Uncategorized

ಗರಿಷ್ಠ ಪ್ರಮಾಣದಲ್ಲಿ ಮತ ಚಲಾಯಿಸಿ ಜಿಲ್ಲೆಯಲ್ಲಿ ದಾಖಲೆ ನಿರ್ಮಿಸಿ : ಡಾ| ದೇವದಾಸ್ ರೈ

Pinterest LinkedIn Tumblr

ಮಂಗಳೂರು ಎ. 24 : “ವಿಶ್ವದಲ್ಲಿ ಅತೀ ದೊಡ್ಡ ಸಾರ್ವತ್ರಿಕ ಚುನಾವಣೆ ಆದ ಭಾರತ ದೇಶದ ಲೋಕ ಚುನಾವಣೆಯ ಪರ್ವದಲ್ಲಿ ಪ್ರತಿಯೊಬ್ಬ ನಾಗರಿಕರು ಗರ್ವದಿಂದ ಮತದಾನದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವವನ್ನು ಸುದೃಢಗೊಳಿಸಲು ಪ್ರಯತ್ನಿಸಬೇಕು ಎಂದು ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ಸದಸ್ಯರಾದ ಡಾ| ದೇವದಾಸ ರೈ ಕರೆ ನೀಡಿದ್ದಾರೆ.

ಅವರು ತಾ.23.04.2024ರಂದು ನಗರದ ವುಡ್‌ಲ್ಯಾಂಡ್ ಸಭಾಂಗಣದಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್, ರೋರ‍್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಹಾಗೂ ಇನ್ನರ್‌ವೀಲ್ ಕ್ಲಬ್ ಮಂಗಳೂರು ನಾರ್ತ್ ಸಂಸ್ಥೆಗಳ ಆಶ್ರಯದಲ್ಲಿ ದ.ಕ. ಜಿಲ್ಲಾ ಸ್ವೀಪ್ ಸಮಿತಿಯ ಸಯೋಗದೊಂದಿಗೆ ಆಯೋಜಿಸಿದ “ಮತದಾನದ ಮಾಹಿತಿ, ಜಾಗೃತಿ ಅಭಿಯಾನ” ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.

ಮತದಾನ ದೇಶದ ಸಂವಿಧಾನ ನಾಗರಿಕರಿಗೆ ನೀಡಿದ ಹಕ್ಕು ಅದನ್ನು ಕಡ್ಡಾಯವಾಗಿ ಸ್ವಯಂಪ್ರೇರಿತರಾಗಿ ಯಾವುದೇ ಅಮಿಷಕ್ಕೆ ಒಳಪಡದೆ ನಿರ್ಭಿತಿಯಿಂದ ನಮ್ಮ ಕರ್ತವ್ಯವೆಂದು ಪರಿಗಣಿಸಿ ತಮ್ಮ ಅಮೂಲ್ಯ ಮತವನ್ನು ಚಲಾಯಿಸಬೇಕೆಂದು ಕೋರಿ 26.04.2024 ರಂದು ನಮ್ಮ ನಡೆ ಮತದಾನ ಕಟ್ಟೆಯ ಕಡೆ ಎಂದು ನುಡಿದರು.

ದ.ಕ. ಜಿಲ್ಲಾ ಸ್ವೀಪ್ ಪ್ರಚಾರ ಸಮಿತಿಯ ಸದಸ್ಯರು ಮತ್ತು ಜಿಲ್ಲಾ ವಯಸ್ಕರ ಶಿಕ್ಷಣಾ ಇಲಾಖೆಯ ಅಧಿಕಾರಿಯವರಾದ ಲೋಕೇಶ್‌ರವರು ಮತದಾನದ ಪ್ರತಿಜ್ಞಾ ವಿಧಿ ವಿಧಾನವನ್ನು ನೇರವೇರಿಸಿದರು. ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ಪ್ರಾಂಶುಪಾಲರಾದ ಶ್ರೀಮತಿ ಮಾಲಿನಿ ಹೆಬ್ಬಾರ್ ಗೌರವ ಅತಿಥಿಯಾಗಿ ಪಾಲ್ಗೊಂಡು ಮತದಾನದ ಮಾಹಿತಿ ಮತ್ತು ಜಾಗೃತಿಯನ್ನು ನೀಡಿ ನಾಗರಿಕರು ತಮ್ಮ ಬಂಧು ಮಿತ್ರರು, ನೆರೆಕರೆಯವರನ್ನು ಪ್ರೇರೆಪಿಸಿ ಮತದಾನದ ಕಟ್ಟೆಗೆ ಕೊಂಡುಹೋಗುವ ಜವಾಬ್ದಾರಿಯನ್ನು ವಹಿಸಬೇಕೆಂದು ಎಂದು ವಿನಂತಿಸಿದರು.

ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆಯಾದ ಶ್ರೀಮತಿ ಗೀತಾ ರೈ ಯವರು ಭಾರತೀಯ ಚುನಾವಣಾ ಆಯೋಗ ಮುದ್ರಿಸಿದ ಮತದಾನ ಜಾಗೃತಿ ಭಿತ್ತಿ ಪತ್ರವನ್ನು ಅನಾವರಣಗೊಳಿಸಿದರು. ರೋ| ನಾಗೇಂದ್ರರವರು ಮತದಾನದ ಮಹತ್ವದ ಅರಿವು ಮೂಡಿಸುವ ಹಾಡನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ರೋಟರಿ ಕ್ಲಬ್ ಮಂಗಳೂರು ಸಂಸ್ಥೆಯ ಅಧ್ಯಕ್ಷರಾದ ರೋ| ರಾಜೇಶ್ ಶೆಟ್ಟಿಯವರು ಸ್ವಾಗತಿಸಿದರು. ರೋರ‍್ಯಾಕ್ಟ್ ಮಂಗಳೂರು ಸಿಟಿಯ ಅಧ್ಯಕ್ಷರಾದ ರೋ| ಅರ್ಜುನ್ ಪ್ರಕಾಶ್‌ರವರು ವಂದಿಸಿದರು. ದ.ಕ. ಜಿಲ್ಲಾ ಸ್ವೀಪ್ ಪ್ರಚಾರ ಸಮಿತಿಯ ಸದಸ್ಯೆಯಾದ ಹಾಗೂ ಜಿಲ್ಲಾ ಹಿರಿಯ ಕಾರ್ಮಿಕ ನಿರೀಕ್ಷರಾದ ಶ್ರೀಮತಿ ಮೇರಿ ಫೆಡ್ರಿಕ್ ಡಾಯಸ್ ವೀಕ್ಷಕರಾಗಿ ಭಾಗವಹಿಸಿದರು.

Comments are closed.