Uncategorized

ಮರುಕಳಿಸಲಿದೆ ಸೈಕಲ್ ಜಮಾನ

Pinterest LinkedIn Tumblr

cycle-trendಒಂದು ಕಾಲದಲ್ಲಿ ಮೋಟಾರ್ ಸೈಕಲ್‍ನ ಗಂಧ ಗಾಳಿಯೂ ಅರಿಯದ ನಗರ-ಹಳ್ಳಿ ಜನರು ಪ್ರಸ್ತುತ ದಿನಗಳಲ್ಲಿ ಮನೆಗೊಂದು ಬೈಕ್ ಅಥವಾ ತಲೆಗೊಂದು ಬೈಕ್ ಇಲ್ಲದಿದ್ದರೆ ಜೀವನ ದುಸ್ತರವೆನ್ನುವಂಥಹ ಸ್ಥಿತಿಯಲ್ಲಿದ್ದಾರೆ. ಜನಸಂಖ್ಯೆಗಿಂತ ಅತಿ ವೇಗವಾಗಿ ಮೋಟಾರ್ ಸೈಕಲ್‍ಗಳ ಹೆಚ್ಚಳ ದಿನದಿಂದ ದಿನಕ್ಕೆ ನಗರಗಳೇ ಇರಲಿ, ಹಳ್ಳಿಗಳೇ ಇರಲಿ ರಸ್ತೆಗಳು ಫುಲ್ ಬ್ಯುಸಿ! ಅಷ್ಟೇ ವೇಗವಾಗಿ ಭಾರತ ವಾಯುಮಾಲಿನ್ಯ, ಶಬ್ಧಮಾಲಿನ್ಯ ಹಾಗೂ ರಸ್ತೆ ಅಪಘಾತಗಳಲ್ಲಿ ಮುಂಚೂಣಿಯಲ್ಲಿದೆ.ಒಂದು ಕಾಲದಲ್ಲಿ ಬೆರಳೆಣಿಕೆಯಷ್ಟೇ ಬಸ್‍ಗಳು, ಬೈಕ್‍ಗಳು, ಕಾರ್‍ಗಳು ಇದ್ದವು. ಆದರೆ ಕಾಲ, ಜೀವನಶೈಲಿ, ಟ್ರೆಂಡ್ ಬದಲಾದಂತೆ ಜನಗಳು ಐಷಾರಾಮಿ ಜೀವನದತ್ತ ಮೊರೆಹೋದರು. ಪರಿಣಾಮ ಶತಾಯುಷಿಗಳಾಗಿ ಬದುಕುತ್ತಿದ್ದ ಜನಗಳು ಅನಾರೋಗ್ಯದಿಂದ, ಹೃದಯಾಘಾತದಿಂದ, ರಸ್ತೆ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ.
ಅಚ್ಚರಿಯೆಂದರೆ ಇತ್ತೀಚಿನ ದಿನಗಳಲ್ಲಿ ಜನರಿಗೆ ಕೆಟ್ಟಮೇಲೆ ಬುದ್ಧಿಬಂತು ಎಂಬಂತೆ ವಾಯುಮಾಲಿನ್ಯ, ಅನಾರೋಗ್ಯಕ್ಕೆ ಮೂಲವಾದ ಮೋಟಾರು ಸೈಕಲ್ ಕಾರುಗಳನ್ನು ಮೂಲೆಗೆ ನಿಲ್ಲಿಸಿ ಸೈಕಲ್ ಕೊಂಡುಕೊಳ್ಳುತ್ತಿದ್ದಾರೆ. ಕಾರಣವಿಷ್ಟೇ ಒಂದು ಜಮಾನದಲ್ಲಿ ಭಾರತ ದೇಶ ಸೇರಿದಂತೆ ಇತರೆ ದೇಶಗಳಲ್ಲಿನ ಜನರು ಆರೋಗ್ಯದ ಮತ್ತು ಪರಿಸರ ಸ್ನೇಹಿಯಾದ ಸೈಕಲ್ಲನ್ನು ಹಿಂದಿನಿಂದ ಬಳಸುತ್ತಾ ಬಂದಿದ್ದರು. ಇದರ ಪರಿಣಾಮ ಜನರು ಶಕ್ತಿಯುತವಾಗಿ, ಆರೋಗ್ಯದಿಂದ ಶತಾಯುಷಿಗಳಾಗಿ ಬಾಳಿ ಬದುಕಿರುವುದನ್ನು ನಾವು ನೋಡಿದ್ದೇವೆ. ಆದರೆ ಕೆಲ ಬುದ್ಧಿಜೀವಿ ಶ್ರೀಮಂತರೂ ಸೈಕಲ್‍ಗಳ ಮಹತ್ವ ಅರಿತು ಇಂದಿಗೂ ಸಿಟಿಗಳಲ್ಲಿ ಸೈಕಲ್ ಏರಿ ಆಫೀಸ್‍ಗೆ ಹೋಗುವವರಿದ್ದಾರೆ.

