Uncategorized

ಭಾರತದ ಮೇಲೆ ರಾಸಾಯನಿಕ ದಾಳಿ ನಡೆಸಲು ಇಸಿಸ್ ಸಂಚು; ಗೃಹ ಇಲಾಖೆ ಎಚ್ಚರಿಕೆ

Pinterest LinkedIn Tumblr


ನವದೆಹಲಿ: ಭಾರತದ ಮೇಲೆ ರಾಸಾಯನಿಕ ದಾಳಿ ನಡೆಸಲು ಕುಖ್ಯಾತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಸಂಚು ರೂಪಿಸಿದೆ ಎಂದು ಕೇಂದ್ರ ಗೃಹ ಇಲಾಖೆ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಎಲ್ಲ ರಾಜ್ಯ ಸರ್ಕಾರಗಳಿಗೂ ಸೂಚನೆ ನೀಡಿರುವ ಕೇಂದ್ರ ಸರ್ಕಾರ ತೀವ್ರ ಕಟ್ಟೆಚ್ಚರದಿಂದ ಇರುವಂತೆ ಸಲಹೆ ನೀಡಿದೆ. ಕೇಂದ್ರ ಗುಪ್ತಚರ ಇಲಾಖೆ ಮೂಲಗಳ ಪ್ರಕಾರ ಗುಜಾರಾತ್ ಮೂಲದ ಸಂಸ್ಥೆಯೊಂದು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊಂದಿಗೆ ಸೇರಿದ್ದು, ಇದೇ ಸಂಸ್ಥೆ ರಾಸಾಯನಿಕ ದಾಳಿ ನಡೆಸಲು ಮುಂದಾಗಿದೆ. ಇದಕ್ಕಾಗಿ ಟರ್ಕಿ ಮೂಲದ ಉದ್ಯಮಿ ಅಥವಾ ಮಧ್ಯವರ್ತಿ ಅಪಾಯಕಾರಿ ರಾಸಾಯನಿಕಳನ್ನು ಖರೀದಿ ಮಾಡಿದ್ದು. ವ್ಯವಹಾರ ಹೆಸರಿನಲ್ಲಿ ಅವುಗಳನ್ನು ಗುಜರಾತ್ ಮೂಲದ ಸಂಸ್ಥೆಗೆ ರಫ್ತು ಮಾಡಲಿದ್ದಾನೆ ಎಂದು ತಿಳಿದುಬಂದಿದೆ.

ವರದಿಗಳ ಅನ್ವಯ ಈ ಮಧ್ಯವರ್ತಿಯ ಹೆಸರು ಮಹಮದ್ ಯಾಸಿರ್ ಅಲ್ ಶುಮಾ ಎಂದು ತಿಳಿದುಬಂದಿದ್ದು, ಥಾಲಿಯಮ್ ಸಲ್ಫೇಟ್ ಎಂಬ ವಿಷಕಾರಿ ಮತ್ತು ಅಪಾಯಕಾರಿ ರಾಸಾಯನಿಕವನ್ನು ಈತ ಖರೀದಿ ಮಾಡಿದ್ದಾನೆ ಎನ್ನಲಾಗಿದೆ. ಸಾಮಾನ್ಯವಾಗಿ ಈ ಥಾಲಿಯಮ್ ಸಲ್ಫೇಟ್ ಅನ್ನು ಲ್ಯಾಬೋರೇಟರಿಗಳಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಇದನ್ನೇ ಭಾರತದಲ್ಲಿ ಕುಡಿಯುವ ನೀರು, ಆಹಾರ ಪದಾರ್ಥಗಳು ಮತ್ತು ಇತರೆ ವಸ್ತುಗಳಲ್ಲಿ ಮಿಶ್ರಣ ಮಾಡಿ ಸಾವುನೋವಿಗೆ ಕಾರಣವಾಗುದು ಈ ದಾಳಿ ಪ್ರಮುಖ ಗುರಿಯಾಗಿದೆ ಎಂದು ಹೇಳಲಾಗಿದೆ.

ಹೀಗಾಗಿ ಕೇಂದ್ರ ಸರ್ಕಾರ ದೇಶದ ಯಾವುದೇ ಲ್ಯಾಬೋರೇಟರಿ ಅಥವಾ ಯಾವುದೇ ಸಂಸ್ಥೆ ದೊಡ್ಡ ಪ್ರಮಾಣದಲ್ಲಿ ಈ ಥಾಲಿಯಮ್ ಸಲ್ಫೇಟ್ ರಾಸಾಯನಿಕವನ್ನು ಖರೀದಿ ಮಾಡಿದರೆ ಅಥವಾ ರಾಸಾಯನಿಕಕ್ಕಾಗಿ ಬೇಡಿಕೆ ಇಟ್ಟರೆ ಆ ಸಂಸ್ಥೆಗಳ ವಿರುದ್ಧ ಕಣ್ಣಿಟ್ಟಿರುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಥಾಲಿಯಮ್ ಸಲ್ಫೇಟ್ ಅತ್ಯಂತ ವಿಷಕಾರ ರಾಸಾಯನಿಕವಾಗಿದ್ದು, ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಇದನ್ನು ನಿಷೇಧಿಸಲಾಗಿದೆ. 1950 ರಲ್ಲಿ ಇಸ್ರೇಲ್ ತೀವ್ರವಾದಿಗಳು ಅಲ್ಲಿನ ಜನಸಂಖ್ಯೆ ನಿಯಂತ್ರಣಕ್ಕಾಗಿ ಈ ಅಪಾಯಕಾರಿ ರಾಸಾಯನಿಕವನ್ನು ಸಿಂಪಡಿಸಿ ಅಪಾರ ಪ್ರಮಾಣದ ಸಾವಿಗೆ ಕಾರಣವಾಗಿದ್ದರು. 500ಎಂಜಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಈ ರಾಸಾಯನಿಕ ಮಾನವನ ದೇಹ ಸೇರಿದರೆ ಅಪಾಯಕಟ್ಟಿಟ್ಟ ಬುತ್ತಿ ಎಂದು ವೈದ್ಯರು ತಿಳಿಸಿದ್ದಾರೆ. ಥಾಲಿಯಮ್ ಸಲ್ಫೇಟ್ ಮಾನವನ ರಕ್ತದೊಳಗೆ ಸೇರುತ್ತಿದ್ದಂತೆಯೇ ಕಿಡ್ನಿ, ಲಿವರ್, ಮೆದುಳಿನ ಕಾರ್ಯ ನಿರ್ವಹಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

Comments are closed.