಣದ ವಿಸ್ತೃತ ಸನ್ನಿವೇಶ: ಬರಗೂರ

Pinterest LinkedIn Tumblr

chidanandaಬೆಂಗಳೂರು: ‘ದೇಶದಲ್ಲಿ ಹಿಂಸಾಪರಂಪರೆ  ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಡಾ. ಎಂ.ಎಂ ಕಲಬುರ್ಗಿ ಅವರ ಹತ್ಯೆ ನಡೆದಿದೆ. ಇದು ಗೋಡ್ಸೆ ಗುಣವನ್ನು ವಿಸ್ತರಿಸುವ ಸನ್ನಿವೇಶ’ ಎಂದು ಲೇಖಕ, ಚಿಂತಕ ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.

ಬಸವ ಸಮಿತಿಯು ಶನಿವಾರ ಹಮ್ಮಿಕೊಂಡಿದ್ದ ‘ಡಾ. ಎಂ.ಎಂ. ಕಲಬುರ್ಗಿ ಸ್ಮರಣೆ’ ಕಾರ್ಯಕ್ರಮದಲ್ಲಿ  ನುಡಿ ನಮನ ಸಲ್ಲಿಸಿದ ಅವರು, ‘ಇಲ್ಲಿ ಗೋಡ್ಸೆ ಗುಣವನ್ನು ವ್ಯಕ್ತಿಗತವಾಗಿ ಬಳಸುತ್ತಿಲ್ಲ. ರೂಪಕವಾಗಿ ಹೇಳುತ್ತಿದ್ದೇನೆ’ ಎಂದೂ ಸ್ಪಷ್ಟಪಡಿಸಿದರು.

‘ಗಾಂಧೀಜಿ ಹತ್ಯೆಯ ಹಿಂದೆ ದೊಡ್ಡ ಸಂಚು ಇತ್ತು. ಅದಕ್ಕಾಗಿ ಸಿದ್ಧತೆಯೂ ನಡೆದಿತ್ತು. ಗೋಡ್ಸೆಯನ್ನು ಆರಾಧಿಸುವ ವರ್ಗವೂ ನಮ್ಮಲ್ಲಿ ಪ್ರಬಲವಾಗುತ್ತಿದೆ. ಕಲಬುರ್ಗಿ ಹತ್ಯೆಯ ಹಿಂದೆಯೂ ಸಂಚು ಇದೆ’ ಎಂದು ಅಭಿಪ್ರಾಯಪಟ್ಟರು

‘ವೈಚಾರಿಕ ಭಿನ್ನಾಭಿಪ್ರಾಯಗಳು  ಬೇರೆ. ಆದರೆ, ಹಿಂಸೆಯನ್ನು ಬೆಂಬಲಿಸುವ ಮತ್ತು ಆರಾಧಿಸುವ ಸಮಾಜವು ಆರೋಗ್ಯಕರವಾಗಿರಲು ಸಾಧ್ಯವಿಲ್ಲ. ವಿದ್ವಾಂಸರನ್ನು ಕೊಲ್ಲುವಷ್ಟರ ಮಟ್ಟಿಗೆ ಕರ್ನಾಟಕ ಸಮಾಜ ಬೆಳೆದಿದೆಯೇ?  ನುಡಿಹಿಂಸೆ, ನಡೆ ಹಿಂಸೆ ತಾಂಡವವಾಡುತ್ತಿರುವ ಈ ದೇಶದಲ್ಲಿ  ಕರ್ನಾಟಕವೂ ಆ ಕರಾಳ ವಲಯಕ್ಕೆ ಪ್ರವೇಶಿಸಿದೆಯೇ?’  ಎಂದು ಆತಂಕ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ (ಚಂಪಾ) ಮಾತನಾಡಿ, ‘26 ವರ್ಷಗಳ ಹಿಂದೆ ಹುಬ್ಬಳ್ಳಿಯ ಮೂರು ಸಾವಿರ ಮಠ ಅಥವಾ ಧಾರವಾಡದ ಮುರುಘಾಮಠದಲ್ಲಿ ಕಲಬುರ್ಗಿ ಅವರ ಹತ್ಯೆಯಾಗಬೇಕಿತ್ತು. ಲಿಂಗಾಯತ ಸಮುದಾಯದವರು ಅವರನ್ನು ಕೊಲ್ಲುವುದಕ್ಕೆ ಮುಂದಾಗಿದ್ದರು. ಕುಟುಂಬದ ಒತ್ತಡದ ಮೇರೆಗೆ ಅವರು  ವಿರೋಧಿಗಳೊಂದಿಗೆ ರಾಜಿ ಮಾಡಿಕೊಂಡರು’ ಎಂದರು.

