Uncategorized

ಕಾಂಗ್ರೆಸ್‌ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದ ಮೊಯಿಲಿ ಟ್ವೀಟ್‌: ಟಿಕೆಟ್‌ಗಾಗಿ ನಾಯಕರ ಜಟಾಪಟಿ; ಟ್ವೀಟ್‌ ತಾನು ಮಾಡಿಲ್ಲ ಎಂದ ಮೊಯಿಲಿ

Pinterest LinkedIn Tumblr

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲು ಬುಧವಾರ ಸೇರಿದ್ದ ಕಾಂಗ್ರೆಸ್‌ ಚುನಾವಣಾ ಸಮಿತಿ ಸಭೆಯಲ್ಲಿ ನಡೆದ ನಾಯಕರ ನಡುವಿನ ಜಟಾಪಟಿ ಗಂಭೀರ ಸ್ವರೂಪ ಪಡೆದುಕೊಂಡಿದೆ. ಈ ಸಂಬಂಧ ಹಿರಿಯ ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ ಗುರುವಾರ ರಾತ್ರಿ ಮಾಡಿದ್ದರೆನ್ನಲಾದ ಟ್ವೀಟ್‌ನಿಂದ ಹೈಕಮಾಂಡ್‌ ತೀವ್ರ ಇಕ್ಕಟ್ಟಿಗೆ ಸಿಲುಕಿದೆ.

ನಾಯಕರ ನಡುವಿನ ಕಿತ್ತಾಟದಿಂದ ಪಕ್ಷಕ್ಕೆ ಆಗುವ ಹಾನಿ ತಪ್ಪಿಸಲು ಹೈಕಮಾಂಡ್‌ ಮಧ್ಯಪ್ರವೇಶಿಸಿದ್ದು, ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ವರಿಷ್ಢರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಯಾರೂ ಬಹಿರಂಗವಾಗಿ ಕಿತ್ತಾಡಬಾರದು ಎಂಬ ಎಚ್ಚರಿಕೆಯನ್ನು ನಾಯಕರಿಗೆ ರವಾನಿಸಿದೆ ಎಂದು ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

‘ನಾನು ಟ್ವೀಟ್ ಮಾಡಿಲ್ಲ. ನನ್ನ ಟ್ವಿಟ್ಟರ್‌ ಖಾತೆ ಹ್ಯಾಕ್‌ ಆಗಿರಬಹುದು’ ಎಂದು ಮೊಯಿಲಿ ದೆಹಲಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ದೇವನಹಳ್ಳಿ ಸಮೀಪದ ರೆಸಾರ್ಟ್‌ನಲ್ಲಿ ಬುಧವಾರ ನಡೆದ ಚುನಾವಣಾ ಸಮಿತಿಯಲ್ಲಿ ಒಂದೊಂದೇ ಕ್ಷೇತ್ರಗಳನ್ನು ಎತ್ತಿಕೊಂಡು ಚರ್ಚೆ ನಡೆಸಲಾಯಿತು. ಕೆಲವು ಕ್ಷೇತ್ರಗಳ ಹೆಸರು ಪ್ರಸ್ತಾಪವಾದಾಗ ನಾಯಕರು ತಮಗೆ ಬೇಕಾದ ಹೆಸರುಗಳನ್ನು ತುರುಕಲು ಪ್ರಯತ್ನಿಸಿದರು. ಇದು ಕಿತ್ತಾಟಕ್ಕೆ ಕಾರಣವಾಯಿತು.

ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆಯ ಕ್ಷೇತ್ರಗಳ ಹೆಸರು ಬಂದಾಗ ಪ್ರಣಾಳಿಕೆ ಸಮಿತಿ ಅಧ್ಯಕ್ಷರೂ ಆಗಿರುವ ವೀರಪ್ಪ ಮೊಯಿಲಿ ಹಾಗೂ ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಅವರ ನಡುವೆ ಭಾರಿ ಜಟಾಪಟಿ ನಡೆಯಿತು. ದೇವನಹಳ್ಳಿ, ಮಹದೇವಪುರ, ನೆಲಮಂಗಲ, ಸಿ.ವಿ. ರಾಮನ್‌ ನಗರ, ಪುಲಕೇಶಿ ನಗರ, ಉಡುಪಿ ಜಿಲ್ಲೆಯ ಕಾರ್ಕಳ ಕ್ಷೇತ್ರಗಳಿಗೆ ಮಹದೇವಪ್ಪ ಕೆಲವೊಂದು ಹೆಸರು ಹೇಳಿದ್ದರಿಂದ ಮೊಯಿಲಿ ಸಿಟ್ಟು ನೆತ್ತಿಗೇರಿತು.

