ಕರ್ನಾಟಕ

ಆನೇಕಲ್ ಇಒ ವಿರುದ್ಧ ಪಿವಿಸಿ(ಎಸ್) ಪ್ರತಿಭಟನೆ: ಬಡವರ ಸೂರು ಕಿತ್ತು ಪ್ರಭಾವಿಗಳಿಗೆ ಸಹಕಾರ: ಆರೋಪ

Pinterest LinkedIn Tumblr

SURUಆನೇಕಲ್, ಸೆ.8: ತಾಲೂಕಿನ ಇಒ ನೋಮೇಶ್, ಬಡವರ ಸೂರನ್ನು ಕಿತ್ತು, ಪ್ರಭಾವಿಗಳಿಗೆ ಶಕ್ತಿ ತುಂಬುತ್ತಿದ್ದಾರೆ ಎಂದು ಆರೋಪಿಸಿ ಪ್ರಜಾ ವಿಮೋಚನಾ ಚಳವಳಿ ಸಂಘದಿಂದ ತಾಪಂ ಕಚೆೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿವಿಸಿ(ಎಸ್) ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ, ಬನ್ನೇರುಘಟ್ಟ ಗ್ರಾಪಂ ವ್ಯಾಪ್ತಿಯ ಸರ್ವೇ ಸಂ.2ರಲ್ಲಿ ಎರಡು ವರ್ಷಗಳಿಂದಲೂ ನಿವೇಶನಕ್ಕಾಗಿ ತಳಪಾಯ ಹಾಕಿಕೊಂಡು ವಸತಿಗಾಗಿ ಹಂಬಲಿಸುತ್ತಿದ್ದ ಬಡ ಕುಟುಂಬಗಳನ್ನು ಒಕ್ಕಲೆಬ್ಬಿಸಿದ ತಾಪಂ ಇಒ ನೋಮೇಶ್ ಇದೇ ರೀತಿ ಒಟ್ಟು 60-70 ಕುಟುಂಬಗಳನ್ನು ಬೀದಿಗೆ ತಳ್ಳಿದ್ದಾರೆಂದು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.

ಜನಪ್ರತಿನಿಧಿ ಹಾಗೂ ಅಧಿಕಾರಿಗಳಿ ಗಂತೂ ಸೂರಿಲ್ಲದವರಿಗೆ ಸೂರನ್ನು ನೀಡುವ ಆಸಕ್ತಿ ಇಲ್ಲ. ಆದರೆ ಅಷ್ಟೋ ಇಷ್ಟೋ ಇದ್ದ ಜಾಗಕ್ಕೆ ಸಾಲಮಾಡಿ ಸೂರು ಕಟ್ಟಿಕೊಂಡರೆ ಏಕಾಏಕಿ ತಮ್ಮ ಅಧಿಕಾರದ ದರ್ಪವನ್ನು ಬಡವರ ಮೇಲೆ ಹೇರಲು ಹಾತೊರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನಲ್ಲಿ ಪ್ರಭಾವಿಗಳಿಂದ ಸುಮಾರು ಎಕರೆ ಸರಕಾರಿ ಭೂಮಿ ಒತ್ತುವರಿಯಾಗಿದ್ದು, ಈ ವೇಳೆ ಅಧಿಕಾರಿಗಳ ಶೂರತನ ಎಲ್ಲಿ ಹೋಗುತ್ತವೆ ಎಂದು ಪ್ರಶ್ನಿಸಿದ ಅವರು, ಕೇವಲ ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಗುಡಿಸಲುಗಳನ್ನು ನೆಲಸಮಗೊಳಿಸಿ ತಮ್ಮ ತೋಳ್ಬಲ ಪ್ರದರ್ಶಿಸಲು ಇವರಿಗೆ ಅಧಿಕಾರ ನೀಡಿದವರು ಯಾರು ಎಂಬುದು ಕೂಡಲೇ ಬಹಿರಂಗವಾಗಬೇಕು ಮತ್ತು ಬೀದಿಗೆ ಬಿದ್ದಿರುವ ಅಷ್ಟೂ ಕುಟುಂಬಗಳಿಗೆ ಸೂರನ್ನು ಕಲ್ಪಿಸಿಕೊಡುವ ಪ್ರಾಮಾಣಿಕ ಆಶ್ವಾಸನೆಯನ್ನು ನೀಡಬೇಕೆಂದು ಒತ್ತಾಯಿಸಿದರು.
ಇಲ್ಲವಾದಲ್ಲಿ ರಾಜ್ಯದ ಪ್ರಮುಖ ಜನಪ್ರತಿನಿಧಿಗಳ ಮನೆ ಮುಂದೆ ಧರಣಿ ನಡೆಸುವ ಎಚ್ಚರಿಕೆಯನ್ನು ನೀಡಿದರು.

ಪ್ರತಿಭಟನೆಯಲ್ಲಿ ಬೆಂ. ನಗರ ಜಿಲ್ಲಾಧ್ಯಕ್ಷ ಯಡವನಹಳ್ಳಿ ಕೃಷ್ಣಪ್ಪ, ಮುಖಂಡ ಕೊಪ್ಪ ರವಿ, ಜಯರಾಂ ಸರ್ಜಾ ರಾಮಾಂಜಿನಪ್ಪ, ಪಟ್ಟಣ ಅಧ್ಯಕ್ಷ ಬಾಬು ಮತ್ತಿತರರೊಂದಿಗೆ ಸೂರು ಕಳೆದುಕೊಂಡ ಅನೇಕ ಮಹಿಳೆಯರು ಉಪಸ್ಥಿತರಿದ್ದರು.

Write A Comment