Uncategorized

37ರ ಯುವಕನಿಂದ 86ರ ಅಜ್ಜಿಯ ಮೇಲೆ ಅತ್ಯಾಚಾರ

Pinterest LinkedIn Tumblr

ದೆಹಲಿ: 86 ವರ್ಷದ ಅಜ್ಜಿಯ ಮೇಲೆ 37 ವರ್ಷದ ಯುವಕನೊಬ್ಬ ಅತ್ಯಾಚಾರವೆಸಗಿದ ಘಟನೆ ಇಲ್ಲಿನ ಚಾವ್ಲಾ ಪ್ರದೇಶದಲ್ಲಿ ನಡೆದಿರುವುದು ವರದಿಯಾಗಿದೆ.

ಮಂಗಳವಾರ ಈ ಕೃತ್ಯ ನಡೆದಿದ್ದು ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಸೋನು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸೋನು ಜೀವನಕ್ಕಾಗಿ ಪ್ಲಂಬರ್​ ಕೆಲಸ ಮಾಡಿಕೊಂಡಿದ್ದು, ರೆವ್ಲಾ ಖಾನ್​ಪುರ್​ನ ನಿವಾಸಿ ಎಂದು ಪೊಲೀಸ್​ ಮೂಲಗಳಿಂದ ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ಇಂತಾ ಹೇಯ ಕೃತ್ಯಗಳು ದೇಶಾದ್ಯಂತ ಪದೇ ಪದೇ ಕೇಳಿ ಬರುತ್ತಿದ್ದು, ಅದಕ್ಕೆ ಈ ಪ್ರಕರಣ ಮತ್ತೊಂದು ಜ್ವಲಂತ ಉದಾಹರಣೆ.

ಮಂಗಳವಾರ ವೃದ್ಧೆ ತಮ್ಮ ಹಳ್ಳಿಯಿಂದ ಪಕ್ಕದ ಹಳ್ಳಿಗೆ ಕೆಲಸ ನಿಮಿತ್ತ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಹೋಗುತ್ತಿರುವಾಗ ಆರೋಪಿ ಸೋನು ದಾರಿಯಲ್ಲಿ ಸಿಕ್ಕಿದ್ದು, ಬೈಕ್​ನಲ್ಲಿ ಡ್ರಾಪ್​ ನೀಡುವುದಾಗಿ ಕರೆದಿದ್ದಾನೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಇಂಡಿಯನ್​ ಎಕ್ಸ್​ಪ್ರೆಸ್​ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಆದರೆ ವೃದ್ಧೆ ತೆರಳಬೇಕಾದ ಜಾಗಕ್ಕೆ ಕರೆದೊಯ್ಯದೇ, ನಿರ್ಜನ ಸ್ಥಳಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ವೃದ್ಧೆ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

“ಭಾರತೀಯ ದಂಡ ಸಂಹಿತೆ 376ರ ಅಡಿ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದೇವೆ,” ಎಂದು ದ್ವಾರಕಾ ವಿಭಾಗದ ಉಪ ಪೊಲೀಸ್​ ಆಯುಕ್ತ ಸಂತೋಶ್​ ಕುಮಾರ್​ ಮೀನಾ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಮುಂದುವರೆದ ಅವರು, ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು, ಆಕೆಯ ಹೇಳಿಕೆಯನ್ನು ಸಂಪೂರ್ಣವಾಗಿ ದಾಖಲಿಸಲಾಗಿದೆ ಎಂದರು. ಘಟನೆಯ ನಂತರ ವೃದ್ಧೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎನ್ನಲಾಗಿದೆ.

ದೆಹಲಿ ಮಹಿಳಾ ಆಯೋಗ ಕೂಡ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಇದೊಂದು ಕಳವಳಕಾರಿ ಮತ್ತು ಅತ್ಯಂತ ಆತಂಕಕಾರಿ ಪ್ರಕರಣ ಎಂದು ಹೇಳಿದೆ. ಸಂತ್ರಸ್ತೆಯ ದೂರಿನ ಪ್ರಕಾರ, ಹಾಲು ಕೊಳ್ಳಲು ಅವರು ಹೋಗುತ್ತಿದ್ದಾಗ ಆರೋಪಿ ಸೋನು ಅವರನ್ನು ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.

ಆರೋಪಿ ಆಕೆಯನ್ನು ಒಂದು ನಿರ್ಜನ ತೋಟಕ್ಕೆ ಕರೆದೊಯ್ದು ಅಲ್ಲಿ ಅತ್ಯಾಚಾರ ಮಾಡಿದ್ದಾನೆ. ದೆಹಲಿ ಮಹಿಳಾ ಆಯೋಗದ ಪ್ರಕಟಣೆ ಪ್ರಕಾರ, ಸಂತ್ರಸ್ತೆ ತಾನು ನಿನ್ನ ಅಜ್ಜಿಯ ವಯಸ್ಸಿನವರು ಬಿಟ್ಟು ಬಿಡು ಎಂದು ಪರಿಪರಿಯಾಗಿ ಬೇಡಿಕೊಂಡರೂ ಆರೋಪಿ ಹೇಯಕೃತ್ಯ ಎಸಗಿದ್ದಾನೆ.

ಸಂತ್ರಸ್ತ ಅಜ್ಜಿಯ ಕೂಗನ್ನು ಕೇಳಿದ ಸುತ್ತಮುತ್ತಲ ಜನ ಓಡಿಬಂದು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Comments are closed.