ಬೆಳ್ತಂಗಡಿ, ಜ.11: ದ.ಕ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಉಸ್ತುವಾರಿ ಸಚಿವರುಗಳು, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ಕೆಎಸ್ಸಾರ್ಟಿಸಿ ಅಧಿಕಾರಿಗಳು ಶನಿವಾರ ಸಂಜೆ ಮಂಗಳೂರು-ಬೆಂಗಳೂರು ಸಂಪರ್ಕ ಕೊಂಡಿಯಾಗಿರುವ (ಲೈಫ್ ಲೈನ್) ಚಾರ್ಮಾಡಿ ಘಾಟಿ ರಸ್ತೆಯ ಸಮಗ್ರ ಅಭಿವೃದ್ಧಿ ಪರಿಶೀಲನೆ ನಡೆಸಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ರಸ್ತೆ ಅಗಲೀಕರಣದ ಕಾಮಗಾರಿಗಳನ್ನು ಈ ಸಂದರ್ಭ ಪರಿಶೀಲಿಸಿದರು. ಬಳಿಕ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಅಭಯ ಚಂದ್ರ ಜೈನ್ ಕಾಮಗಾರಿ ಪರಿಶೀಲಿಸಿ ಸನಿಹದ ಮಲಯ ಮಾರುತ ವಿಹಾರಧಾಮದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಈ ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಇದರ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಆದರೆ ಪ್ರಸ್ತುತ ಆಗಬೇಕಾಗಿರುವ ಕಾಮಗಾರಿಗಳಿಗೆ ತಕ್ಷಣವೇ ರಾಜ್ಯ ಸರಕಾರ ರೂ. 40 ಲಕ್ಷ ನೀಡಿದೆ. ಹೀಗಾಗಿ ಅಗಲೀಕರಣದ ಕಾಮಗಾರಿ ಪ್ರಾರಂಭವಾಗಿದೆ. ಇಲ್ಲಿನ ರಸ್ತೆಯ ಬಗ್ಗೆ ಮಳೆಗಾಲ ಮುಗಿದ ಕೂಡಲೇ ಸರಕಾರದ ಗಮನವನ್ನು ಸೆಳೆಯಲಾಗಿತ್ತು. ಆದರೆ ಸರಕಾರ ಇದರ ಬಗ್ಗೆ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಈಗ ಸಾರ್ವಜನಿಕರಿಗೆ ಕಷ್ಟ ಆದಾಗ ಅದಕ್ಕೆ ತಕ್ಕಂತೆ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಏನಿದ್ದರೂ ಅಧಿಕಾರಿಗಳು ಉದಾಸೀನ ಮಾಡಬಾರದು ಎಂದರು.
ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ರಸ್ತೆಯ ಇಕ್ಕೆಲಗಳಲ್ಲಿ ಅಗಲೀಕರಣ ನಡೆಯುತ್ತಿದೆ. 6 ಜೆಸಿಬಿಗಳು ಸತತ ಕಾರ್ಯ ನಿರ್ವಹಿಸುತ್ತಿವೆ. ಇದಕ್ಕೆ ರಾಜ್ಯ ಸರಕಾರ ರೂ. 40 ಲಕ್ಷ ಬಿಡುಗಡೆ ಮಾಡಿದೆ. ಇದೀಗ ಕಳೆದ 5 ದಿನಗಳಿಂದ ಘಾಟಿಯಲ್ಲಿ ಯಾವುದೇ ತೊಂದರೆ ಆಗಿಲ್ಲ. ಆದರೆ ವಾಹನಗಳ ಅತಿವೇಗದ ಚಾಲನೆಯನ್ನು ಗಮನಿಸಿ ವಾಹನಗಳ ವೇಗದ ಮಿತಿಯನ್ನು 40 ಕಿ.ಮೀ.ಗೇ ಸೀಮಿತಗೊಳಿಸುವ ಆದೇಶವನ್ನು ಅತಿ ಶೀಘ್ರವಾಗಿ ಹೊರಡಿಸಲಾಗುವುದು.
