ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಅವಕಾಶ ಕೊಡದಿದ್ದಕ್ಕೆ ಮಹಿಳೆಯೊಬ್ಬಳು ಪ್ರಧಾನಿ ನಿವಾಸದ ಆವರಣದಲ್ಲಿದ್ದ ಹೂ ಕುಂಡವನ್ನು ರಸ್ತೆಗೆಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬುಧವಾರ ಇಲ್ಲಿ ಘಟಿಸಿತು.
ದಕ್ಷಿಣ ಭಾಗದ ಬಾಗಿಲಿನ ಮೂಲಕ ಪ್ರಭಾವಿಯೊಬ್ಬರ ಜತೆ ಒಳನುಗ್ಗಿದ ಮಹಿಳೆ ಬಂಗಲೆ ಪ್ರವೇಶಕ್ಕೂ ಮುನ್ನ ಹಾಕಿದ್ದ ಅಡ್ಡಗಟ್ಟೆ ಭೇದಿಸಲು ಯತ್ನಿಸಿದಳು. ಇದನ್ನು ತಡೆದ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಅವರ ಮುಂದೆಯೆ ಹೂ ಕುಂಡವನ್ನು ರಸ್ತೆಗೆ ಎಸೆದಳು.
ತತ್ ಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಮಹಿಳೆಯನ್ನು ಸಂಸತ್ ಭವನ ರಸ್ತೆ ಪೊಲೀಸ್ ಠಾಣೆಗೆ ಕರೆದೊಯ್ದರು. ಎರಡು ದಿನದ ಹಿಂದೆ ದೆಹಲಿಯಲ್ಲಿ ಪ್ರಧಾನಿಯವರ ವಿರುದ್ಧ ಘೊಷಣೆ ಕೂಗುತ್ತಿದ್ದ ಮಹಿಳೆಯರ ವಿರುದ್ದ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದ ವಿಡಿಯೋ ದೇಶವ್ಯಾಪಿ ಪ್ರಚಾರ ಪಡೆದ ಬೆನ್ನಲ್ಲೆ ಮಹಿಳೆಯೊಬ್ಬಳ ಈ ರೀತಿಯ ವರ್ತನೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.