ಕನ್ನಡ ವಾರ್ತೆಗಳು

ಹೆದ್ದಾರಿಗೆ ಉರುಳಿದ ವಿದ್ಯುತ್ ಕಂಬ : ತಪ್ಪಿದ ಮಹಾ ದುರಂತ

Pinterest LinkedIn Tumblr

ullala_hightence_light_1

ಉಳ್ಳಾಲ,ಫೆ.04 :ಕಾಮಗಾರಿ ವೇಳೆ ಕ್ರೇನ್ ಮೂಲಕ ಅವೈಜ್ಞಾನಿಕವಾಗಿ ಮರ ಕಡಿದ ಕಾರಣ ಮರ ವಿದ್ಯುತ್‌ ತಂತಿ ಮೇಲೆ ಬಿದ್ದು ವಿದ್ಯುತ್‌ ಕಂಬ ಹೆದ್ದಾರಿಗೆ ಉರುಳಿದಾಗ ಖಾಸಗಿ ಬಸ್‌ ಸೇರಿದಂತೆ ಹಲವು ವಾಹನಗಳು ದೊಡ್ಡದೊಂದು ದುರಂತದಿಂದ ಪಾರಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್‌ನ ಬಳಿ ಬುಧವಾರ ಸಂಜೆ ಸಂಭವಿಸಿದೆ.

ತೊಕ್ಕೊಟ್ಟು ಫ್ಲೈಓವರ್ ಕಾಮಗಾರಿ ಮತ್ತು ಅಗಲೀಕರಣ ಕಾಮಗಾರಿ ತ್ವರಿತ ಗತಿಯಿಂದ ಸಾಗುತ್ತಿದ್ದು, ತೆರವು ಕಾರ್ಯಾಚರಣೆಗಳು ಭರದಿಂದ ನಡೆಯುತ್ತಿದೆ. ಬುಧವಾರ ಬೆಳಿಗ್ಗೆ ತೊಕ್ಕೊಟ್ಟು ನೇತಾಜಿ ಆಸ್ಪತ್ರೆ ಎದುರುಗಡೆಯಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸಿ, ನೂತನ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿತ್ತು

ಹೆದ್ದಾರಿ ವಿಸ್ತರಣೆ ಹಿನ್ನೆಲೆಯಲ್ಲಿ ಮೆಸ್ಕಾಂನವರು ವಿದ್ಯುತ್‌ ಕಂಬಗಳನ್ನು ಸ್ಥಳಾಂತರಿಸಿ ಮಧ್ಯಾಹ್ನದ ವೇಳೆಗೆ ಹೆದ್ದಾರಿ ಕಾಮಗಾರಿ ನಡೆಸುವ ಕಾರ್ಮಿಕರಿಗೆ ಬಿಟ್ಟು ಕೊಟ್ಟಿದ್ದರು. ಮಧ್ಯಾಹ್ನದ ಬಳಿಕ ರಸ್ತೆ ಬದಿಯಲ್ಲಿದ್ದ ದೊಡ್ಡದೊಂದು ಮಾವಿನ ಮರವನ್ನು ಕ್ರೇನ್‌ ಬಳಸಿ ತುಂಡರಿಸುವ ಕಾರ್ಯ ನಡೆಯುತ್ತಿತ್ತು. ಸಂಜೆ ವೇಳೆಗೆ ಮರ ತುಂಡಾಗಿ ನೇರವಾಗಿ ಹೆದ್ದಾರಿ ಮೇಲೆ ಬಿದ್ದಿದ್ದು, ಆ ಸಂದರ್ಭ ವಿದ್ಯುತ್‌ ತಂತಿಯೂ ಮರದೊಂದಿಗೆ ಹೆದ್ದಾರಿಗೆ ಉರುಳಿ ಬಿತ್ತು ಎನ್ನಲಾಗಿದೆ.

