
ಹೊಸದಿಲ್ಲಿ: ವರ್ಷದ ಹಿಂದೆ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಯುವರಾಜ್ ಸಿಂಗ್, ಅದನ್ನು ವಾಪಸ್ ಪಡೆದು ಪಂಜಾಬ್ ತಂಡದ ಪರ ಆಡಲು ನಿರ್ಧರಿಸಿರುವುದಾಗಿ ಮೂಲಗಳು ಹೇಳಿವೆ.
ಕೊರೊನಾ ವೈರಸ್ನಿಂದ ಕಳೆದ ಮಾರ್ಚ್ ತಿಂಗಳಿನಿಂದ ಭಾರತದಲ್ಲಿ ಕ್ರಿಕೆಟ್ ಚಟುವಟಿಕೆಗಳು ನಿಲ್ಲಿಸಲಾಗಿದೆ. ಆದರೆ, ಕಳೆದ ಹಲವು ತಿಂಗಳುಗಳಿಂದ ಶುಭಮನ್ ಗಿಲ್, ಅಭಿಷೇಕ್ ವರ್ಮಾ, ಅನ್ಮೋಲ್ಪ್ರೀತ್ ಸಿಂಗ್ ಅವರೊಂದಿಗೆ ಯುವರಾಜ್ ಸಿಂಗ್ ಪಿಸಿಎ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದರು.
ಅಭ್ಯಾಸದ ಅವಧಿಯಲ್ಲಿ ಯುವರಾಜ್ ಸಿಂಗ್ ಕ್ರಿಕೆಟ್ ಮೇಲಿನ ಉತ್ಸಾಹವನ್ನು ಪುನಃ ಪಡೆದಿದ್ದಾರೆ ಹಾಗೂ ಟಿ-20 ಟೂರ್ನಿಯಲ್ಲಿ ಪಂಜಾಬ್ ಪರ ಆಡುವ ಮೂಲಕ ಯುವ ಆಟಗಾರರ ಬೆಳವಣಿಗೆಗೆ ಸಹಾಯ ಮಾಡಲು ಬಯಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
“ಈ ಯುವ ಆಟಗಾರರ ಜತೆ ಸಮಯ ಕಳೆದಿದ್ದು ತುಂಬಾ ಸಂತೋಷ ತಂದಿದೆ. ಕ್ರಿಕೆಟ್ ಬಗ್ಗೆ ನಾನು ಹೇಳಿರುವ ಹಲವು ವಿಷಯಗಳನ್ನು ಅಳವಡಿಸಿಕೊಳ್ಳಲು ಅವರು ಸಮರ್ಥವಾಗಿದ್ದಾರೆಂಬ ಬಗ್ಗೆ ನನಗೆ ಅರಿವಾಗಿದೆ,” ಎಂದು ಕ್ರಿಕ್ಬಜ್ಗೆ ತಿಳಿಸಿದ ಯುವರಾಜ್ ಸಿಂಗ್, “ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಅವರಿಗೆ ತುಂಬಾ ಸಂಗತಿಗಳನ್ನು ತಿಳಿಸಿದ್ದೇನೆ. ಬಹಳ ಸಮಯದವರೆಗೆ ಬ್ಯಾಟ್ ಹಿಡಿದಿಲ್ಲದಿದ್ದರೂ ನಾನು ಚೆಂಡನ್ನು ಎಷ್ಟು ಚೆನ್ನಾಗಿ ಹೊಡೆಯುತ್ತಿದ್ದೇನೆ ಎಂದು ನನಗೆ ಆಶ್ಚರ್ಯವಾಯಿತು,” ಎಂದು ಹೇಳಿದರು.
“ಯಾವುದೇ ಅವಕಾಶಗಳು ಬಂದರೂ ಅವುಗಳನ್ನು ಸ್ವೀಕರಿಸುತ್ತೇನೆಂಬ ಬಗ್ಗೆ ನನಗೆ ಸ್ಪಷ್ಟತೆಯಿಲ್ಲ. ಈಗಾಗಲೇ ದೇಶಿ ಕ್ರಿಕೆಟ್ ಆಡಿದ್ದೇನೆ, ಬಿಸಿಸಿಐ ನನಗೆ ಒಪ್ಪಿಗೆ ನೀಡಿದರೆ, ಪಂಜಾಬ್ ಪರ ಆಡುತ್ತೇನೆ. ಇದರ ನಡುವೆ ಮಿಸ್ಟರ್ ಬಲಿ ಅವರ ಮನವಿಯನ್ನು ಮರೆಯುವುದಿಲ್ಲ. ಕಳೆದ ಮೂರು ಅಥವಾ ನಾಲ್ಕು ವಾರಗಳಿಂದ ನನ್ನ ಮನಸ್ಸಿನಲ್ಲಿರುವ ವಿಷಯಗಳನ್ನು ತಿಳಿಸಿದ್ದೇನೆ. ಹಾಗಾಗಿ ಕೊನೆಯಲ್ಲಿ ನಾನು ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿಲ್ಲ,” ಎಂದು ಹೇಳಿದರು.
“ನಾವು ಹಲವು ಟೂರ್ನಿಗಳನ್ನು ಗೆದ್ದಿದ್ದೇವೆ. ಆದರೆ ನಾವಿಬ್ಬರೂ ಜತೆಯಾಗಿ ಪಂಜಾಬ್ ತಂಡವನ್ನು ಒಮ್ಮೆಯೂ ಚಾಂಪಿಯನ್ಶಿಪ್ ಮಾಡಲಾಗಲಿಲ್ಲ. ಈ ಅಂಶ ನನ್ನ ಅಂತಿಮ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸಬಹುದು,” ಎಂದು ಯುವರಾಜ್ ಸಿಂಗ್ ತಿಳಿಸಿದ್ದಾರೆ.
Comments are closed.