‘ರಾಜಿ ಮಾಡಿಕೊಂಡ ತಕ್ಷಣ ತನ್ನಲ್ಲಿರುವ ‘ಚಿಂತಕ’ ಆತ್ಮಹತ್ಯೆ ಮಾಡಿಕೊಂಡ ಎಂದು ಕಲಬುರ್ಗಿ ಬರೆದುಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ‘ಚಿಂತಕ’ನಿಗೆ ಆತ್ಮ ಶಾಂತಿ ಕೋರುವವರು ಯಾರೂ ಇರಲಿಲ್ಲ. ಹಾಗಾಗಿ, ಆ ಚಿಂತಕ ಕಲಬುರ್ಗಿ ಅವರನ್ನು ಕಾಡಿಸಿದ ಪೀಡಿಸಿದ. ಅದರ ಪೀಡನೆ ಅನುಭವಿಸಿ, ಕಲಬುರ್ಗಿ ಇನ್ನಷ್ಟು ಗಟ್ಟಿಯಾದರು’ ಎಂದು ಭಾವುಕರಾದರು.

ಬೆದರಿಕೆಗೆ ಜಗ್ಗಲಿಲ್ಲ: ‘26 ವರ್ಷಗಳಲ್ಲಿ ಕಲಬುರ್ಗಿ ಜೀವನದಲ್ಲಿ ಎರಡು ಹಂತಗಳಿವೆ. ಮೊದಲನೇ ಹಂತದಲ್ಲಿ ಶರಣರ ವಿರುದ್ಧ ಬರೆದಿದ್ದರಿಂದ ಶರಣ ಸಮುದಾಯ ಅವರ ವಿರೋಧಿಗಳಾದರು. ಆದರೆ, ಯಾವಾಗ ಲಿಂಗಾಯತರ ಗದ್ದಲ ಶುರುವಾಯಿತೋ ವಿರೋಧಿ ಪಡೆ ಇನ್ನೂ ವಿಸ್ತರಿಸಿತು. ಹಿಂದೂ ಧರ್ಮ ಪ್ರಬಲವಾದ ಮೇಲೆ ವಿರೋಧಿ ವಲಯ ಮತ್ತಷ್ಟು ವಿಸ್ತಾರವಾಯಿತು. ಸಂಘ ಪರಿವಾರದ ದುಷ್ಟ ಶಕ್ತಿಗಳು ಕಲಬುರ್ಗಿ ಅವರನ್ನು ಭೇಟೆಯಾಡಲು ಹೊಂಚು ಹಾಕಲು ಆರಂಭಿಸಿದವು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅವರಿಗೆ ಎಲ್ಲದಕ್ಕೂ ತರಾತುರಿ. ಸಂಶೋಧನೆಗಳೂ ಅವಸರದ್ದೇ. ತಮ್ಮ ಮಾತನ್ನು ಒಪ್ಪದಿರುವವರ ಮೇಲೆ ಕೋಪವೂ ಬರುತ್ತಿತ್ತು. ಜಾತಿ ರಾಜಕಾರಣ, ಒಳಜಾತಿಕಾರಣ ಕೂಡ ಮಾಡಿದ್ದಾರೆ. ಹೀಗಾಗಿ ವೈರಿಗಳ ವ್ಯೂಹ ದೊಡ್ಡದಾಗಿತ್ತು’ ಎಂದರು.

