Uncategorized

ಯಡಿಯೂರಪ್ಪರ 79ನೇ ಹುಟ್ಟುಹಬ್ಬ ಸಂಭ್ರಮಕ್ಕೆ ಶುಭಕೋರಿದ ಪ್ರಧಾನಿ ಮೋದಿ, ಸಿದ್ದರಾಮಯ್ಯ, ಕುಮಾರಸ್ವಾಮಿ

Pinterest LinkedIn Tumblr

ಬೆಂಗಳೂರು: ಇಂದು ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ 79ನೇ ಹುಟ್ಟುಹಬ್ಬ ಸಂಭ್ರಮ. ಹೀಗಾಗಿ ಬೆಳ್ಳಂಬೆಳಗ್ಗೆಯೇ ಸಿಎಂ ಬಿಎಸ್​ವೈ ಡಾಲರ್ಸ್​ ಕಾಲೋನಿಯಲ್ಲಿರುವ ರಾಧಾಕೃಷ್ಣ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಯಡಿಯೂರಪ್ಪ, ಎಲ್ಲರಿಗೂ ಒಳ್ಳೆಯದಾಗಲಿ, ಮೋದಿಯವರ ಸರ್ಕಾರದಲ್ಲಿ ಇನ್ನೂ ಒಳ್ಳೆಯ ಕೆಲಸಗಳಾಗಬೇಕು. ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು. ನಾಡಿಗೆ ಒಳ್ಳೆಯದೇ ಆಗಬೇಕು. ಮಳೆ ಬೆಳೆ ಆಗಿ ರೈತ ನೆಮ್ಮದಿಯಿಂದ ಇರುವಂತಹ ಕಾಲ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ. ಈ ಬಾರಿಯ ಬಜೆಟ್ ಚೆನ್ನಾಗಿರುತ್ತೆ, ಎಲ್ಲಾ ನಿರೀಕ್ಷೆ ಮೀರಿ ಒಳ್ಳೆಯ ಬಜೆಟ್ ಕೊಡ್ತೀನಿ. ಉಳಿದ ಎರಡು ವರ್ಷದ ಅವಧಿಯಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ರೈತರ ಕಲ್ಯಾಣ, ಜನ ನೆಮ್ಮದಿಯಿಂದ ಬಾಳಲು ಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸುವುದು ನನ್ನ ಗುರಿ ಎಂದು ಹೇಳಿದರು.

ಸಿಎಂ ಬಿಎಸ್ ವೈ ಹುಟ್ಟು ಹಬ್ಬ ಹಿನ್ನೆಲೆಯಲ್ಲಿ ನಿನ್ನೆಯೇ ಅವರ ಪುತ್ರ ಬಿ.ವೈ.ವಿಜಯೇಂದ್ರ, ಯಡಿಯೂರು ಸಿದ್ಧಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಂದಿದ್ದರು.

ಸಿಎಂ ಬಿ.ಎಸ್​.ಯಡಿಯೂರಪ್ಪನವರ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡುವ ಮೂಲಕ ಶುಭ ಕೋರಿದ್ದಾರೆ. ಯಡಿಯೂರಪ್ಪನವರು ಅನುಭವವುಳ್ಳ ರಾಜಕಾರಣಿ. ಬಡವರು, ರೈತರ ಪರವಾಗಿ ಜೀವನ ಮುಡಿಪಾಗಿಟ್ಟವರು ಎಂದು ಪ್ರಧಾನಿ ಮೋದಿ ಆಶಿಸಿದ್ದಾರೆ.

ಹಾಗೆಯೇ, ಸಿಎಂ ಬಿಎಸ್​ ಯಡಿಯೂರಪ್ಪನವರ ಹುಟ್ಟುಹಬ್ಬಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಎಚ್​. ಡಿ.ಕುಮಾರಸ್ವಾಮಿ ಶುಭ ಹಾರೈಸಿದ್ದಾರೆ. ರಾಜ್ಯದ ಮುಖ್ಯಮಂತ್ರಿ, ರಾಜಕೀಯ ಮುತ್ಸದ್ಧಿ ಶ್ರೀ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ರಾಜ್ಯದ ಜನರ, ರೈತ ಬಂಧುಗಳ, ದುರ್ಬಲರ ಆಶೋತ್ತರಗಳಿಗಾಗಿ ದುಡಿಯಲು ಭಗವಂತ ತಮಗೆ ಎಲ್ಲ ರೀತಿಯ ಶಕ್ತಿ ನೀಡಲಿ. ಆಯುರಾರೋಗ್ಯ ಕರುಣಿಸಲಿ ಎಂದು ನಾನು ಈ ಸಂದರ್ಭದಲ್ಲಿ ಆಶಿಸುತ್ತೇನೆ ಎಂದು ಟ್ವೀಟ್ ಮಾಡಿ ಆಶಿಸಿದ್ದಾರೆ.

ಸರ್ಕಾರದ ಮುಖ್ಯಕಾರ್ಯದರ್ಶಿ ಪಿ ರವಿಕುಮಾರ್ ಮತ್ತು ಗುಪ್ತಚರ ದಳದ ಎಡಿಜಿಪಿ ದಯಾನಂದ್ ಕೂಡ ಸಿಎಂ ಬಿಎಸ್​ವೈ ಜನ್ಮದಿನಕ್ಕೆ ಶುಭಕೋರಿದ್ದಾರೆ.

Comments are closed.