ಜೌನ್ಪುರ(ಉತ್ತರಪ್ರದೇಶ): ಸಂವಿಧಾನ ಶಿಲ್ಪಿ ಡಾ. ಭೀಮಾರಾವ್ ಅಂಬೇಡ್ಕರ್ ಅವರ ಮತ್ತೊಂದು ಪ್ರತಿಮೆಯನ್ನು ಉತ್ತರಪ್ರದೇಶದಲ್ಲಿ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ದೇಶಾದ್ಯಂತ ಅನೇಕ ಪ್ರತಿಮೆಗಳು ಹಾನಿಗೀಡಾಗುತ್ತಿರುವ ವಿವಾದದ ಬೆನ್ನಲ್ಲೇ ಇದೀಗ ಮತ್ತೊಮ್ಮೆ ಜೋನ್ಪುರ ಜಿಲ್ಲೆಯ ಗಜ್ನಾ ಗ್ರಾಮದಲ್ಲಿದ್ದ ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಾರೆ.
ಕಳೆದ ವಾರ ಏ. 6ರಂದು ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಅಂಬೇಡ್ಕರ್ ಪ್ರತಿಮೆಗೆ ಹಾನಿಮಾಡಲಾಗಿತ್ತು. ಮತ್ತೊಂದು ಬೆಳವಣಿಗೆಯಲ್ಲಿ ಸತ್ನಾ ಸಿವಿಲ್ ಲೈನ್ಸ್ ಪ್ರದೇಶದಲ್ಲಿನ ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು.
ಕಳೆದ ಒಂದು ತಿಂಗಳಿಂದ ಅಲಹಾಬಾದ್, ಸಿದ್ಧಾರ್ಥ್ ನಗರ, ಬದುವಾನ್ ಸೇರಿದಂತೆ ಉತ್ತರ ಪ್ರದೇಶದ ಹಲವು ಕಡೆ ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.
ನಾಳೆ ದೇಶಾದ್ಯಂತ ಅಂಬೇಡ್ಕರ್ ಅವರ 127ನೇ ಜಯಂತಿ ಆಚರಿಸಲಾಗುತ್ತಿದ್ದು, ಪ್ರತಿಮೆ ಹಾನಿಗೊಳಿಸುವ ಯತ್ನ ತಡೆಯಲು ಪೊಲೀಸರು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ.
ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಸಾಧಿಸಿದ ಬಳಿಕ ರಷ್ಯಾದ ಕಮ್ಯುನಿಸ್ಟ್ ನಾಯಕ ವ್ಲಾಡಿಮಿರ್ ಲೆನಿನ್ ಪ್ರತಿಮೆಯನ್ನು ಧ್ವಂಸಗೊಳಿಸಿದ ಬಳಿಕ ದೇಶಾದ್ಯಂತ ಹಲವು ಕಡೆ ಪ್ರತಿಮೆ ಧ್ವಂಸಕ್ಕೆ ಮುನ್ನುಡಿ ಬರೆದಿತ್ತು.
Comments are closed.