ದೇವನಹಳ್ಳಿ ಕ್ಷೇತ್ರಕ್ಕೆ ವೆಂಕಟಸ್ವಾಮಿ ಹೆಸರನ್ನು ಮೊಯಿಲಿ ಹೇಳಿದರು. ಕೆಲವರು ನಲ್ಲೂರಳ್ಳಿ ನಾಗೇಶ್‌ ಹೆಸರನ್ನು ಸೂಚಿಸಿದರು. ಅದಕ್ಕೆ ಮೊಯಿಲಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಪರಮೇಶ್ವರ ವಿರೋಧ ವ್ಯಕ್ತಪಡಿಸಿದರು. ಆಗ ಮಧ್ಯಪ್ರವೇಶಿಸಿದ ಲೋಕೋಪಯೋಗಿ ಸಚಿವರು ಪಕ್ಷ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಡಬೇಕಾಗುತ್ತದೆ. ಯಾರ‍್ಯಾರಿಗೊ ಟಿಕೆಟ್‌ ಕೊಟ್ಟರೆ ಪಕ್ಷ ಸೋಲು ಅನುಭವಿಸಬೇಕಾಗುತ್ತದೆ ಎಂಬ ಅಭಿಪ್ರಾಯ
ವ್ಯಕ್ತಪಡಿಸಿದರು.

ದೇವನಹಳ್ಳಿ ಕ್ಷೇತ್ರಕ್ಕೆ ವೆಂಕಟಸ್ವಾಮಿ ಹೆಸರನ್ನು ಮೊಯಿಲಿ ಹೇಳಿದರು. ಕೆಲವರು ನಲ್ಲೂರಳ್ಳಿ ನಾಗೇಶ್‌ ಹೆಸರನ್ನು ಸೂಚಿಸಿದರು. ಅದಕ್ಕೆ ಮೊಯಿಲಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ಪರಮೇಶ್ವರ ವಿರೋಧ ವ್ಯಕ್ತಪಡಿಸಿದರು. ಆಗ ಮಧ್ಯಪ್ರವೇಶಿಸಿದ ಲೋಕೋಪಯೋಗಿ ಸಚಿವರು ಪಕ್ಷ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್‌ ಕೊಡಬೇಕಾಗುತ್ತದೆ. ಯಾರ‍್ಯಾರಿಗೊ ಟಿಕೆಟ್‌ ಕೊಟ್ಟರೆ ಪಕ್ಷ ಸೋಲು ಅನುಭವಿಸಬೇಕಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಅದೇ ರೀತಿ ಮಹದೇವಪುರಕ್ಕೆ ಕಳೆದ ಚುನಾವಣೆಯಲ್ಲಿ ಸೋತಿದ್ದ ಎ.ಸಿ. ಶ್ರೀನಿವಾಸ್‌ ಹೆಸರನ್ನು ಮೊಯಿಲಿ ಪ್ರಸ್ತಾಪಿಸಿದರು. ಚಲವಾದಿ ನಾರಾಯಣಸ್ವಾಮಿ ಹೆಸರನ್ನು ಮಹದೇವಪ್ಪ ಹೇಳಿದರು. ಕಾರ್ಕಳದ ವಿಷಯ ಬಂದಾಗ ಉದ್ಯಮಿ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಮುನಿಯಾಲು ಉದಯಕುಮಾರ್‌ ಶೆಟ್ಟಿ ಹೆಸರನ್ನು ಸಚಿವರು ಹೇಳಿದರು. ಆದರೆ, ತಮ್ಮ ಪುತ್ರ ಹರ್ಷ ಮೊಯಿಲಿಗೆ ಟಿಕೆಟ್‌ ಕೊಡಿಸಲು ಮೊಯಿಲಿ ಪ್ರಯತ್ನಿಸುತ್ತಿದ್ದಾರೆ. ಇದರಿಂದಾಗಿ ಇಬ್ಬರು ಜಟಾಪಟಿಗಿಳಿದರು. ಕೆಲಕಾಲ ಆರೋಪ– ಪ್ರತ್ಯಾರೋಪ ವಿನಿಮಯವಾಯಿತು.

‘ನನ್ನ ಲೋಕಸಭಾ ಕ್ಷೇತ್ರದ ಬಗ್ಗೆ ಮಾತನಾಡಲು ನಿಮಗೇನು ಹಕ್ಕಿದೆ. ನಾನು ಮೈಸೂರು ಅಥವಾ ಚಾಮರಾಜನಗರ ಜಿಲ್ಲೆಯ ವಿಷಯದಲ್ಲಿ ಹಸ್ತಕ್ಷೇಪ ಮಾಡಿದ್ದೇನಾ’ ಎಂದು ಮೊಯಿಲಿ ಪ್ರಶ್ನಿಸಿದರು. ನಾಗೇಶ್‌ ಕಳೆದ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಉಚ್ಚಾಟನೆ ಆಗಿದ್ದವರು ಎಂದು ಮೊಯಿಲಿ ಕೂಗಾಡಿದರು. ಅದಕ್ಕೆ ಪರಮೇಶ್ವರ್‌ ಅವರೂ ದನಿಗೂಡಿಸಿದರು.