*ಸೈಕಲ್‍ನಿಂದ ಆರೋಗ್ಯ ಹೇಗೆ?
ಸೈಕಲ್ ಪರಿಸರ ಸ್ನೇಹಿ ಅಷ್ಟೇ ಅಲ್ಲ, ನಿಯಮಿತವಾಗಿ ಸೈಕಲ್ ತುಳಿಯುವುದರಿಂದ ನಮ್ಮ ದೇಹದ ಇಡೀ ಅಂಗಾಂಗಗಳ ಮೇಲೆ ಮಹತ್ವದ ಪರಿಣಾಮ ಬೀರುತ್ತದೆ ಎಂದು ಆಕ್ಸ್‍ಫರ್ಡ್ ಅಧ್ಯಯನಗಳ ವರದಿ ತಿಳಿಸಿದೆ. ದೇಹದ ಮಾಂಸಖಂಡಗಳು, ಸ್ನಾಯುಗಳು ಬಲಗೊಳ್ಳುವುದರ ಜೊತೆಗೆ ದೇಹದ ಎಲ್ಲಾ ಭಾಗಗಳಿಗೂ ಸುಗಮ ರಕ್ತಸಂಚಾರವಾಗಿ ಹೃದಯ ಆರೋಗ್ಯದಿಂದ ಕಾರ್ಯನಿರ್ವಸಲು ಸಹಕಾರಿಯಾಗುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ ಶೇಖರಣೆ, ಹೃದಯಾಘಾತಗಳಂತಹ ಮಾರಣಾಂತಿಕ ತೊಂದರೆಗಳಿಂದ ಪಾರಾಗಲು ದಿನಕ್ಕೆ ಅರ್ಧಗಂಟೆ ಸೈಕಲ್‍ರೈಡ್ ಸಾಕು. ವಯಸ್ಸಿನ, ಲಿಂಗಭೇದವಿಲ್ಲದೆ 4 ವರ್ಷದ ಮಕ್ಕಳಿಂದ ಹಿಡಿದು ನಾಳೆಯೋ, ನಾಡಿದ್ದೋ ಸಾಯುವ ಮುದುಕರು ಸಲೀಸಾಗಿ ಸೈಕಲ್ ರೈಡ್ ಮಾಡಬಹುದು.

*ಟ್ರೆಂಡ್ ಆಗಿ ಬದಲಾದ  ಸೈಕಲ್ ಸವಾರಿ
ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗಿದ್ದ ಸೈಕಲ್‍ಗಳು ನಿಧಾನವಾಗಿ ಸಿಟಿಗಳಲ್ಲಿ, ಹಳ್ಳಿಗಳಲ್ಲಿ ರಸ್ತೆಗಿಳಿಯುತ್ತಿವೆ. ವಿಶ್ವದ ಪ್ರತಿಷ್ಠಿತ ಖಾಸಗಿ ಕಂಪೆನಿಗಳು ತಮ್ಮ ಕ್ಯಾಂಪಸ್ ಆವರಣದಲ್ಲಿ ಸೈಕಲ್‍ಗಳ ಬಳಕೆಯನ್ನು ಕಡ್ಡಾಯಗೊಳಿಸಿದೆ. ಅಷ್ಟೇ ಏಕೆ ಕೆಲವು ರಾಷ್ಟ್ರಗಳ ಪ್ರತಿಷ್ಠಿತ ನಗರಗಳಲ್ಲಿ ಸೈಕಲ್‍ಗಳಿಗಷ್ಟೆ ಅನುಮತಿಯನ್ನು ನೀಡಿದೆ. ಈ ರೀತಿಯಾಗಿ ಆರೋಗ್ಯದ ದೃಷ್ಟಿಯಿಂದ ಐಟಿಬಿಟಿ ಕಂಪೆÀನಿಗಳ, ಕೆಲ ಸಂಘ ಸಂಸ್ಥೆಗಳು, ಮಾಲಿನ್ಯ ನಿಯಂತ್ರಣ, ಆರೋಗ್ಯ ಹಿತದೃಷ್ಟಿಯಿಂದ ಸೈಕಲ್  ಮೊರೆಹೋಗುತ್ತಿದ್ದಾರೆ. ಅದರಂತೆ ಯುವ ಜನರು ಸೈಕಲ್ ಸವಾರಿಯನ್ನು ಪ್ಯಾಷನ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ಜೊತೆಗೆ ಹಾಲಿವುಡ್ ಮತ್ತು ಬಾಲಿವುಡ್ ಸೆಲೆಬ್ರೆಟಿಗಳು ಸೈಕಲ್‍ನ ಉಪಯೋಗಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ತೊಡಗಿದ್ದಾರೆ.

