ಕರ್ನಾಟಕ

ಕೆಜಿಎಫ್: 30 ಅಡಿ ರಸ್ತೆ ಭೂ ಕುಸಿತ; ನಾಗರಿಕರಲ್ಲಿ ಆತಂಕ

Pinterest LinkedIn Tumblr

KUSITಕೆಜಿಎಫ್, ಸೆ.8: ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ತಾಲೂಕಿನ ಆಂಡ್ರಸನ್‌ಪೇಟೆ 2ನೆ ಬ್ಲಾಕ್‌ನ ಜನವಸತಿ ಪ್ರದೇಶದಲ್ಲಿ ದಿಢೀರ್ ಭೂ ಕುಸಿತ ಉಂಟಾಗಿ, ರಸ್ತೆಯಲ್ಲಿ 30 ಅಡಿ ಹಳ್ಳ ನಿರ್ಮಾಣವಾಗಿದೆ. ಅಲ್ಲದೇ ಸ್ಥಳೀಯ ನಿವಾಸಿಯಾಗಿರುವ ನಿವೃತ್ತಯೋಧ ಮಣಿವಣ್ಣನ್ ಎಂಬವರ ಮನೆಯ ಗೋಡೆಗಳಲ್ಲಿ ಬಿರುಕು ಬಿಟ್ಟು ಮನೆಯು ಕುಸಿಯುವ ಹಂತಕ್ಕೆ ತಲುಪಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕಳೆದ 30 ವರ್ಷಗಳ ಹಿಂದೆ ಮತ್ತು 2003ರಲ್ಲಿ ಸಹ ಭೂಮಿ ಕಂಪಿಸಿದ್ದು, ಸೋಮಾವಾರದಂದು ಭೂ ಕುಸಿತವಾದ ಸ್ಥಳದಲ್ಲಿಯೇ ಕುಸಿತಕ್ಕೆ ಒಳಗಾಗಿತ್ತು. ಬಿಜಿಎಂಎಲ್ ಕಾರ್ಖಾನೆ ನಡೆಯುತ್ತಿದ್ದ ವೇಳೆ ಸಿಂಕ್‌ನ ಸುರಂಗ ಮಾರ್ಗ(120 ಅಡಿ) ನಿರ್ಮಿಸಲಾಗಿತ್ತು ಎನ್ನಲಾಗುತ್ತಿದ್ದು, ಆ ನಂತರ ಬಿಜಿಎಂಎಲ್ ಆಡಳಿತ ಮಂಡಳಿ ಅವೈಜ್ಞ್ಞಾನಿಕ ರೀತಿಯಲ್ಲಿ ಹಳ್ಳವನ್ನು ಮುಚ್ಚಿದೆ. ಇದರ ಮಾಹಿತಿ ಅರಿಯದ ಸಾರ್ವಜನಿಕರು ಮನೆಗಳನ್ನು ಹಳ್ಳದ ಮೇಲೆ ನಿರ್ಮಿಸಿದ್ದಾರೆ, ಏರ್ ಬ್ಲಾಸ್ಟ್ ಮತ್ತು ಮಳೆಯ ಕಾರಣದಿಂದ ಆಗಾಗ ಭೂ ಕುಸಿತ ಉಂಟಾಗುತ್ತಿದೆ ಎನ್ನಲಾಗಿದೆ.
ಬಿಜಿಎಂಎಲ್ ಆಡಳಿತ ಮಂಡಳಿ ಸುರಂಗ ಮಾರ್ಗವನ್ನು ಎಲ್ಲಿಂದ ಎಲ್ಲಿಯವರೆಗೆ ಮಾಡಿದೆ ಮತ್ತು ಅದರ ಆಳ ಎಷ್ಟು, ಈ ಭಾಗದಲ್ಲಿ ಮನೆಗಳನ್ನು ನಿರ್ಮಿಸಿದರೆ ಸುರಕ್ಷಿತವೇ ಎಂಬುದರ ಬಗ್ಗೆ ವರದಿಯನ್ನು ಇದುವರೆಗೂ ಸಂಬಂಧಪಟ್ಟ ಇಲಾಖೆಗೆ ನೀಡಿಲ್ಲ. ಈ ಬಗ್ಗೆ ಅರಿವು ಮೂಡಿಸಲೂ ಯತ್ನಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಜಿಎಂಎಲ್ ವ್ಯಾಪ್ತಿಯಲ್ಲಿನ ಬುಲನ್ಸ್, ಏಡ್ಗರ್ ಮೈನ್ಸ್ ,ಟೆನೆಂಟ್ ಶಾಷ್ಟ್, ನಂದಿ ದುರ್ಗ ಮೈನ್ಸ್, ಗೋಲ್ಕಂಡ ಮೈನ್ಸ್, ಚಾಂಪಿಯನ್‌ರೀಫ್ ಮೈನ್ಸ್ ಗಳನ್ನು ಮುಚ್ಚಲಾಗಿದ್ದು, ಕೆಳ ಭಾಗದ ಭೂಮಿಯು ಟೊಳ್ಳು ಎನ್ನಲಾಗುತ್ತಿದ್ದು, ಇದೇ ಕಾರಣಗಳಿಂದ ಮುಂದೆಯೂ ಭೂ ಕುಸಿತವಾಗಬಹುದೆಂಬ ಆತಂಕ ಇಲ್ಲಿಯ ಜನರನ್ನು ಕಾಡುತ್ತಿದೆ.
ಈ ಗಣಿಗಾರಿಕೆಗೆ ವ್ಯಾಪ್ತಿಯಲ್ಲಿ ಕಡು ಬಡ ಕುಟುಂಬಗಳು ವಾಸವಾಗಿದು,್ದ ನಗರ ಪ್ರದೇಶದಲ್ಲಿ ಮನೆಗಳಿಗೆ ಹೆಚ್ಚಿನ ಬಾಡಿಗೆ ನೀಡಿ ವಾಸ ಮಾಡಲು ಸಾಧ್ಯವಿಲ್ಲದಿರುವುದರಿಂದ ಅನಿವಾರ್ಯವಾಗಿ ಇಲ್ಲಿ ವಾಸ ಮಾಡುತ್ತಿದ್ದಾರೆ.
ಸಂಬಂಧಪಟ್ಟ ಇಲಾಖೆಯ ತಜ್ಞರು ಸ್ಥಳಕ್ಕೆ ಭೆೇಟಿ ನೀಡಿ ಪರಿಶೀಲನೆ ನಡೆಸಿ ಮುಂದೆ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂಬುದು ನಾಗರಿಕರ ಒತ್ತಾಸೆಯಾಗಿದೆ.
ಭೂಕುಸಿತದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಅಧ್ಯಕ್ಷ ಎಂ.ಭಕ್ತವತ್ಸಲಂ ಪರಿಶೀಲನೆ ನಡೆಸಿ, ಕುಟುಂಬದವರಿಗೆ ಸಾಂತ್ವನವನ್ನು ಹೇಳಿ ನಗರಸಭೆವತಿಯಿಂದ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಭೂಕುಸಿತವಾಗಿರುವ ಜಾಗದ ಸುತ್ತ ಬ್ಯಾರಿ ಕೇಡ್‌ಗಳನ್ನು ಹಾಕಿ ಜನತೆ ಹತ್ತಿರಕ್ಕೆ ಬಾರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.

Write A Comment