‘ಉದಯ್‌ ಕುಮಾರ್‌ ಶೆಟ್ಟಿ ಅವರಿಗೆ ಟಿಕೆಟ್‌ ಕೊಟ್ಟರೆ ಗೆಲುವು ಖಚಿತ. ಬೇರೆ ಯಾರಿಗೂ ಅಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ಪಕ್ಷ ನಡೆಸಿರುವ ಸಮೀಕ್ಷೆಗಳು ಹೇಳಿವೆ. ಈ ಕಾರಣಕ್ಕೆ ಅವರ ಹೆಸರನ್ನು ಹೇಳಿದ್ದೇನೆ. ನಿಮಗೆ ಬೇಕಾದ ಹೆಸರುಗಳನ್ನು ಸೂಚಿಸುವುದಾದರೆ ಚುನಾವಣಾ ಸಮಿತಿ ಏಕೆ ಬೇಕು’ ಎಂದು ಅಷ್ಟೇ ಸಿಡುಕಿನಿಂದ ಸಚಿವರು ಕೇಳಿದರು. ಇಬ್ಬರ ನಡುವೆ ವಾಗ್ವಾದ ನಡೆದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸಭೆಯಲ್ಲಿ ಇರಲಿಲ್ಲ.

ಒಂದು ಹಂತದಲ್ಲಿ ಮಹದೇವಪ್ಪ ಅರ್ಧದಲ್ಲೇ ಸಭೆ ಬಿಟ್ಟು ಹೊರಹೋಗಲು ಎದ್ದಾಗ, ನಾಲ್ವರು ಉಸ್ತುವಾರಿ ಕಾರ್ಯದರ್ಶಿಗಳು ಮತ್ತಿತರ ನಾಯಕರು ಅವರನ್ನು ತಡೆದರು. ಸಮಾಧಾನಪಡಿಸಿ ಕೂರಿಸಿದರು. ಬೇರೆ ಕ್ಷೇತ್ರಗಳ ವಿಷಯದಲ್ಲೂ ಬೇರೆ ಬೇರೆ ನಾಯಕರು ತಮಗೆ ಬೇಕಾದವರ ಹೆಸರುಗಳನ್ನು ಸೇರಿಸಲು ಪ್ರಯತ್ನಿಸಿದ್ದರಿಂದಾಗಿ ಆಗಾಗ್ಗೆ ಕಾವೇರಿದ ಚರ್ಚೆಗಳಿಗೆ ಸಭೆ ಸಾಕ್ಷಿಯಾಯಿತು.

ಬಿಸಿ ಬಿಸಿ ಚರ್ಚೆಗೆ ಕಾರಣವಾದ ಟ್ವೀಟ್‌

ಬೆಂಗಳೂರು: ಕಾಂಗ್ರೆಸ್‌ ಹಿರಿಯ ನಾಯಕ, ಸಂಸದ ವೀರಪ್ಪ ಮೊಯಿಲಿ ಪಕ್ಷದ ಟಿಕೆಟ್‌ ಹಂಚಿಕೆಗೆ ಸಂಬಂಧಿಸಿ ಗುರುವಾರ ರಾತ್ರಿ ಮಾಡಿದ್ದರೆನ್ನಲಾದ ಟ್ವೀಟ್ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ರಾತ್ರಿ 10 ಗಂಟೆ ಸುಮಾರಿಗೆ ಮೊಯಿಲಿ ಮಾಡಿದ ಟ್ವೀಟ್‌ ಪುತ್ರ ಹರ್ಷ ಮೊಯಿಲಿ ಅವರ ಟ್ವಿಟರ್ ಖಾತೆಯಲ್ಲೂ ಪ್ರಕಟವಾಗಿತ್ತು. ಇದಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾದ್ದರಿಂದ ಆನಂತರ ಇಬ್ಬರ ಖಾತೆಯಿಂದಲೂ ಟ್ವೀಟ್‌ ಅನ್ನು ಅಳಿಸಿಹಾಕಲಾಯಿತು.

‘ಹಣದ ರಾಜಕೀಯಕ್ಕೆ ಕಾಂಗ್ರೆಸ್‌ ಕಡಿವಾಣ ಹಾಕಬೇಕಿದೆ. ರಸ್ತೆ ಗುತ್ತಿಗೆದಾರರು ಮತ್ತು ಅವರ ಜತೆ ಸಂಬಂಧ ಹೊಂದಿರುವ ಪಿಡಬ್ಲ್ಯುಡಿ ಸಚಿವರು ಮುಂಬರುವ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳನ್ನು ನಿರ್ಧರಿಸಲಾಗದು’ ಎಂದು ಮೊಯಿಲಿ ಟ್ವೀಟ್ ಮಾಡಿದ್ದರು.

