ಬೆಂಗಳೂರು: ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿದ ನೈಜೀರಿಯಾ ಮೂಲದ ಬಿಸಿಎ ವಿದ್ಯಾರ್ಥಿಯೊಬ್ಬ, ರಸ್ತೆ ಬದಿ ನಿಂತಿದ್ದ ವಾಹನಗಳು ಹಾಗೂ ಹೋಟೆಲ್ನ ತಡೆ ಗೋಡೆಗೆ ಕಾರು ಗುದ್ದಿಸಿ ರಾದ್ಧಾಂತ ಸೃಷ್ಟಿಸಿದ ಘಟನೆ ಕಮ್ಮನಹಳ್ಳಿ ಮುಖ್ಯ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಶೈಕ್ಷಣಿಕ ವೀಸಾದಡಿ ನಗರಕ್ಕೆ ಬಂದಿರುವ ಮವಿಂಗಾ, ಒಂದೂವರೆ ವರ್ಷದಿಂದ ಕಮ್ಮನಹಳ್ಳಿಯಲ್ಲಿ ನೆಲೆಸಿದ್ದಾನೆ. ಬೆಳಿಗ್ಗೆ 5.30ರ ಸುಮಾರಿಗೆ ಆತ, ನೀರಿನ ಬಾಟಲ್ ಖರೀದಿಸಲು ಹತ್ತಿರದ ‘ಬಿಗ್ ಚಿಕನ್’ ಹೋಟೆಲ್ಗೆ ಬಂದಿದ್ದ. ಈ ವೇಳೆ ರಸ್ತೆ ಮಧ್ಯೆ ಕಾರು ನಿಲ್ಲಿಸಿ, ಅಬ್ಬರದ ಶಬ್ದದಲ್ಲಿ ಹಾಡು ಹಾಕಿಕೊಂಡಿದ್ದ. ಆಗ ಸ್ಥಳೀಯರು ಹಾಡಿನ ಶಬ್ದವನ್ನು ಕಡಿಮೆ ಮಾಡುವಂತೆ ಸೂಚಿಸಿದರು. ಅದಕ್ಕೆ ಒಪ್ಪದಿದ್ದಾಗ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದು, ಕೈ–ಕೈ ಮಿಲಾಯಿಸುವ ಹಂತಕ್ಕೆ ಹೋಯಿತು.
ಈ ವೇಳೆ ಅಶ್ಲೀಲ ಪದಗಳಿಂದ ನಿಂದಿಸಿದನೆಂದು ಆರೋಪಿಸಿ ಸ್ಥಳೀಯರು ಆತನ ಕಾರಿನ ಮೇಲೆ ಕಲ್ಲು ತೂರಿದ್ದಾರೆ. ಕೂಡಲೇ ಮವಿಂಗಾ, ವೇಗವಾಗಿ ವಾಹನ ಚಾಲನೆ ಮಾಡಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಮೊದಲೇ ಕುಡಿದ ಮತ್ತಿನಲ್ಲಿದ್ದ ಆತ, ನಿಯಂತ್ರಣ ಕಳೆದುಕೊಂಡು ಮೊದಲು ಒಡಿಶಾ ಮೂಲದ ವ್ಯಕ್ತಿಯೊಬ್ಬರ ಕಾರಿಗೆ ಡಿಕ್ಕಿ ಮಾಡಿದ್ದಾನೆ. ಇಷ್ಟಕ್ಕೂ ನಿಲ್ಲದ ಕಾರು, ಪಾದಚಾರಿ ಮಾರ್ಗವನ್ನೇರಿ ಸುಖ್ ಸಾಗರ್ ಹೋಟೆಲ್ ಕಾಂಪೌಂಡ್ ಹಾಗೂ ಪೇಪರ್ ಹಾಕುವ ಹುಡುಗರ ಸೈಕಲ್ಗಳಿಗೆ ಗುದ್ದಿತು. ಇದರಿಂದ ಕೆರಳಿದ ಸ್ಥಳೀಯರು, ಮವಿಂಗಾನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದರು. ಕಾರಿನ ಗಾಜುಗಳನ್ನು ಒಡೆದು ಆಕ್ರೋಶ ಹೊರ ಹಾಕಿದರು. ಬಾಣಸವಾಡಿ ಸಂಚಾರ ಹಾಗೂ ಕಾನೂನು ಸುವ್ಯವಸ್ಥೆ ಠಾಣೆಗಳ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
‘ಮವಿಂಗಾನನ್ನು ಆಲ್ಕೋಮೀಟರ್ ಮೂಲಕ ತಪಾಸಣೆಗೆ ಒಳಪಡಿಸಿದಾಗ ಮದ್ಯ ಸೇವನೆ ಪ್ರಮಾಣ 117 ಮಿ.ಗ್ರಾಂನಷ್ಟಿತ್ತು. ಹೀಗಾಗಿ ದಂಡ ಕಟ್ಟಿಸಿಕೊಂಡು, ಕಾರನ್ನು ಜಪ್ತಿ ಮಾಡಲಾಯಿತು. ಮುಂದಿನ ತನಿಖೆಯನ್ನು ಬಾಣಸವಾಡಿ ಕಾನೂನು ಸುವ್ಯವಸ್ಥೆ ಠಾಣೆಗೆ ವಹಿಸಲಾಗಿದೆ’ ಎಂದು ಬಾಣಸವಾಡಿ ಸಂಚಾರ ಪೊಲೀಸರು ಹೇಳಿದರು.
ಪ್ರತ್ಯಾರೋಪ: ‘ಅಪಘಾತದಿಂದ ಗಾಯಗೊಂಡಿರುವ ಮವಿಂಗಾನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ ನಡುರಸ್ತೆಯಲ್ಲಿ ದುರ್ವರ್ತನೆ ತೋರಿದನೆಂದು ಸ್ಥಳೀಯರು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೇಪರ್ ಹಾಕುವ ಹುಡುಗರು ಮವಿಂಗಾನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆತನ ಪರ ವಕೀಲೆ ದೂರು ಕೊಟ್ಟಿದ್ದಾರೆ.