ullala_hightence_light_2

ullala_hightence_light_3

ಈ ವೇಳೆ ಕೇರಳ ಕಡೆಯಿಂದ ಟೂರಿಸ್ಟ್ ಬಸ್ಸೊಂದು ತಂತಿಯ ಮೇಲೆಯೇ ಚಲಿಸಿದಾಗ ಎರಡು ತಂತಿಗಳು ತಾಗಿ ಬೆಂಕಿಯ ಸ್ಪರ್ಶ ಉಂಟಾಯಿತು. ಕೂಡಲೇ ಸ್ಥಳೀಯರು ಹಾಗೂ ರಾ.ಹೆ. ಕಾಮಗಾರಿಯ ಕಾರ್ಮಿಕರು ಎರಡು ಕಡೆಯಿಂದ ಬರುವ ವಾಹನಗಳನ್ನು ತಡೆದು ನಿಲ್ಲಿಸಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದಾರೆ. ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದುದರಿಂದ ಬಸ್ಸಿನ ಮೇಲೆ ಬೀಳುತ್ತಿದ್ದರೆ, ದೊಡ್ಡ ದುರಂತವೇ ಸಂಭವಿಸುತಿತ್ತು. ಅಲ್ಲದೆ ಪಾದಚಾರಿಗಳು ತಂತಿ ಮೇಲೆ ಹೋಗುತ್ತಿದ್ದಲ್ಲಿ ಜೀವಹಾನಿಯೂ ಉಂಟಾಗುತಿತ್ತು. ಅದೃಷ್ಟವಶಾತ್‌ ಯಾವುದೇ ಹಾನಿ ಸಂಭವಿಸಿಲ್ಲ.

ಮರದೊಂದಿಗೆ ಬೆಂಕಿಯುಗುಳುತ್ತ ಹೆದ್ದಾರಿ ಬೀಳುತ್ತಿದ್ದ ವಿದ್ಯುತ್‌ ತಂತಿ ಬಸ್‌ಗೆ ಸ್ಪರ್ಶವಾಗುವ ಮೊದಲೇ ಎರಡು ತಂತಿಗಳು ಪರಸ್ಪರ ತಾಗಿದ್ದರಿಂದ ಟ್ರಿಪ್ಪರ್‌ ಆಫ್‌ ಆಗಿತ್ತು. ಹೆಚ್ಚಾಗಿ ತಂತಿಗಳು ನೆಲ ಸ್ಪರ್ಶವಾದಾಗ ಟ್ರಿಪ್ಪರ್‌ ಆಫ್‌ ಆಗುತ್ತದೆ. ಇಲ್ಲಿ ತಂತಿ ಬಸ್‌ಗೆ ಬೀಳುವ ಮೊದಲೇ ಸ್ಪರ್ಶಿಸಿದ್ದರಿಂದ ದೊಡ್ಡದೊಂದು ಅನಾಹುತ ತಪ್ಪಿದಂತಾಯಿತು.

ಘಟನೆಯ ಸಂದರ್ಭ ದ್ವಿಚಕ್ರ ವಾಹನ ಚಾಲಕರು ಬೈಕ್‌ ಬಿಟ್ಟು ಓಡಿದ ಘಟನೆಯೂ ನಡೆಯಿತು. ಬಳಿಕ ಹೆದ್ದಾರಿ ನಿರ್ಮಾಣ ಸಂಸ್ಥೆಯ ಕಾರ್ಮಿಕರು ಮತ್ತು ಸ್ಥಳೀಯರು ಹೆದ್ದಾರಿಯಲ್ಲಿ ಸಂಚಾರವನ್ನು ಕೆಲ ಕಾಲ ಸ್ಥಗಿತಗೊಳಿಸಿದರು. ಘಟನೆಯಿಂದ ಅರ್ಧ ಗಂಟೆಯ ಕಾಲ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಮೆಸ್ಕಾಂ ಅಧಿಕಾರಿಗಳು ಮತ್ತು ಲೈನ್‌ಮನ್‌ಗಳು ಘಟನಾ ಸ್ಥಳಕ್ಕೆ ತುರ್ತು ಧಾವಿಸಿ ವಿದ್ಯುತ್‌ ಕಂಬವನ್ನು ದುರಸ್ತಿ ನಡೆಸಿದರು. ಪೊಲೀಸರು , ಸಾರ್ವಜನಿಕರು, ಹೆದ್ದಾರಿ ಕಾರ್ಮಿಕರು, ಮೆಸ್ಕಾಂ ಸಿಬ್ಬಂದಿ ಸೇರಿತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Write A Comment