ವೇಣುಗೋಪಾಲ್‌ಗೆ ದೂರು

ಬೆಂಗಳೂರು: ಮೊಯಿಲಿ ವರ್ತನೆ ವಿರುದ್ಧ ಸಚಿವ ಮಹದೇವಪ್ಪ ವೇಣುಗೋಪಾಲ್‌ಗೆ ಶುಕ್ರವಾರ ಬೆಳಿಗ್ಗೆ ದೂರವಾಣಿ ಕರೆ ಮಾಡಿ ದೂರು ನೀಡಿದ್ದಾರೆ. ‘ಟಿಕೆಟ್‌ ಹಂಚಿಕೆ ವಿಷಯವನ್ನು ವಿವಾದ ಮಾಡುವುದು ಬೇಡ. ನಾನು ಮೊಯಿಲಿ ಜೊತೆ ಮಾತನಾಡುತ್ತೇನೆ’ ಎಂದು ವೇಣುಗೋಪಾಲ್‌ ಸಚಿವರಿಗೆ ಹೇಳಿದ್ದಾರೆಂದೂ ಮೂಲಗಳು ತಿಳಿಸಿವೆ.

ಇದು ಬಿಜೆಪಿ ಕೈವಾಡ: ‘ಕಾಂಗ್ರೆಸ್ ಟಿಕೆಟ್ ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಮೊಯಿಲಿ ಮಾಡಿದ್ದಾರೆ ಎನ್ನಲಾದ ಟ್ವೀಟ್‌ ಕುರಿತು ಬಿಜೆಪಿ ಮುಖಂಡರು ತ್ವರಿತ ಹೇಳಿಕೆ ನೀಡಿರುವುದನ್ನು ಗಮನಿಸಿದರೆ ಬಿಜೆಪಿಯವರದ್ದೇ ಕೈವಾಡ ಇದ್ದಂತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಆರೋಪಿಸಿದರು.

ಮೊಯಿಲಿ ಸತ್ಯ ಹೇಳಿದ್ದಾರೆ: ದೇವೇಗೌಡ

ಹಾಸನ: ‘ಸಂಸದ ವೀರಪ್ಪ ಮೊಯಿಲಿ ಅವರು ನೀಡಿರುವ ಹೇಳಿಕೆ ಸತ್ಯ, ಅದರಲ್ಲಿ ಯಾವುದೇ ಅನುಮಾನ ಇಲ್ಲ’ ಎಂದು ಸಂಸದ ಎಚ್.ಡಿ.ದೇವೇಗೌಡ ಇಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದರು.

‘ಮೊಯಿಲಿ ಅವರು ಮಾಜಿ ಮುಖ್ಯಮಂತ್ರಿ, ಹಾಲಿ ಸಂಸದ. ಕಾಂಗ್ರೆಸ್ ಪಕ್ಷದಲ್ಲಿರುವ ಭ್ರಷ್ಟಾಚಾರದ ಬಗ್ಗೆ ಅವರಿಗಿಂತ ನಾನು ಹೇಳಬೇಕೇ? ನಾನು ಮಾತನಾಡಿದರೆ ರಾಜಕೀಯ ಎನ್ನುತ್ತಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಾಂಗ್ರೆಸ್‌ಗೆ ಅಶೋಕ್ ಖೇಣಿ ಸೇರ್ಪಡೆ ಉಲ್ಲೇಖಿಸಿದ ಅವರು ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಸೇರಿ ಹಲವರ ಪಾತ್ರ ಇದೆ ಎಂದು ಆರೋಪಿಸಿದರು. ‘ನೈಸ್‌ ಹೆದ್ದಾರಿ ಯೋಜನೆಯಲ್ಲಿ ₹ 30 ಸಾವಿರ ಕೋಟಿ ವಂಚನೆ ಕುರಿತು ಖೇಣಿ ವಿರುದ್ಧ ಕ್ರಮಕೈಗೊಳ್ಳಲಾಗು
ವುದು ಎಂದು ಸಿದ್ದರಾಮಯ್ಯ ಹೇಳಿದ್ದರು. ಈಗ ಪಕ್ಷಕ್ಕೆ ಸೇರಿಸಿಕೊಂಡು ನಮ್ಮದು ಭ್ರಷ್ಟರಹಿತ ಸರ್ಕಾರ ಎಂದರೆ ಜನರು ಒಪ್ಪುತ್ತಾರಾ’ ಎಂದು ಪ್ರಶ್ನಿಸಿದರು.

Comments are closed.