ಘನ ವಾಹನಗಳ ಓಡಾಟವನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಆದರೆ ಸ್ಥಳೀಯರ ಬೇಡಿಕೆಯನ್ವಯ ತರಕಾರಿ, ಅಡುಗೆ ಅನಿಲ ಮತ್ತಿತರ ಅಗತ್ಯವಸ್ತುಗಳನ್ನು ಹೇರಿಕೊಂಡು ಬರುವ 6 ಚಕ್ರದ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದ ಡಿಸಿ, ಈ ಮುನ್ನೆಚ್ಚರಿಕೆಯನ್ನು ಮೊದಲೇ ಕೈಗೊಂಡಿರುತ್ತಿದ್ದರೆ ಇಷ್ಟೆಲ್ಲಾ ಅನನೂಕೂಲ ಆಗುತ್ತಿರಲಿಲ್ಲ ಎಂದು ಒಪ್ಪಿಕೊಂಡರು. ಇಲ್ಲಿನ ಸಂಚಾರ ವ್ಯವಸ್ಥೆಯ ಬಗ್ಗೆ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳಾದ ನಾವು ಸದಾ ಸಂಪರ್ಕದಲ್ಲಿದ್ದು ಕಾರ್ಯನಿರ್ವಹಿಸುತ್ತಿದ್ದೇವೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ಡಿ.ಕೆ., ವಾಹನಗಳ ಓಡಾಟವನ್ನು ತಿಳಿದುಕೊಳ್ಳಲು ಹೇರಪಿನ್ ತಿರುವುಗಳಲ್ಲಿ ನಿಮ್ನ ದರ್ಪಣಗಳನ್ನು ಅಳವಡಿಸುವ ಚಿಂತನೆ ಇದೆ. ಘಾಟಿ ರಸ್ತೆಯಲ್ಲಿನ ವಾಹನಗಳ ಗಣತಿಯನ್ನು ಮಾಡಲಾಗುತ್ತಿದೆ. ನೆಲಮಂಗಲ, ಚೆನ್ನರಾಯಪಟ್ಟಣ, ಎನ್‌ಎಂಪಿಟಿ, ಬಿ.ಸಿ. ರೋಡ್ ಮೊದಲಾದೆಡೆ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು ಎಂದರು.
ಅವಘಡಗಳ ಸಂದರ್ಭಕ್ಕೆ ಅನುಕೂಲವಾಗು ವಂತೆ ಕ್ರೇನ್ ನಿಲ್ಲಿಸಲಾಗಿದೆ. ತುರ್ತು ಚಿಕಿತ್ಸಾ ವ್ಯವಸ್ಥೆ, ಎರಡು ಕಡೆ ಶೌಚಾಲಯ, ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಶಿರಾಡಿ ಘಾಟಿಯ ಕಾಮಗಾರಿ ಮೇ ಅಂತ್ಯದೊಳಗೆ ಮುಗಿಯಲಿದೆ ಎಂದು ಅಲ್ಲಿನ ಗುತ್ತಿಗೆದಾರರು ಮೌಖಿಕವಾಗಿ ತಿಳಿಸಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ತಿಳಿಸಿದರು.
ಒಟ್ಟು 220 ಸರಕಾರಿ ಬಸ್‌ಗಳು ಈ ಮಾರ್ಗ ವಾಗಿ ಸಂಚರಿಸುತ್ತಿವೆ. ಚಾಲಕರಿಗೆ ಘಾಟಿಯಲ್ಲಿ ನಿಧಾನವಾಗಿ ಸಂಚರಿಸುವಂತೆ ಸೂಚಿಸಲಾಗುವುದು ಎಂದು ನಿಗಮದ ಮಂಗಳೂರು ಡಿಸಿ ಕೆಂಪನಂಜಯ್ಯ ತಿಳಿಸಿದರು.
ಘಾಟಿಯಲ್ಲಿ ಅವಘಡಗಳಾದಾಗ ಪೊಲೀಸ ರಿಗೆ ತಿಳಿಸಲು ಇಲ್ಲಿ ಮೊಬೈಲ್ ಸಿಗ್ನಲ್ ಇಲ್ಲದಿರು ವುದರಿಂದ ಇಲ್ಲೊಂದು ತಾತ್ಕಾಲಿಕ ಮೊಬೈಲ್ ಟವರ್‌ನ್ನು ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಮೂಡಿಗೆರೆ ಶಾಸಕ ಜಿ.ಬಿ.ನಿಂಗಯ್ಯ ತಿಳಿಸಿದರು.