* ಸೈಕಲ್ ಸವಾರಿ ಎಕನಾಮಿಕಲೀ ಗುಡ್:
ಸೈಕಲ್‍ನ ಬಳಕೆಯಿಂದ ಆರೋಗ್ಯ, ಮಾಲಿನ್ಯ ನಿಯಂತ್ರಣ ಅಷ್ಟೇ ಅಲ್ಲ ದೇಶದ ಆರ್ಥಿಕ ಮುಗ್ಗಟ್ಟನ್ನು ತಡೆಯುವ, ಸಮತೋಲನ ಕಾಯ್ದುಕೊಳ್ಳಬಹುದಾಗಿದೆ. ಮುಂದೊಂದು ದಿನ ಅತಿಯಾದ ಮೋಟಾರ್ ವಾಹನಗಳ ಬಳಕೆಯಿಂದ ದೇಶಕ್ಕೆ ಅಧೋಗತಿ ಒದಗುವುದು ಸುಳ್ಳೇನಲ್ಲ. ಈಗಾಗಲೇ ಬಂಗಾರದ ಬೆಲೆಯನ್ನು ಹಿಂದಿಕ್ಕಿ, ಪೆಟ್ರೋಲ್ ಬೆಲೆ ನಾಗಾಲೋಟದಲ್ಲಿ ಸಾಗುತ್ತಿದೆ. ನಮ್ಮ ದೇಶಕ್ಕೆ ಆಮದಾಗುತ್ತಿರುವ ವಸ್ತುಗಳಲ್ಲಿ ಪೆಟ್ರೋಲ್ ಮೊದಲನೆಯದು. ಈ ಪೆಟ್ರೋಲ್‍ನಿಂದ ದೇಶಕ್ಕೆ ಮುಂದೆ ಒದಗಿಬರಬಹುದಾದ ಸಮಸ್ಯೆಗಳು ಸರ್ಕಾರಕ್ಕೆ ಕಾಣುತ್ತಿಲ್ಲ.  ಅರಬ್ ದೇಶಗಳಲ್ಲಿ ಈಗಾಗಲೇ ತೈಲ ಸಂಗ್ರಹಣೆಯಲ್ಲಿ ಬಿಕ್ಕಟ್ಟು ಉಂಟಾಗಿದ್ದು, ಇತರ ರಾಷ್ಟ್ರಗಳಿಗೆ ತೈಲ ಸರಬರಾಜು ಮಾಡುವಲ್ಲಿ ವಿಫಲವಾಗುತ್ತಿವೆ. ಈ ಸಂದರ್ಭದಲ್ಲಿ ಎಲ್ಲಾ ರಾಷ್ಟ್ರಗಳು ಎಚ್ಚೆತ್ತುಕೊಳ್ಳದಿದ್ದರೆ ವಿಶ್ವದ ಜನರು ತಮ್ಮ ವಾಹನಗಳಿಗೆ ಪೆಟ್ರೋಲ್ ಹೊಂಚಲಾಗದೆ, ಸೀಮೆಎಣ್ಣೆ ಹಾಕಿ ಸುಡುವ ಕಾಲ ದೂರವಿಲ್ಲ.
ಆದ್ದರಿಂದ ಸರ್ಕಾರಗಳು ಈಗಿನಿಂದಲೇ ಎಚ್ಚೆತ್ತುಕೊಂಡು ಸಂಘ ಸಂಸ್ಥೆಗಳ ಜೊತೆ ಕೈಜೋಡಿಸಿ, ಸೈಕಲ್‍ಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಿದೆ. ಇದರಿಂದ ಅರ್ಧದಷ್ಟು ಮುಂದೆ ಒದಗಬಹುದಾದ ಸಮಸ್ಯೆಗಳನ್ನು ಹತ್ತಿಕ್ಕಲು ಸಹಕಾರಿಯಾಗುತ್ತದೆ.
ಶಬ್ದಮಾಲಿನ್ಯ, ವಾಯುಮಾಲಿನ್ಯ, ರಸ್ತೆ ಅಪಘಾತಗಳು, ಆರ್ಥಿಕ ಸಮಸ್ಯೆಗಳು ಕಡಿಮೆ ಆಗುವುದರಲ್ಲಿ ಸಂದೇಹವಿಲ್ಲ. ಇಲ್ಲಿ ಬಡವ-ಬಲ್ಲಿದ ಎನ್ನದೆ ತನ್ನ ಅಹಂ, ಪ್ರಸ್ಟೀಜ್‍ಗಳನ್ನೆಲ್ಲಾ ಮೂಟೆ ಕಟ್ಟಿ ಮನೆಯಲ್ಲಿರಿಸಿ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಹೊತ್ತು ಸೈಕಲ್ ಏರಿ ರಸ್ತೆಗಿಳಿದಾಗ ಮಾತ್ರ ದೇಶದ ಆರ್ಥಿಕ ಸುಭಿಕ್ಷತೆ, ಆರೋಗ್ಯಯುಕ್ತ ಪರಿಸರ ನಿರ್ಮಾಣ ಸಾಧ್ಯ.