‘ಅತೀತರನ್ನು, ಶೋಷಿತರನ್ನು, ಹಿಂದುಳಿದವರನ್ನು ಸಬಲರನ್ನಾಗಿ ಮಾಡಲು ದೇಶದಲ್ಲಿ ನಾಯಕತ್ವ ವಹಿಸಬೇಕಾದ ಬಸವ ಸಮುದಾಯದ ಮಠಾಧೀಶರು,  ರಾಜಕಾರಣಿಗಳು, ಸಾಹಿತಿಗಳು, ಚಿಂತಕರು ರಾಜ್ಯದಲ್ಲಿ ಕೋಮುವಾದಿ ಪಕ್ಷ ಅಧಿಕಾರಕ್ಕೆ ಬರಲು ಅಡಿಪಾಯ ಹಾಕಿದರು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಎಂ. ಜಾಮದಾರ್‌ ಅವರು, ‘ಕಿತ್ತೂರು ಸಂಸ್ಥಾನದ ಬಗ್ಗೆ ಕಲೆ ಹಾಕಿದ್ದ ಮಾಹಿತಿಗಳಲ್ಲಿ ಕೆಲವೇ ಕೆಲವುಗಳನ್ನು ನಾನು ಕಲಬುರ್ಗಿ ಅವರಿಗೆ ನೀಡಿದ್ದೆ. ಅದನ್ನು ಅವರು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ.  ಇನ್ನೂ ಹಲವು ಸೂಕ್ಷ್ಮ ಮಾಹಿತಿಗಳು ನನ್ನಲ್ಲಿವೆ. ಅದನ್ನು ಕೊಟ್ಟಿದ್ದರೆ ಅವರಿಗೆ  ಈ ಮೊದಲೇ ಅಪಾಯ ಎದುರಾಗುತ್ತಿತ್ತು’ ಎಂದರು.

ಮಹಾ ದುರಂತ
ಚಂಪಾ ಭಾಷಣಕ್ಕೆ ಎದ್ದು ನಿಂತ ತಕ್ಷಣ ಚಿದಾನಂದಮೂರ್ತಿ ಅಲ್ಲಿಂದ ನಿರ್ಗಮಿಸಲು ಮುಂದಾದರು. ಅವರನ್ನು ತಡೆದ ಚಂಪಾ, ಕುಳಿತು ಕೊಳ್ಳುವಂತೆ ಮನವಿ ಮಾಡಿದ ಘಟನೆಯೂ ನಡೆಯಿತು. ತಮ್ಮ ಮಾತಿನ ಮಧ್ಯೆ, ಚಿದಾನಂದ ಮೂರ್ತಿ ಅವರ ಹೆಸರನ್ನು ಚಂಪಾ ಎರಡು ಬಾರಿ ಎಳೆದು ತಂದರು.

‘ಲಿಂಗಾಯತ ಮತ್ತು ವೀರಶೈವ ವಿಚಾರದಲ್ಲಿ ನಮ್ಮ ರಾಜ್ಯದ ಇಬ್ಬರು ಮೇಧಾವಿ ಸತ್ಯ ಶೋಧಕರು, ಸರಳರು, ಸಜ್ಜನರು, ಉತ್ತರ ಧ್ರುವ, ದಕ್ಷಿಣ ಧ್ರುವಗಳಂತೆ ಇದ್ದುದು ಸಾಹಿತ್ಯ ಲೋಕದ ದೊಡ್ಡ ದುರಂತ’ ಎಂದು ಚಿದಾನಂದ ಮೂರ್ತಿ ಮತ್ತು ಕಲಬುರ್ಗಿ ಅವರ ಹೆಸರು ಗಳನ್ನು ಹೇಳದೆಯೇ ಪ್ರಸ್ತಾಪಿಸಿದರು.

***
ಅನಿರೀಕ್ಷಿತ ಸಾವು ಕಂಡ ಎಂ. ಎಂ. ಕಲಬುರ್ಗಿ ಅವರು ಒಬ್ಬ ಹುತಾತ್ಮ. ಸತ್ಯದ ಪರವಾಗಿ ನಿರ್ಭೀತಿಯಿಂದ ಮಾತನಾಡಿದ್ದಕ್ಕೆ ನಿಗೂಢವಾಗಿ ಕೊಲೆಯಾಗಿದ್ದಾರೆ.
-ಡಾ. ಎಂ. ಚಿದಾನಂದ ಮೂರ್ತಿ,
ಸಂಶೋಧಕ

Write A Comment