ಕರ್ನಾಟಕ

ಯಡಿಯೂರಪ್ಪ ‘ಬ್ರೇಕಿಂಗ್‌ ನ್ಯೂಸ್‌’ ಠುಸ್!

Pinterest LinkedIn Tumblr

ಬೆಂಗಳೂರು: ಶುಕ್ರವಾರ ಸಂಜೆ 5ಗಂಟೆಗೆ ಬ್ರೇಕಿಂಗ್‌ ನ್ಯೂಸ್‌ ಕೊಡುವುದಾಗಿ ಗುರುವಾರ ಟ್ವೀಟ್‌ ಮಾಡಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಫೇಸ್‌ಬುಕ್‌ ಲೈವ್‌ನಲ್ಲಿ ಕಾಣಿಸಿಕೊಂಡರಾದರೂ ಯಾವುದೇ ‘ನ್ಯೂಸ್‌ ಬ್ರೇಕ್‌’ ಮಾಡದೆ ಲೇವಡಿಗೆ ಗುರಿಯಾದರು.

ಟ್ವಿಟರ್‌ನಲ್ಲಿ ತಾಂತ್ರಿಕ ಸಮಸ್ಯೆ ಆಗಿದ್ದರಿಂದ ಮಾಹಿತಿ ಅಪ್‌ಲೋಡ್‌ ಮಾಡಲು ಸಾಧ್ಯವಾಗಿಲ್ಲ, ಫೇಸ್‌ಬುಕ್‌ ಲೈವ್‌ಗೆ ಬರುತ್ತಾರೆ ಎಂಬ ಮಾಹಿತಿಯನ್ನು ಸುದ್ದಿವಾಹಿನಿಗಳಿಗೆ ನೀಡಲಾಗಿತ್ತು.

ಯಡಿಯೂರಪ್ಪ ಏನು ‘ಬ್ರೇಕಿಂಗ್‌ ನ್ಯೂಸ್‌’ ಕೊಡಬಹುದು ಎಂಬ ಕುತೂಹಲದಿಂದ ಶಿವಮೊಗ್ಗದ ಅವರ ಮನೆಯ ಮುಂದೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಫೇಸ್‌ಬುಕ್‌ನಲ್ಲಿ ಅವರು ಮಾತನಾಡಿದ ಬಳಿಕ ಇದು ‘ಠುಸ್‌ ಪಟಾಕಿ’ ಎಂದು ಮಾತನಾಡಿಕೊಂಡ ಜನ ಮುಂದಿನ ದಾರಿ ಹಿಡಿದರು.

ಯಡಿಯೂರಪ್ಪ ಯಾವುದಾದರೂ ಹಗರಣ ಬಯಲು ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅವರು ಹಿಂದಿನ ಬಿಜೆಪಿ ಸರ್ಕಾರ ಮತ್ತು ಇಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಾಧನೆಗಳ ತುಲನಾತ್ಮಕ ಅಂಕಿ ಅಂಶಗಳನ್ನು ನೀಡಿದರು.

ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ತಮ್ಮತ್ತ ಸೆಳೆಯಲು ಈ ತಂತ್ರ ಅನುಸರಿಸಲಾಗಿತ್ತು. ‘ಬ್ರೇಕಿಂಗ್‌ ನ್ಯೂಸ್‌’ ಎಂದಾಕ್ಷಣ ಹಗರಣ ಬಯಲಿಗೆಳೆಯುತ್ತಾರೆ ಎಂದು ಅರ್ಥವಲ್ಲ. ಎರಡು ಸರ್ಕಾರಗಳ ಅವಧಿಯ ಸಾಧನೆಯ ಬಗ್ಗೆ ಜನರಿಗೆ ನೇರವಾಗಿ ಮಾಹಿತಿ ತಲುಪಿಸುವುದು ಮತ್ತು ಆ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಸಲು ಅನುವು ಮಾಡುವುದಷ್ಟೇ ಉದ್ದೇಶ ಎಂದು ಬಿಜೆಪಿ ಮೂಲಗಳು ಹೇಳಿವೆ.

ಆರ್ಥಿಕ ಕುಸಿತ’

ಬಿಜೆಪಿ ಆಡಳಿತದ ಅವಧಿಯಲ್ಲಿ ಆರ್ಥಿಕ ಬೆಳವಣಿಗೆ ದರ ಶೇ 10.5 ಇತ್ತು, ಸಿದ್ದರಾಮಯ್ಯ ಅವಧಿಯಲ್ಲಿ ಅದು ಶೇ 6.9ಕ್ಕೆ ಕುಸಿದಿದೆ. ರಾಜ್ಯ ಆದಾಯ ಬೆಳವಣಿಗೆ ದರ ಬಿಜೆಪಿ ಅವಧಿಯಲ್ಲಿ ಶೇ 68.44 ಇದ್ದದ್ದು, ಈಗ ಶೇ 55.37ಕ್ಕೆ ಕುಸಿದಿದೆ ಎಂದು ಯಡಿಯೂರಪ್ಪ ಹೇಳಿದರು.

ರಾಜ್ಯದಲ್ಲಿ ತಲಾ ಆದಾಯವೂ ಕುಸಿತವಾಗಿದೆ. ಬಿಜೆಪಿ ಅವಧಿಯಲ್ಲಿ ಶೇ 81.92 ಇತ್ತು. ಕಾಂಗ್ರೆಸ್‌ ಅವಧಿಯಲ್ಲಿ ಅದು ಶೇ 70.61ಕ್ಕೆ ಕುಸಿತವಾಗಿದೆ. ಶಿಕ್ಷಣದ ಮೇಲೆ ಹಣದ ಬಳಕೆ ಬಿಜೆಪಿ ಅವಧಿಯಲ್ಲಿ ಶೇ 14.96 ಇತ್ತು. ಈಗ ಅದು ಶೇ 10.14 ಇದೆ ಎಂದು ಅವರು ತಿಳಿಸಿದರು.

Comments are closed.