ಮೂಡುಬಿದಿರೆ, ಜ.11: ಇಲ್ಲಿನ ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್ನ ವಿರಾಸತ್ ವೇದಿಕೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್-2015ರ 3ನೆ ದಿನ ಅಂಧ ಹಾಗೂ ವಿಕಲಚೇತನ ಕಲಾವಿದರು ತಮ್ಮ ಪ್ರತಿಭೆಯ ಮೂಲಕ ನೆರೆದವರನ್ನು ಮೋಡಿಗೊಳಿಸಿದರು.
ಅಂಧ ಕಲಾವಿದರ ಸುಮಧುರ ಕಂಠದಿಂದ ಹಳೆ ಮತ್ತು ಹೊಸ ಹಿಂದಿ ಚಲನಚಿತ್ರದ ಹಾಡುಗಳ ನಿನಾದ ‘ಅಖಿಯೋಂಕೆ ಝರೋಂಕೋ ಸೇ’ ಚಿತ್ರ ರಸಸಂಜೆ ವೇದಿಕೆಯ ಮುಂಭಾಗದಲ್ಲಿ ಸೇರಿರುವ ಪ್ರೇಕ್ಷಕರನ್ನು ಗಾಯನ ಲೋಕದಲ್ಲಿ ತೇಲಿಸಿದವು.
ಮುಂಬೈನ ಸೋನಲ್ ಪ್ರೊಡಕ್ಷನ್ಸ್ ಹಾಗೂ ನಂದುಕದಮ್ಸ್ ತಂಡದ 30 ಅಂಧ ಕಲಾವಿದರು ನಡೆಸಿಕೊಟ್ಟ ಈ ಚಿತ್ರ ರಸಸಂಜೆಯಲ್ಲಿ ಓರ್ವ ಕಲಾವಿದ ಹೆಣ್ಣಿನ ಧ್ವನಿಯನ್ನೇ ಹೋಲುವ ರಾಗದೊಂದಿಗೆ ಹಾಡಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.
ಉಳಿದ ಕಲಾವಿದರು ಮೈನೆ ಪ್ಯಾರ್ ಕಿಯಾ, ಧರ್ಮಾತ್ಮ, ಮೊಘಲ್-ಇ-ಆಝಾಮ್ ಮೊದಲಾದ ಹಲವು ಹಿಂದಿ ಸಿನೆಮಾ ಹಾಡುಗಳನ್ನು ಹಾಡಿ ಎಲ್ಲರ ಗಮನಸೆಳೆದರು. ಅಲ್ಲದೆ ಇದೇ ತಂಡದ ಕೆಲವು ಅಂಧ ಕಲಾವಿದರು ಹಾಡಿನ ಹಿನ್ನೆಲೆಯಲ್ಲಿ ಯೋಗ ಪ್ರದರ್ಶನವನ್ನು ನೀಡಿ ಪ್ರೇಕ್ಷಕರ ಮೆಚ್ಚುಗೆಯ ಕರತಾಡನಕ್ಕೆ ಪಾತ್ರರಾದರು.
ಇದಲ್ಲದೆ ಹೊಸದಿಲ್ಲಿಯ ಸೈಯದ್ ಸಲ್ಲಾವುದ್ದೀನ್ ಪಾಶಾ ನಿರ್ದೇಶನದಲ್ಲಿ ಎಬಿಲಿಟಿ ಅನ್ಲಿಮಿಟೆಡ್ ಫೌಂಡೇಶನ್ನ ವಿಕಲಚೇತನರ ಸಾಹಸ ನೃತ್ಯ ‘ಮಿರಾಕಲ್ಸ್ ಆನ್ ವ್ಹೀಲ್ಸ್’ ಪ್ರದರ್ಶನಗೊಳ್ಳುವ ಮೂಲಕ ಸೇರಿದ ಜನರನ್ನು ನಿಬ್ಬೆರಗಾಗುವಂತೆ ಮಾಡಿತು.
ಪಂಜಾಬ್ನ ಜಿ.ಸಿ. ನೈಲ್ ಕಾಲೇಜು ಪತ್ರಾನ್ ಇಲ್ಲಿನ ವಿದ್ಯಾರ್ಥಿಗಳಿಂದ ಪಂಜಾಬಿ ಜನಪದ ನೃತ್ಯ ವೈವಿಧ್ಯ, ಗುಜರಾತ್ ಅಹ್ಮದಬಾದ್ನ ರಂಗ ಮಲ್ಹರ್ ಪರ್ಫಾರ್ಮಿಂಗ್ ಆರ್ಟ್ಸ್ನ ಕಲಾವಿದರಿಂದ ಗುಜರಾತಿ ಜನಪದ ನೃತ್ಯ ವೈವಿಧ್ಯ ಹಾಗೂ ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ವಿರಾಸತ್ನ ಮೂರನೆ ದಿನವೂ ಮುಂದುವರಿಯಿತು.


















