* ಒಮ್ಮೆ ಮನಸ್ಸು ಮಾಡಿನೋಡಿ
ದೊಡ್ಡವರು, ಚಿಕ್ಕವರು, ಯುವಕರು, ಯುವತಿಯರು ಎಂಬ ಭೇದವಿಲ್ಲದೇ ನಿಮ್ಮೆಲ್ಲಾ ಅಹಂನ್ನು ಬದಿಗಿಟ್ಟು ಒಂದು ಸೈಕಲ್ ಕೊಂಡುಕೊಳ್ಳಿ, ನಿಮ್ಮ ಪ್ರೆಸ್ಟೀಜ್‍ಗೆ ಹಾನಿಯಾಗದಿರುವ ಜಾಗದಲ್ಲಾದರೂ ಸೈಕಲ್ ಓಡಿಸಲು ಪ್ರಯತ್ನಿಸಿ. ಒಂದು ನಗರವನ್ನು ಬದಲಾಯಿಸಬೇಕಾದರೆ ಅದು ಒಬ್ಬರಿಂದ ಮಾತ್ರ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಅದಕ್ಕೆ ಕೈ ಜೋಡಿಸಲೇಬೇಕು. ನಿಮ್ಮ ಆರೋಗ್ಯ, ಐಶ್ವರ್ಯ ಹೆಚ್ಚಿಸಿಕೊಳ್ಳುವುದರಿಂದ ನಗರದಲ್ಲಿನ ಹಲವಾರು ಸಮಸ್ಯೆಗಳನ್ನು ಕಡಿಮೆ ಮಾಡಬಹುದೆಂದಾದರೆ ನೀವೇಕೆ ಒಂದು ಸೈಕಲ್ ಕೊಳ್ಳಬಾರದು?. ನೆನಪಿಡಿ. ಎರಡು ಕಿ.ಮೀ ದೂರ ಇರುವ ಆಫೀಸ್‍ಗೆ ಹೋಗುವುದಕ್ಕಾಗಿ ಬೈಕ್, ಕಾರ್ ಕೊಳ್ಳಬೇಕು ಎಂದು ಯೋಚಿಸುತ್ತಿದ್ದರೆ ಒಮ್ಮೆ ಸೈಕಲ್ ಕೊಳ್ಳುವ ಧೈರ್ಯಮಾಡಿ. ಎಲ್ಲಾ ್ಲಕೆಲಸಕ್ಕೂ ಸೈಕಲ್ ಬಳಸಲು ಸಾಧ್ಯವಾಗುವುದಿಲ್ಲ. ಆದರೆ ಚಿಕ್ಕ ಪುಟ್ಟ ಓಡಾಟಗಳಿಗಾದರೂ ಸೈಕಲ್ ಸಾವಾರಿ ಸೇಫ್ ಅಲ್ಲವೇ? ಇನ್ನು ಕಾಲೇಜ್‍ಗೆ ಹೋಗುವ ಯುವಕ-ಯುವತಿಯರು ಬೈಕ್ ಬದಲು ಸೈಕಲ್ ಬಳಸಿದರೆ ತಪ್ಪೇನು? ನಿಮ್ಮ ಬಗ್ಗೆ ಮತ್ತೊಬ್ಬರು ಏನು ಮಾತನಾಡಿಕೊಳ್ಳುತ್ತಾರೆ ಎನ್ನುವುದು ಮುಖ್ಯವಲ್ಲ. ನಿಮ್ಮ ಆರೋಗ್ಯ, ನಿಮ್ಮ ಜೇಬು ಗಟ್ಟಿಯಾಗಿರುವುದು ಮುಖ್ಯ.

Write A Comment