ಚಿಕ್ಕಮಗಳೂರು ಎಡಿಷನಲ್ ಎಸ್ಪಿ ಡಾ.ಸಂಜೀವ ಪಾಟೀಲ್, ಮೂಡಿಗೆರೆ ತಹಶೀಲ್ದಾರ್ ಶಾರದಾಂಬ, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇ ಗೌಡ, ಬಂಟ್ವಾಳ ಎಎಸ್ಪಿ ರಾಹುಲ್ ಕುಮಾರ್, ಬೆಳ್ತಂಗಡಿ ತಹಶೀಲ್ದಾರ್ ಪುಟ್ಟಶೆಟ್ಟಿ, ಮಂಗಳೂರು ಆರ್‌ಟಿಒ ಶ್ರೀಧರ ನಾಯಕ್, ಪುತ್ತೂರು ಕೆಎಸ್ಸಾರ್ಟಿಸಿ ಡಿಸಿ ಸತೀಶ್ ಕುಮಾರ್, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ನಟರಾಜ್, ಹನೀಫ್, ಪ್ರಸನ್ನಕುಮಾರ್, ದ.ಕ.ವಾರ್ತಾಧಿಕಾರಿ ಖಾದರ್ ಶಾ ಉಪಸ್ಥಿತರಿದ್ದರು.
ಶಿರಾಡಿ ಘಾಟಿ ರಸ್ತೆಯನ್ನು ಉನ್ನತೀಕರಣ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಜ. 2 ರಿಂದ ಬಂದ್ ಮಾಡಲಾಗಿತ್ತು. ಇದರಿಂದ ಪರ್ಯಾಯ ರಸ್ತೆಯಾದ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ವಾಹನಗಳ ಒತ್ತಡ ಸತತ ಹೆಚ್ಚಾಗಿ ಎರಡು ಮೂರುದಿನಗಳ ಕಾಲ ಸಂಚಾರ ಅಸ್ತವ್ಯವಸ್ತಗೊಂಡು ಸಾರ್ವಜನಿಕರು ಪರದಾಡುವಂತಾಗಿದ್ದರು. ಇಬ್ಬರು ಸಚಿವರೂ ಬ್ಲಾಕ್‌ಗೆ ಸಿಲುಕಿಕೊಂಡಿದ್ದರು. ಇದೀಗ ಅಧಿಕಾರಿ ವರ್ಗ ಸಂಪೂರ್ಣ ಎಚ್ಚೆತ್ತುಕೊಂಡಿದ್ದು, ವಾಹನಗಳ ಸುಗಮ ಸಂಚಾರಕ್ಕೆ ಬೇಕಾದ ವ್ಯವಸ್ಥೆಗಳನ್ನು ಪೂರ್ಣಗೊಳಿಸುವತ್ತ ಸಾಗುತ್ತಿದೆ.
ಈಗಾಗಲೇ ಘಾಟಿಯ ಇಕ್ಕೆಲಗಳಲ್ಲಿ ಜೆಸಿಬಿ ಯಂತ್ರಗಳಿಂದ ಗುಡ್ಡವನ್ನು ಕಡಿದು ರಸ್ತೆಯನ್ನು ಅಗಲ ಮಾಡಲಾಗುತ್ತಿದೆ. ಇದು ಮುಂದಿನ ಮಳೆಗಾಲದಲ್ಲಿ ಮತ್ತಷ್ಟು ಕುಸಿದು ಅಪಾಯವನ್ನುಂಟು ಮಾಡಬಹುದು ಎಂದು ಅಂದಾಜಿಸಲಾಗಿದೆ.
ಶನಿವಾರ ಮಂತ್ರಿ, ಶಾಸಕರ, ವಿವಿಧ ಅಧಿಕಾರಿಗಳ ಗಡಣವೇ ಚಾರ್ಮಾಡಿಯ ತುತ್ತತುದಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಯಾವುದೇ ತೊಂದರೆಯಾಗದಂತೆ ಚಿಂತನೆ ನಡೆಸುತ್ತಿದ್ದರೆ ಬೆಳ್ತಂಗಡಿ ಶಾಸಕರು ಇದ್ಯಾವುದರ ಪರಿವೇಯೂ ಇಲ್ಲದಂತೆ ಇರುವುದು ಹುಬ್ಬೇರಿಸಿದೆ.