ಚಿಕ್ಕಬಳ್ಳಾಪುರ, ಏ.13- ಬಟ್ಟೆ ಒಗೆಯಲು ತೆರಳಿದ ನಾಲ್ವರು ಬಾಲಕಿಯರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ದಡಂಘಟ್ಟ ಗ್ರಾಮದಲ್ಲಿ ನಡೆದಿದೆ. ಮಲ್ಲಿಕಾ (12), ನಂದಿನಿ (11), ನಳಿನಿ (11), ಮುನಿರತ್ನ (12) ಮೃತ ದುರ್ದೈವಿಗಳಾಗಿದ್ದು, ನಿನ್ನೆ ಮಧ್ಯಾಹ್ನ ಬಟ್ಟೆ ಒಗೆಯಲು ಚಿಕ್ಕ ಕೆರೆಗೆ ತೆರಳಿದ್ದರು. ಈ ವೇಳೆ ಒಬ್ಬಾಕೆ ಕಾಲು ಜಾರಿ ನೀರಿನಲ್ಲಿ ಬಿದ್ದು ಮುಳುಗಿದ್ದಾಳೆ.
ಇದನ್ನು ಮತ್ತಿತರರು ಆಕೆಯನ್ನು ರಕ್ಷಿಸಲು ಹೋಗಿ ಒಬ್ಬರ ನಂತರ ಮತ್ತೊಬ್ಬರು ನೀರಿಗೆ ಧುಮುಕಿದ್ದಾರೆ. ಕೆಲ ಗ್ರಾಮಸ್ಥರು ಇದನ್ನು ನೋಡಿ ತಕ್ಷಣ ಸ್ಥಳೀಯರಿಗೆ ಮಾಹಿತಿ ನೀಡಿ ಬಾಲಕಿಯರ ರಕ್ಷಣೆಗೆ ಮುಂದಾದರೂ ಅದು ಪ್ರಯೋಜನವಾಗಲಿಲ್ಲ ಎನ್ನಲಾಗಿದೆ.
ತಡರಾತ್ರಿ ಕೆರೆಯಲ್ಲಿ ಮುಳುಗಿದ ಬಾಲಕಿಯರ ಗುರುತು ಪತ್ತೆಹಚ್ಚಿ ಅವರ ಪೋಷಕರಿಗೆ ಮಾಹಿತಿ ನೀಡಿದ ನಂತರ ಶವಕ್ಕಾಗಿ ಹುಡುಕಾಟ ನಡೆಸಲಾಗಿದೆ. ಇಂದು ಬೆಳಗ್ಗೆ ಎಲ್ಲಾ ಶವಗಳನ್ನು ಹೊರತೆಗೆಯಲಾಗಿದ್ದು, ಮಕ್ಕಳ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ ಕೃಷ್ಣಮೂರ್ತಿ, ದಿಬ್ಬೂರಹಳ್ಳಿ ಠಾಣೆಯಲ್ಲಿ ಪಿಎಸ್ಐ ರಾಘವೇಂದ್ರ ಮತ್ತಿತರರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕೈಗೊಂಡಿದ್ದಾರೆ.